ಯಾದಗಿರಿ ಜಿಲ್ಲೆಯಾದ್ಯಂತ ನಿರಂತರ ಮಳೆ; ಹಾಳಾಯ್ತು ಬಂಗಾರದಂತ ತೊಗರಿ ಬೆಳೆ
ಆ ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಮಳೆ ನಿಂತರೂ ಮಳೆಯಿಂದಾಗಿ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿವೆ. ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬಂಗಾರದಂತ ಬೆಳೆ ನೀರಿನಿಂದ ಹಾಳಾಗಿ ಹೋಗಿದೆ. ಅತಿಯಾದ ತೇವಾಂಶದಿಂದ ತೊಗರಿ ಬೆಳೆಗೆ ನೆಟೆ ರೋಗ ಆವರಿಸಿಕೊಂಡಿದೆ. ಸಾಲ ಶೂಲ ಮಾಡಿ ಬೆಳೆ ಬೆಳೆದ ರೈತರು ಕಂಗಲಾಗಿದ್ದಾರೆ.
ಯಾದಗಿರಿ, ಅ.07: ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಯಾದಗಿರಿ(Yadgiri) ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಅದರಲ್ಲೂ ಈ ಮಳೆಯಿಂದಾಗಿ ರೈತಾಪಿ ವರ್ಗ ಅಕ್ಷರಶಃ ನಲುಗಿ ಹೋಗಿದೆ. ಕಳೆದ ವರ್ಷ ಭೀಕರ ಬರಕ್ಕೆ ತುತ್ತಾಗಿ ಬೆಳೆ ಕಳೆದುಕೊಂಡ್ರೆ, ಈ ಬಾರಿ ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಳ್ಳುವಂತಾಗಿದೆ. ಹೌದು, ಜಿಲ್ಲೆಯ ರೈತರು ಬೆಳೆದ ತೊಗರಿ ಬೆಳೆ ಮಳೆಯಿಂದ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.
ತೊಗರಿ ಬೆಳೆಗೆ ಹರಡಿದ ನೆಟೆ ರೋಗ
ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನಾದ್ಯಂತ ರೈತರು ಅತಿ ಹೆಚ್ಚಾಗಿ ತೊಗರಿಯನ್ನ ಬೆಳೆಯುತ್ತಾರೆ. ನೀರಾವರಿ ವಂಚಿತ ಪ್ರದೇಶವಾಗಿದ್ದರಿಂದ ಮಳೆ ನೀರಿನ ಆಶ್ರಯದಿಂದ ರೈತರು ತೊಗರಿ ಬೆಳೆಯನ್ನ ಬೆಳೆಯುತ್ತಾರೆ. ಆದ್ರೆ, ಮಳೆಯಿಂದಾಗಿ ಇದೆ ತೊಗರಿ ಬೆಳೆ ಹಾಳಾಗಿ ಹೋಗಿದೆ. ಅತಿಯಾದ ತೇವಾಂಶದಿಂದ ಬೆಳೆ ಜಮೀನಿನಲ್ಲೇ ಒಣಗಿ ಹೋಗುತ್ತಿದೆ. ನಿರಂತರವಾಗಿ ಮಳೆ ಸುರಿದ ಕಾರಣಕ್ಕೆ ತೊಗರಿ ಬೆಳೆಯ ಮಧ್ಯೆ ಎರಡು ವಾರಗಳ ಕಾಲ ಮಳೆ ನೀರು ನಿಂತುಕೊಂಡಿತ್ತು. ಮಳೆ ನೀರು ನಿಂತ ಕಾರಣಕ್ಕೆ ಭೂಮಿಗೆ ತೇವಾಂಶ ಹೆಚ್ಚಾಗಿದೆ. ಹೀಗಾಗಿ ತೊಗರಿ ಗಿಡಗಳ ಬೇರುಗಳು ಕೊಳೆತು ಹೋಗಿವೆ. ಇದರಿಂದಾಗಿಯೇ ತೊಗರಿ ಬೆಳೆ ಕ್ರಮೇಣವಾಗಿ ಒಣಗುತ್ತಿದ್ದು ಬೆಳೆಗೆ ನೆಟೆ ರೋಗ ಆವರಿಸಿಕೊಂಡಿದೆ.
ಇದನ್ನೂ ಓದಿ:ಮಳೆ, ಗಾಳಿಗೆ ನೆಲಕಚ್ಚಿದ ಗೋವಿನಜೋಳ! ಬೆಳೆ ನೋಡಿ ಕಣ್ಣೀರು ಹಾಕಿದ ರೈತರು
ಬಂಗಾರದಂತ ಬೆಳೆ ನಾಶ
ಸಧ್ಯ ಹೂವು ಬಿಟ್ಟು, ಕಾಯಿ ಕಟ್ಟುವ ಹೊತ್ತು. ಆದ್ರೆ, ಬೆಳೆ ಮಾತ್ರ ಮಳೆ ನೀರಿನಿಂದ ಕುಂಠಿತವಾಗಿದೆ. ಮನುಷ್ಯನೆತ್ತರ ಬೆಳೆದು ನಿಲ್ಲಬೇಕಿದ್ದ ತೊಗರಿ ಗಿಡಗಳು ಮೊಣಕಾಲುದ್ದು ಬೆಳೆದು ನಿಂತಿವೆ. ಇರುವಂತಹ ಬೆಳೆಯೂ ಸಹ ಹಾಳಾಗಿ ಹೋಗಿದೆ. ನೆಟೆ ರೋಗ ಆವರಿಸಿಕೊಂಡಿದ್ದರಿಂದ ಬೇರು ಕೊಳೆತು ಹೋಗಿ ಎಲೆಗಳು ಒಣಗುತ್ತಿವೆ. ಅತಿಯಾದ ಮಳೆಯಿಂದ ರೈತರು ಬಂಗಾರದಂತ ಬೆಳೆಯನ್ನ ಕಳೆದುಕೊಳ್ಳುವಂತಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ರೈತರು ಬೀಜ ಹಾಗೂ ರಸಗೊಬ್ಬರ ಖರೀದಿ ಮಾಡಿಕೊಂಡು ಬಂದು ಬಿತ್ತನೆ ಮಾಡಿದ್ದರು.
ಪರಿಹಾರ ನೀಡಬೇಕೆಂದು ರೈತರು ಮುಖಂಡರ ಒತ್ತಾಯ
ನಾಲ್ಕು ತಿಂಗಳುಗಳ ಕಾಲ ಬೆಳೆಯನ್ನ ಬೆಳೆಯೋಕೆ ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಅದರಲ್ಲೂ ಕಸ ಕೀಳುವುದರಿಂದ ಹಿಡಿದು ಕೀಟನಾಶಕ ಸಿಂಪಡಣೆ ಮಾಡುವ ಕೆಲಸದ ವರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಈಗ ನೋಡಿದರೆ ಅತಿಯಾದ ಮಳೆಯಿಂದಾಗಿ ಬೆಳೆಗೆ ನೆಟೆ ರೋಗ ಬಂದಿದೆ. ಹೀಗಾಗಿ ಸರ್ಕಾರ ಸರಿಯಾದ ರೀತಿಯಲ್ಲಿ ಸರ್ವೆಯನ್ನ ಮಾಡುವ ಮೂಲಕ ಬೆಳೆ ಹಾಳಾದ ರೈತರಿಗೆ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕೆಂದು ರೈತರು ಮುಖಂಡರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ರೈತರು ಬೆಳೆಯನ್ನ ಕಳೆದುಕೊಂಡಿದ್ದಾರೆ. ಕೇವಲ ತೊಗರಿ ಅಷ್ಟೇ ಅಲ್ಲದೆ ಅತಿಯಾದ ತೇವಾಂಶದಿಂದ ರೈತರು ಹತ್ತಿ ಬೆಳೆ ಕೂಡ ಕಳೆದುಕೊಂಡಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ