
ಯಾದಗಿರಿ, ಅಕ್ಟೋಬರ್ 15: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಅನ್ನಭಾಗ್ಯ (Anna Bhagya) ಅಕ್ಕಿ ಅಕ್ರಮ ದಂಧೆಗೆ ಹೊಸ ತಿರುವು ಸಿಕ್ಕಿದೆ. ಸಿಐಡಿ ಅಧಿಕಾರಿಗಳು ಹತ್ತಿ ಮಿಲ್‌ನ ಗೋದಾಮಿನಲ್ಲಿ ಸುಮಾರು 5 ಟನ್ ಪಡಿತರ ಅಕ್ಕಿ ದಾಸ್ತಾನು ಪತ್ತೆ ಮಾಡಿದ್ದಾರೆ. ಇದರಿಂದ ಅಕ್ರಮ ಅಕ್ಕಿ ದಂಧೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ.
ಹಿಂದಿನ ತಿಂಗಳು ಗುರುಮಠಕಲ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ ಬಾಲಾಜಿ ರೈಸ್‌ಮಿಲ್‌ಗಳಲ್ಲಿ 1.21 ಕೋಟಿ ರೂ. ಮೌಲ್ಯದ 3,985 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ತಂಡ ತನಿಖೆಗಾಗಿ ಸ್ಥಳಕ್ಕೆ ತೆರಳಿತ್ತು. ಪರಿಶೀಲನೆ ವೇಳೆ ಲಕ್ಷ್ಮೀ ತಿಮ್ಮಪ್ಪ ಕಾಟನ್ ಮಿಲ್‌ನ ಗೋದಾಮಿನೊಳಗೆ ಶಂಕಾಸ್ಪದ ಚೀಲಗಳನ್ನು ಕಂಡು ಒಳನುಗ್ಗಿದ್ದ ತಂಡ, ಅಲ್ಲಿ ಪಡಿತರ ಅಕ್ಕಿಯ ಗೋಣಿ ಚೀಲಗಳನ್ನು ಪತ್ತೆಹಚ್ಚಿದೆ.
ಕಳ್ಳಸಾಗಣೆದಾರರು ರೈಸ್ ಮಿಲ್‌ಗಳಲ್ಲಿ ದಾಳಿ ನಡೆಯಬಹುದು ಎಂಬ ಭೀತಿಯಿಂದ, ಹತ್ತಿ ಮಿಲ್‌ಗಳ ಗೋದಾಮುಗಳಲ್ಲಿ ಅಕ್ಕಿ ಅಡಗಿಸಿಟ್ಟಿದ್ದರೆಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಸಿಐಡಿ ತಂಡ ಸ್ಥಳೀಯ ಪೊಲೀಸ್ ಹಾಗೂ ಆಹಾರ ಇಲಾಖೆಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಅಕ್ರಮ ದಂಧೆಯ ವ್ಯಾಪ್ತಿ ದೊಡ್ಡ ಮಟ್ಟದಲ್ಲಿದ್ದು, ತನಿಖೆ ಆಳವಾದಂತೆ ಅನ್ನಭಾಗ್ಯ ಅಕ್ರಮದ ನಂಟುಗಳು ಬಯಲಾಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? ‘ಟಿವಿ9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್ಐಆರ್
ಎರಡು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಎಪಿಎಂಸಿ ಗೋದಾಮಿನಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು. ಸರ್ಕಾರಿ ಗೋದಾಮಿನಲ್ಲಿದ್ದ ಅಕ್ಕಿಯನ್ನು ‘ಲಾಲ್’ ಹೆಸರಿನ ಬ್ರ್ಯಾಂಡ್ನ ಚೀಲಕ್ಕೆ ತುಂಬುತ್ತಿದ್ದ ಮಾಹಿತಿ ತಿಳಿದು ಕೆಲ ಸಂಘಟನೆ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ, ದುಬೈ ವಿಳಾಸ ಇರುವ ಸಾವಿರಾರು ಚೀಲಗಳಲ್ಲಿ ಅಕ್ಕಿ ತುಂಬುತ್ತಿರುವುದು ಪತ್ತೆಯಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.