ಯಾದಗಿರಿ: ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್ ಮಾರಾಟ ಪ್ರಕರಣ; ಶಾಲಾ ಶಿಕ್ಷಕ ಅಮಾನತು
ಯಾದಗಿರಿ ಪ್ರತ್ಯೇಕ ಘಟನೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್ನ್ನು ಕಿರಾಣಿ ಅಂಗಡಿಯೊಂದಕ್ಕೆ ಮಾರಾಟ ಮಾಡಿ ಅಮಾನತ್ತಾಗಿದ್ದರೆ, ಮತ್ತೊಂದೆಡೆ ಕರ್ತವ್ಯ ಲೋಪ ಹಿನ್ನೆಲೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿಯನ್ನು ಅಮಾನತು ಮಾಡಲಾಗಿದೆ.
ಯಾದಗಿರಿ, ಫೆ.08: ಇತ್ತೀಚೆಗಷ್ಟೇ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಶಿಕ್ಷಕನೊಬ್ಬ ಥಳಿಸಿದ ಘಟನೆ ನಡೆದಿತ್ತು.ಇದೀಗ ಶಿಕ್ಷಕನೊಬ್ಬ ಕ್ಷೀರಭಾಗ್ಯ ಯೋಜನೆಯ(Ksheera Bhagya Scheme) ಹಾಲಿನ ಪುಡಿ ಪ್ಯಾಕೆಟ್ನ್ನು ಕಿರಾಣಿ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ತಾಲೂಕಿನ ಲಿಂಗೇರಿ ತಾಂಡಾದ ಸರ್ಕಾರಿ ಶಾಲೆ ಶಿಕ್ಷಕ ಸೂರ್ಯಕಾಂತ್ ಎಂಬುವವರನ್ನು ಅಮಾನತು ಮಾಡಿ ಯಾದಗಿರಿ ಡಿಡಿಪಿಐ ಮಂಜುನಾಥ್ ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಅಮಾನತು ಜೊತೆಗೆ ಕ್ರಿಮಿನಲ್ ಪ್ರಕರಣವನ್ನು ಪ್ರಕರಣ ಕೂಡ ದಾಖಲಿಸುವಂತೆ ಅಕ್ಷರ ದಾಸೋಹ ಯೋಜನಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಾದಗಿರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅಮಾನತು
ಯಾದಗಿರಿ: ಕರ್ತವ್ಯ ಲೋಪ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಜಿಟಿ ಸರೋಜಾ ಎಂಬುವವರನ್ನು ಅಮಾನತು ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಜಿಲ್ಲೆಗಳ ವಸತಿ ನಿಲಯಗಳಲ್ಲಿ ಸ್ವಚ್ಛತೆ ಹಾಗೂ ಅಗತ್ಯ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದ್ದು, ಉಪ ಲೋಕಾಯುಕ್ತರು 2023ರ ನವೆಂಬರ್ 18ರಿಂದ 20ರವರೆಗೆ ಯಾದಗಿರಿ ಪ್ರವಾಸದ ವೇಳೆ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದರು.
ಈ ವೇಳೆ ಬಾಲಕರ ವಸತಿ ನಿಲಯದಲ್ಲಿ ಹಲವಾರು ನ್ಯೂನತೆ ಬೆಳಕಿಗೆ ಬಂದಿದ್ದವು. ಹೀಗಾಗಿ ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಆರೋಪ ಹಿನ್ನೆಲೆ ಇಲಾಖೆ ವಿಚಾರಣೆ ಕಾಯ್ದಿರಿಸಿ ಸರೋಜಾ ಅವರನ್ನು ಅಮಾನತು ಮಾಡಿ, ಜೊತೆಗೆ ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದಲ್ಲವೆಂದು ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಕರ್ತವ್ಯ ನಿರ್ಲಕ್ಷ್ಯ ಆರೋಪ: ಡಿಡಿಪಿಐ ಹಾಗೂ ಇಬ್ಬರು ಹಿರಿಯ ಉಪನ್ಯಾಸಕರ ಅಮಾನತು
ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ
ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಹೊಟ್ಟೆ ನೋವಿನಿಂದ ಬಳಲಿ ನಿನ್ನೆ(ಫೆ.07) ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅಬ್ದುಲ್ ರಜಾಕ್ ತೊರವಿ ಎಂಬಾತ ಇಂದು ಚಿಕಿತ್ಸೆ ಪಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡಿಲ್ಲ, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಆರೋಪ ಅಲ್ಲಗಳೆದ ಜಿಲ್ಲಾಸ್ಪತ್ರೆವೈದ್ಯರು
ಘಟನೆ ಸಂಬಂಧ ಮಾತನಾಡಿದ ವೈದ್ಯರು, ‘ಅವರು ವಿಪರೀತ ಮಧ್ಯ ಕುಡಿಯುತ್ತಿದ್ದ ಕಾರಣ ಲೀವರ್ ಹಾಳಾಗಿತ್ತು. ನಿನ್ನೆಯಿಂದಲೇ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆದರೆ, ಲೀವರ್ ಹಾಳಾದ ಕಾರಣ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ