
ಯಾದಗಿರಿ, ಮಾರ್ಚ್ 29: ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣ ಅಂತ್ಯ ಕಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಕೃಷಿ ಹೊಂಡದ ನೀರಲ್ಲಿ ಮುಳುಗಿ ಕಿರಣ್(6), ಬಸಮ್ಮ(11), ಶರತ್(6), ಹನುಮೇಶ್(7) ಮೃತಪಟ್ಟಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ.
ಕೃಷಿ ಹೊಂಡದಲ್ಲಿ ಈಜಲು ಹೋಗಿ 4 ಮಕ್ಕಳು ಜಲಸಮಾಧಿ ವಿಷಯ ತಿಳಿದು ಪೋಷಕರು ಮತ್ತು ಸಂಬಂಧಿಕರಿಗೆ ತೀವ್ರ ಆಘಾತವಾಗಿದೆ. ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ ಕಾರಣ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳ ಉತ್ತಮ ಭವಿಷ್ಯದ ಕನಸು ಕಂಡು, ನೂರಾರು ಆಸೆ ಮತ್ತು ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದ ಹೆತ್ತವರೀಗ ಅಕ್ಷರಶಃ ಕಂಗಾಲಾಗಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ
ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮೊನ್ನೆಯಷ್ಟೇ ದುರ್ಮರಣ ಹೊಂದಿದ ಘಟನೆ ಮಾಸುವ ಮುನ್ನವೇ ಅಂತಹುದ್ದೇ ಮತ್ತೊಂದು ಅವಘಡ ರಾಜ್ಯದಲ್ಲೀಗ ನಡೆದಿದೆ. ಆಂಧ್ರಪ್ರದೇಶದ ಕೋಸಗಿ ತಾಲೂಕಿನ ರಾಜಲಬಂಡ ಅಣೆಕಟ್ಟಿನ ಕೊನೆ ಭಾಗದಲ್ಲಿರುವ ಸಾತುನೂರು ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದ ವೇಳೆ ತಗ್ಗು ಪ್ರದೇಶದಲ್ಲಿ ಸಿಲುಕಿ ತಲಾ ಇಬ್ಬರು ಯುವಕ ಮತ್ತು ಯುವತಿಯರು ಸೇರಿ ನಾಲ್ವರು ಪ್ರಾಣ ಬಿಟ್ಟಿದ್ದರು. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ಕೃಷಿ ಮತ್ತು ಕಲ್ಲು ಹೊಂಡಗಳು ಸೇರಿ ಕೆರೆ-ನದಿಗಳಿಗೆ ಈಜಲು ತೆರಳುವ ಮಕ್ಕಳ ಬಗ್ಗೆ ಕುಟುಂಬಸ್ಥರು ಗಮನಹರಿಸಬೇಕಿದೆ. ಸರಿಯಾಗಿ ಈಜಲು ಬಾರದೆಯೋ ಅಥವಾ ಸ್ಥಳದ ಅರಿವಿನ ಕೊರತೆಯಿಂದಲೋ ಸಾಲು ಸಾಲು ಅವಘಡಗಳು ನಡೆಯುತ್ತಿದ್ದು, ಸ್ಥಳೀಯ ಆಡಳಿತಗಳೂ ಈ ಬಗ್ಗೆ ಗಮನಹರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:41 pm, Sun, 29 March 26