ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮದಲ್ಲಿ ಚಿಲಿಪಿಲಿ ಕಲರವ; ಸಂತಾನೋತ್ಪತಿಗಾಗಿ ಹಾರಿ ಬಂದ ವಿದೇಶಿ ಹಕ್ಕಿಗಳು

| Updated By: ಆಯೇಷಾ ಬಾನು

Updated on: Jan 13, 2024 | 2:51 PM

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಬಳಿಯಿರುವ ಬೋನಾಳ್ ಪಕ್ಷಿಧಾಮಕ್ಕೆ ಸಂತಾನೋತ್ಪತಿಗಾಗಿ ವಿದೇಶಿ ಹಕ್ಕಿಗಳು ಆಗಮಿಸಿವೆ. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವವರಿಗೆ ಹಕ್ಕಿಗಳ ಚಿಲಿಪಿಲಿ ನಾದ ಮುದು ನೀಡುತ್ತಿದೆ. ಸುರಪುರ ತಾಲೂಕು ಕೇಂದ್ರದಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಈ ಪಕ್ಷಿಧಾಮವನ್ನ 17ನೇ ಶತಮಾನದಲ್ಲಿ ಸುರಪುರದ ಪಾಮ ನಾಯಕ ಎಂಬ ರಾಜ ನಿರ್ಮಾಣ ಮಾಡಿದ್ದ ಅಂತ ಸ್ಥಳೀಯರು ನಂಬುತ್ತಾರೆ.

ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮದಲ್ಲಿ ಚಿಲಿಪಿಲಿ ಕಲರವ; ಸಂತಾನೋತ್ಪತಿಗಾಗಿ ಹಾರಿ ಬಂದ ವಿದೇಶಿ ಹಕ್ಕಿಗಳು
ಬೋನಾಳ್ ಪಕ್ಷಿಧಾಮ
Follow us on

ಯಾದಗಿರಿ, ಜ.13: ರಾಜ್ಯದ ಅತಿ ದೊಡ್ಡ ಪಕ್ಷಿಧಾಮ ಎಂದು ಇತ್ತೀಚೆಗಷ್ಟೇ ಬಿರುದು ಪಡೆದ ಯಾದಗಿರಿ (Yadgir) ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಬಳಿಯಿರುವ ಬೋನಾಳ್ ಪಕ್ಷಿಧಾಮದಲ್ಲಿ (Bonal Bird Sanctuary) ಚಿಲಿಪಿಲಿ ಹಕ್ಕಿಗಳ ನಾದ ಮುದ ನೀಡುತ್ತಿದೆ. ವಿಶಾಲವಾದ ಕೆರೆ, ಕೆರೆ ತುಂಬ ವಿಧ ವಿಧವಾದ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವವರಿಗೆ ಹಕ್ಕಿಗಳ ಚಿಲಿಪಿಲಿ ನಾದ ಮುದು ನೀಡುತ್ತೆ. ಸಂತಾನೋತ್ಪತಿಗಾಗಿ ವಿದೇಶಿ ಹಕ್ಕಿಗಳು ಆ ಪಕ್ಷಿಧಾಮಕ್ಕೆ ಹಾರಿ ಬರುತ್ತಿವೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಬಳಿಯಿರುವ ಬೋನಾಳ್ ಪಕ್ಷಿಧಾಮ ಇತ್ತೀಚೆಗಷ್ಟೇ ರಾಜ್ಯ ಸರ್ಕಾರದಿಂದ ರಾಜ್ಯದ ನಂ.1 ಪಕ್ಷಿಧಾಮ ಅಂತಾ ಬೋನಾಳ್ ಪಕ್ಷಿಧಾಮಕ್ಕೆ ಬಿರುದು ಸಿಕ್ಕಿದೆ. ಆದರೂ ಸರ್ಕಾರಿ ದಾಖಲಾತಿಗಳಲ್ಲಿ ಬೋನಾಳ ಪಕ್ಷಿಧಾಮ ಈಗಲೂ ಸಹ ರಾಜ್ಯದ ಎರಡನೇ ಅತಿ ದೊಡ್ಡ ಪಕ್ಷಿಧಾಮವಾಗಿದೆ. 672 ಎಕರೆ ಪ್ರದೇಶ ಹೊಂದಿರುವ ಈ ಪಕ್ಷಿಧಾಮದಲ್ಲಿ ವಿಶಾಲವಾದ ಕೆರೆಯಿದೆ. ಈ ಕೆರೆ ತುಂಬಾ ನೀರು ಇರುವ ಕಾರಣಕ್ಕೆ ಹಕ್ಕಿಗಳಿಗಾಗಿ ಈ ಜಾಗ ಹೇಳಿ ಮಾಡಿಸಿದಂತಾಗಿದೆ. ಸದ್ಯ ರಾಜ್ಯ ನಂ.1 ಪಕ್ಷಿಧಾಮವಾಗಿರುವ ಬೋನಾಳ್ ಪಕ್ಷಿಧಾಮಕ್ಕೆ ನೂರಾರು ಜಾತಿ ಹಕ್ಕಿಗಳು ಹಾರುತ್ತಾ ಬರುತ್ತವೆ. ಈ ಜಾಗದಲ್ಲಿ ನಸುಕಿನ ಜಾವ ಬಂದ್ರೆ ಸಾಕ ಹಕ್ಕಿಗಳು ಚಿಲಿಪಿಲಿ ನಾದ ಕೇಳಿಸಿಕೊಂಡು ಹೋಗದೆ ಇರುವವರಿಲ್ಲ. ಇನ್ನು ವಾಯು ವಿಹಾರಕ್ಕೆ ಬಂದವರಂತೂ ಈ ಜಾಗದಲ್ಲಿ ಕೆಲವೊತ್ತು ನಿಂತು ಹಕ್ಕಿಗಳ ತುಂಟಾಟವನ್ನ ಕಣ್ತುಂಬಿಕೊಂಡು ಹೋಗುತ್ತಾರೆ. ಸರ್ಕಾರಿ ದಾಖಲೆಗಳ ಪ್ರಕಾರ ಈಗ್ಲೂ ರಾಜ್ಯದ ಎರಡನೇ ಅತಿ ದೊಡ್ಡ ಪಕ್ಷಿಧಾಮ ಅಂತ ಇರುವ ಈ ಪಕ್ಷಿಧಾಮ ನೀಜವಾಗ್ಲೂ ರಾಜ್ಯದ ಅತಿ ದೊಡ್ಡ ಪಕ್ಷಿಧಾಮವಾಗಿದೆ. ಹೀಗಾಗಿ ಈ ಪಕ್ಷಿಧಾಮವನ್ನು ಸರಿಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪಂಜಾಬಿನ ಹರಿಕೆ ಪಕ್ಷಿಧಾಮಕ್ಕೆ ಆಗಮಿಸಿದ 90 ಜಾತಿಯ ವಲಸೆ ಹಕ್ಕಿಗಳು

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಕೇಂದ್ರದಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಈ ಪಕ್ಷಿಧಾಮವನ್ನ 17ನೇ ಶತಮಾನದಲ್ಲಿ ಸುರಪುರದ ಪಾಮ ನಾಯಕ ಎಂಬ ರಾಜ ನಿರ್ಮಾಣ ಮಾಡಿದ್ದ ಅಂತ ಸ್ಥಳೀಯರು ನಂಬುತ್ತಾರೆ. ಜೊತೆಗೆ ಇದೆ ರಾಜ ನಿರ್ಮಾಣ ಮಾಡಿದ್ದ ಅಂತ ಕೆಲ ದಾಖಲೆಗಳು ಸಹ ಇವೆ. 672 ಎಕರೆ ಪ್ರದೇಶದಲ್ಲಿ ಸುಮಾರು 300 ಕ್ಕೂ ಅಧಿಕ ಎಕರೆ ಪ್ರದೇಶದಷ್ಟು ನೀರು ಆವರಿಸಿಕೊಂಡಿದೆ. ವರ್ಷದ 12 ತಿಂಗಳುಗಳ ಕಾಲ ಈ ಕೆರೆಯಲ್ಲಿ ನೀರು ಇರುತ್ತದೆ. ಅದರಲ್ಲೂ ನಾರಾಯಣಪುರ ಡ್ಯಾಂನಿಂದ ಈ ಕೆರೆಗೆ ನೀರು ಹರಿಸಲಾಗುತ್ತೆ ಹೀಗಾಗಿ ಸದಾ ಕಾಲ ಈ ಕೆರೆಯಲ್ಲಿ ನೀರು ಇರುತ್ತದೆ. ಇದೇ ಕಾರಣಕ್ಕೆ ಈ ಸ್ಥಳ ಹಕ್ಕಿಗಳ ಪಾಲಿಗೆ ಫೇವರೆಟ್ ಆಗಿದೆ. ಈ ಪಕ್ಷಿಧಾಮಕ್ಕೆ ಸುಮಾರು ನೂರಕ್ಕೂ ಅಧಿಕ ಜಾತಿಯ ಹಕ್ಕಿಗಳು ವಲಸೆ ಬರುತ್ತವೆ. ಅದರಲ್ಲೂ ವಿದೇಶಿ ಹಕ್ಕಿಗಳು ಇಲ್ಲಿಗೆ ಸಂತಾನೋತ್ಪತಿಗಾಗಿ ವಲಸೆ ಬರುತ್ತವೆ. ಚಳಿಗಾಲದಲ್ಲಿ ವಿದೇಶದಲ್ಲಿ ಚಳಿ ಹೆಚ್ಚಾಗಿರುವುದರಿಂದ ಹಕ್ಕಿಗಳು ಈ ಪ್ರದೇಶಕ್ಕೆ ಹಾರುತ್ತ ಬಂದು ಸಂತಾನೋತ್ಪತಿ ಮಾಡುತ್ತವೆ. ಅದಲ್ಲೂ ನೇರಳೆ ಬಣ್ಣದ ಹೆರಾನ್, ಬಿಳಿ ಕುತ್ತಿಗೆಯ ಕೊಕ್ಕರೆ, ಬಿಳಿ ಐಬಿಸ್, ಕಪ್ಪು ಐಬಿಸ್, ಬಾರ್-ಹೆಡೆಡ್ ಗೂಸ್, ಹಾವಿನ ಹಕ್ಕಿ, ನೇರಳೆ ಮೂರ್ಹೆನ್, ಇಂಡಿಯನ್ ಮೂರ್ಹೆನ್, ದೊಡ್ಡ ಎಗ್ರೆಟ್, ಪಾಂಡ ಹೆರಾನ್ ಮತ್ತು ಕ್ಯಾಟಲ್ ಎಗ್ರೆಟ್ ಸೇರಿದಂತೆ ವಿವಿಧ ಜಾತಿಯ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಸದ್ಯ ಈ ಸ್ಥಳದಲ್ಲಿ ಹಕ್ಕಿಗಳು ಆಹಾರ ಮತ್ತು ನೀರಿನ ಕೊರತೆ ಇರದ ಕಾರಣಕ್ಕೆ ಈ ಸ್ಥಳಕ್ಕೆ ಬರುತ್ತೆ ಅಂತ ಸ್ಥಳೀಯರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ