ಒಂದು ಹನಿ ನೀರು ಹರಿಯದೆ ಪಾಳು ಬಿದ್ದಿರುವ ಕಾಲುವೆಗಳು; ಕೃಷಿಗೆ ನೀರು ಸಿಗದೆ ರೈತರು ಕಂಗಾಲು
ವಡಗೇರ ತಾಲೂಕಿನ ಹತ್ತಾರು ಹಳ್ಳಿಯ ರೈತರ ಜಮೀನುಗಳು ಕಾಲುವೆಯ ಕೊನೆ ಭಾಗಕ್ಕೆ ಬರುತ್ತವೆ. ಆದರೆ ಇಲ್ಲಿವರೆಗೆ ಕೊನೆ ಭಾಗಕ್ಕೆ ಹನಿ ನೀರು ಹರಿದು ಬಂದಿಲ್ಲ. ಬದಲಿಗೆ ಕಾಲುವೆಗಳ ಸ್ಥಿತಿ ಮಾತ್ರ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಎಲ್ಲೆಂದರಲ್ಲಿ ಕಾಲುವೆಗಳು ಒಡೆದು ಹೋಗಿದ್ದು, ರಿಪೇರಿ ಮಾಡುವ ಗೋಚಿಗೆ ಅಧಿಕಾರಿಗಳು ಹೋಗಿಲ್ಲ.
ಯಾದಗಿರಿ: ಸರ್ಕಾರ ಹತ್ತಾರು ವರ್ಷಗಳ ಹಿಂದೆ ಆ ಭಾಗದ ಅನ್ನದಾತರಿಗೆ ಬೆಳೆ ಬೆಳೆಯುವುದ್ದಕ್ಕಾಗಿ ನೀರು ಸಿಗಲಿ ಎನ್ನುವ ಕಾರಣಕ್ಕೆ ಕಾಲುವೆಗಳನ್ನು ನಿರ್ಮಾಣ ಮಾಡಿದೆ. ಆದರೆ ಕಾಲುವೆಗಳು ನಿರ್ಮಾಣ ಮಾಡಿದ್ದೆ ಸರಿ ಇಲ್ಲಿವರೆಗೆ ಆ ಭಾಗದ ರೈತರು ಕಾಲುವೆಗಳಿಂದ ಹನಿ ನೀರು ಕಂಡಿಲ್ಲ. ಇನ್ನು ಎಲ್ಲೆಂದರಲ್ಲಿ ಕಾಲುವೆಗಳು ಒಡೆದು ಹೋಗಿದ್ದು, ಮಣ್ಣು ತುಂಬಿ ಗಿಡ ಗಂಟಿಗಳು ಬೆಳೆದು ನಿಂತಿವೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ಹತ್ತಾರು ವರ್ಷಗಳ ಹಿಂದೆ ಜಿಲ್ಲೆಯ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಿಂದ ಜಿಲ್ಲೆಯ ರೈತರಿಗೆ ನೀರು ಸಿಗಲಿ ಎನ್ನುವ ಕಾರಣಕ್ಕೆ ಕೋಟ್ಯಾಂತರ ರೂ. ಖರ್ಚು ಮಾಡಿ ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ನಾರಾಯಣಪುರ ಎಡದಂಡೆ ಕಾಲುವೆಗೆನೋ ನೀರು ಹರಿದು ಬರುತ್ತಿದೆ. ಇದೇ ನೀರಿನಿಂದ ಲಕ್ಷಾಂತರ ರೈತರು ಬೆಳೆ ಕೂಡ ಬೆಳೆದುಕೊಳ್ಳುತ್ತಿದ್ದಾರೆ. ಆದರೆ ಕೊನೆ ಭಾಗದ ರೈತರಿಗೆ ಮಾತ್ರ ಇಲ್ಲಿವರೆಗೆ ಹನಿ ನೀರು ಸಿಕ್ಕಿಲ್ಲ.
ವಡಗೇರ ತಾಲೂಕಿನ ಹತ್ತಾರು ಹಳ್ಳಿಯ ರೈತರ ಜಮೀನುಗಳು ಕಾಲುವೆಯ ಕೊನೆ ಭಾಗಕ್ಕೆ ಬರುತ್ತವೆ. ಆದರೆ ಇಲ್ಲಿವರೆಗೆ ಕೊನೆ ಭಾಗಕ್ಕೆ ಹನಿ ನೀರು ಹರಿದು ಬಂದಿಲ್ಲ. ಬದಲಿಗೆ ಕಾಲುವೆಗಳ ಸ್ಥಿತಿ ಮಾತ್ರ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಎಲ್ಲೆಂದರಲ್ಲಿ ಕಾಲುವೆಗಳು ಒಡೆದು ಹೋಗಿದ್ದು, ರಿಪೇರಿ ಮಾಡುವ ಗೋಚಿಗೆ ಅಧಿಕಾರಿಗಳು ಹೋಗಿಲ್ಲ. ಇಲ್ಲಿವರೆಗೆ ನೀರೆ ಬರಲ್ಲ ಅಂದ ಮೇಲೆ ಕಾಲುವೆಗಳು ರಿಪೇರಿ ಮಾಡಿಯಾದರೂ ಏನು ಮಾಡೋದು ಅಂತ ಅಧಿಕಾರಿಗಳು ಹಾಯಾಗಿದ್ದಾರೆ. ಇತ್ತ ರೈತರು ನಮ್ಮ ಜಮೀನಿಗೆ ಈ ವರ್ಷ ನೀರು ಸಿಗುತ್ತದೆ ಮುಂದಿನ ವರ್ಷ ನೀರು ಸಿಗುತ್ತದೆ ಎಂದು ಕಾಯುತ್ತಿದ್ದಾರೆ ಎಂದು ರೈತ ಫಕೀರ್ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ವಡಗೇರ ತಾಲೂಕಿನ ಐಕೂರು, ಕ್ಯಾತನಾಳ್, ಕಾಡಂಗೇರ, ತುಮಕುರು, ಕುರಕುಂದ ಸೇರಿದಂತೆ ಹತ್ತಾರು ಹಳ್ಳಿಯ ರೈತರ ಜಮೀನುಗಳತ್ತ ಕಾಲುವೆ ಹೋಗಿದೆ. ಆದರೆ ನೀರು ಮಾತ್ರ ಇನ್ನು ಕಂಡಿಲ್ಲ. ಇನ್ನು ಕಾಲುವೆಗಳು ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಕಾಲುವೆಗಳು ಎಲ್ಲಂದರಲ್ಲಿ ಒಡೆದು ಹೋಗಿವೆ. ಕಾಲುವೆಯಲ್ಲಿ ಮಣ್ಣು ತುಂಬಿಕೊಂಡಿದ್ದು, ಎಲ್ಲಂದರಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.
ಇನ್ನು ಕಾಲುವೆಗಳಿಗೆ ಒಂದು ವೇಳೆ ನೀರು ಬಿಟ್ಟರು ರೈತರ ಜಮೀನುಗಳಿಗೆ ಮುಟ್ಟುವುದಿಲ್ಲ. ಬದಲಿಗೆ ಮಧ್ಯದಲ್ಲೇ ನೀರು ಪೋಲಾಗಿ ಹೋಗುತ್ತವೆ. ಇನ್ನು ರೈತರು ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಎನ್ನುವುದು ರೈತರ ಆರೋಪವಾಗಿದೆ. ಇನ್ನು ಕಳೆದ ಹತ್ತಾರು ವರ್ಷಗಳ ಹಿಂದೆ ಈ ಭಾಗಕ್ಕೆ ಕಾಲುವೆಗಳು ಬಂದಾಗ ರೈತರು ಸಾಕಷ್ಟು ಖುಷಿ ಆಗಿದ್ದರು. ನಮ್ಮ ಭಾಗಕ್ಕೂ ಜಲಾಶಯದಿಂದ ನೀರು ಬರುತ್ತದೆ. ನಾವು ಕೂಡ ನೀರಾವರಿ ಬೆಳೆಯನ್ನು ಬೆಳೆಯಬಹುದು ಎಂದು ಅಂದುಕೊಂಡಿದ್ದರು. ಆದರೆ ರೈತರು ಕಂಡ ಕನಸು ಕನಸಾಗೇ ಉಳಿದುಕೊಂಡಿದೆ. ಇನ್ನು ಅನಿವಾರ್ಯವಾಗಿ ಸಾಂಪ್ರಾದಾಯಿಕ ಬೆಳೆಗಳಾದ ಹತ್ತಿ, ತೊಗರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಳೆ ಬಂದರೆ ಬೆಳೆ ಇಲ್ಲಂದರೆ ಬರಗಾಲ ಎನ್ನುವ ಸ್ಥಿತಿ ವಡಗೇರ ಭಾಗದ ರೈತರದ್ದಾಗಿದೆ.
ಒಟ್ಟಿನಲ್ಲಿ ರೈತರ ಹೆಸರಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಸರ್ಕಾರ ಕಾಲುವೆಗಳನ್ನು ನಿರ್ಮಾಣ ಮಾಡಿದೆ. ಆದರೆ ಅದೇ ಸರ್ಕಾರ ಹಾಗೂ ಸರ್ಕಾರದ ಭಾಗವಾಗಿರುವ ಅಧಿಕಾರಿಗಳು ಅನ್ನದಾತರಿಗೆ ನೀರು ತಲುಪಿಸುವಂತ ಕೆಲಸ ಮಾತ್ರ ಮಾಡದೆ ಇರುವುದಕ್ಕೆ ರೈತರಿಗೆ ಬೇಸರ ತಂದಿದೆ.
ವರದಿ: ಅಮೀನ್ ಹೊಸುರ್
ಇದನ್ನೂ ಓದಿ: ಆರ್ ಆರ್ ನಗರನಲ್ಲಿ ರಾಜಾಕಾಲುವೆಯಿಂದ ನುಗ್ಗಿದ ನೀರು ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ಗಳು ಕೊಚ್ಚಿ ಹೋಗುವಂತೆ ಮಾಡಿದೆ!
ನೀರು ಪೋಲಾಗುವ ಬಗ್ಗೆ ದೂರು ಹೇಳಿದಕ್ಕೆ ವಿದ್ಯಾರ್ಥಿಗಳಿಗೆ ಧಮ್ಕಿ, ಗುಬ್ಬಿ ಪ.ಪಂ. ಮುಖ್ಯಾಧಿಕಾರಿ ಮೇಲೆ ದೂರು ದಾಖಲು