ಯಾದಗಿರಿ, ಸೆಪ್ಟೆಂಬರ್ 17: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ (71) (venkatreddy mudnal) ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ ವೆಂಕಟರೆಡ್ಡಿ ಮುದ್ನಾಳ, ಕಳೆದ ಕೆಲ ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ನಾಳೆ ಸ್ವಗ್ರಾಮ ಮುದ್ನಾಳನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ವೆಂಕಟರೆಡ್ಡಿ ಮುದ್ನಾಳ ಅವರ ನಿಧನಕ್ಕೆ ರಾಜ್ಯ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಆಪ್ತರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಅವರು 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಯಾದಗಿರಿ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಒಂದೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರು ಎನಿಸಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನಾರೆಡ್ಡಿ ವಿರುದ್ಧ ಮುದ್ನಾಳ ಸೋಲು ಕಂಡಿದ್ದರು.
ಇದನ್ನೂ ಓದಿ: ಹೈದರಾಬಾದ್ ನಿಜಾಮನ ದಬ್ಬಾಳಿಕೆ ವಿರುದ್ಧ ನಡೆದ ಹೋರಾಟ ನೂರಾರು ಜನರ ತ್ಯಾಗ, ಬಲಿದಾನದ ಪ್ರತೀಕ ಕಲ್ಯಾಣ ಕರ್ನಾಟಕ ಉತ್ಸವ
ವೆಂಕಟರೆಡ್ಡಿ ಮುದ್ನಾಳ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಪಶುಸಂಗೋಪನೆ ಸಚಿವ ವಿಶ್ವನಾಥ ರೆಡ್ಡಿ ಮುದ್ನಾಳ ಅವರ ಪುತ್ರ. ವೆಂಕಟರೆಡ್ಡಿ ಅವರು ಮಾರ್ಚ್ 28, 1954 ರಂದು ಜನಿಸಿದ್ದಾರೆ. ಬಿ.ಕಾಂ ಪದವಿ ಪಡೆದಿರುವ ಅವರು 2018-2023ರ ವರೆಗೆ ಶಾಸಕರಾಗಿದ್ದರು.
ಯಾದಗಿರಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಅವರ ನಿಧನಕ್ಕೆ ಸಂತಾಪ ಕೋರುವೆ. ನೇರ ನಡೆ ನುಡಿಗೆ ಹೆಸರಾಗಿ ನೈಜ ಜನಕಾಳಜಿಯ ಹಿರಿಯ ನಾಯಕರಾಗಿದ್ದ ಮಾನ್ಯ ಮುದ್ನಾಳ್ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು… pic.twitter.com/UbeEbjhVKq
— Vijayendra Yediyurappa (@BYVijayendra) September 17, 2024
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದು, ಯಾದಗಿರಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಅವರ ನಿಧನಕ್ಕೆ ಸಂತಾಪ ಕೋರುವೆ. ನೇರ ನಡೆ ನುಡಿಗೆ ಹೆಸರಾಗಿ ನೈಜ ಜನಕಾಳಜಿಯ ಹಿರಿಯ ನಾಯಕರಾಗಿದ್ದ ಮಾನ್ಯ ಮುದ್ನಾಳ್ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಓಂಶಾಂತಿ ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 pm, Tue, 17 September 24