ನಿಲ್ಲು ನಿಲ್ಲೇ ಅಟ್ಲಾಸ್ ಪತಂಗ.. ನೋಡಲು ಬಯಸುವೆ ನಿನ್ನಯ ಅಂದ!

ನಿಲ್ಲು ನಿಲ್ಲೇ ಅಟ್ಲಾಸ್ ಪತಂಗ.. ನೋಡಲು ಬಯಸುವೆ ನಿನ್ನಯ ಅಂದ!

ಉಡುಪಿ: ಜಿಲ್ಲೆಯಲ್ಲಿ ಚಿಟ್ಟೆ ಎಂದು ಸುತ್ತಾಡೊ ಇದು ಅಸಲಿಗೆ ಚಿಟ್ಟೆಯಲ್ಲ ಬದಲಿಗೆ ದೈತ್ಯಾಕಾರದ ಪತಂಗ ‘ಅಟ್ಲಾಸ್ ಮಾಥ್​​’. ಈಗಾಗಲೇ ಕರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಇದು ಪತ್ತೆಯಾಗುತ್ತಿದ್ದು ಬೃಹದಾಕಾರದಲ್ಲಿರುವ ಈ ಪತಂಗವು ಎಲ್ಲರಲ್ಲೂ ಆಶ್ಚರ್ಯ ಮತ್ತು ಕುತುಹೂಲ ಮೂಡಿಸುತ್ತಿದೆ.

ಬೃಹದಾಕಾರ ಪತಂಗ ಬಹುತೇಕ ಮಂದಿ ಇದನ್ನು ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿ ಕೊಂಡಿದ್ದಾರೆ. ಆದರೆ ಇದು ಪತಂಗವೇ ಹೊರತು ಚಿಟ್ಟೆ(ಪಾತರಗಿತ್ತಿ) ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮಾಥ್​​ ಎಂದು ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ಬಹಳಷ್ಟು ವ್ಯತ್ಯಾಸವಿದೆ.

ಈ ಪತಂಗವು ಹಲವು ವರ್ಷಗಳ ಹಿಂದೆ ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಪತಂಗ ಎಂದು ಗುರುತಿಸಿಕೊಂಡಿತ್ತು. ಆದರೆ ನಂತರ ನಡೆದ ಅಧ್ಯಯನಗಳಲ್ಲಿ ಇದಕ್ಕಿಂತ ದೊಡ್ಡ ಗಾತ್ರದ ಪತಂಗವನ್ನು ಪತ್ತೆಹಚ್ಚಲಾಗಿದೆ. ಆದ್ದರಿಂದ ಈ ಪತಂಗವನ್ನು ಬೃಹದಾಕಾರದ ಪತಂಗ ಎಂದು ಹೇಳಬಹುದೇ ಹೊರತು ಪ್ರಪಂಚದ ಅತ್ಯಂತ ದೊಡ್ಡ ಪತಂಗ ಎಂದು ಕರೆಯುವುದು ಸರಿಯಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪತಂಗದ ವೈಜ್ಞಾನಿಕ ಹೆಸರು ಌಟಕಸ್​ ಅಟ್ಲಾಸ್ ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಈ ಪತಂಗದ ವೈಜ್ಞಾನಿಕ ಹೆಸರು ಌಟಕಸ್​ ಅಟ್ಲಾಸ್ (Attacus Atlas). ಇದರ ರೆಕ್ಕೆಯ ವಿಸ್ತೀರ್ಣ 24 ಸೆ.ಮೀ. ಆಗಿದೆ. ಈ ಪತಂಗ ಪೇರಳೆ, ಸಂಪಿಗೆ ಸೇರಿದಂತೆ ಕೆಲವೊಂದು ಸೀಮಿತ ಮರಗಳ ಎಲೆಗಳಲ್ಲಿ ಮಾತ್ರ ಮೊಟ್ಟೆ ಇಡುತ್ತದೆ.

ಬಳಿಕ ಮೊಟ್ಟೆಯಿಂದ ಹೊರ ಬರುವ ಕಂಬಳಿಹುಳ ಮರದ ಎಲೆಗಳನ್ನು ತಿಂದು ಕೋಶವನ್ನು ರಚಿಸುತ್ತದೆ. ಅದರಿಂದ ಹೊರಗೆ ಬರುವ ಗಂಡು ಪತಂಗವು, ಹೆಣ್ಣು ಪತಂಗದೊಂದಿಗೆ ಸೇರಿ ನಂತರ ಕಾಲವಶವಾಗುತ್ತದೆ. ಮುಂದೆ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ ಎಂದು ಕೀಟತಜ್ಞರು ಮಾಹಿತಿ ನೀಡಿದ್ದಾರೆ.

ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ! ವಿಶೇಷ ಅಂದರೆ ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಆದ್ದರಿಂದ ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗ ಆದ ನಂತರ ಇದು ಏನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲ ಪೌಷ್ಟಿಕಾಂಶವನ್ನು ಹುಳು ಆಗಿರುವಾಗಲೇ ಎಲೆಗಳನ್ನು ತಿಂದು ಪಡೆಯುತ್ತದೆ.

ಹಾಗಾಗಿ, ಇದರ ಕಾಲಾವಧಿ ಕೇವಲ ಒಂದು ಅಥವಾ ಎರಡು ವಾರಗಳಿಗೆ ಮಾತ್ರ ಸೀಮಿತ. ತನ್ನ ಶಕ್ತಿಯನ್ನು ಉಳಿಸಿಕೊಳ್ಳಲು ಅದು ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಹೆಚ್ಚು ಸಮಯ ಎಲೆಗಳ ಮೇಲೆ ವಿಶ್ರಾಂತಿಸುತ್ತದೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಹಕ್ಕಿ, ಓತಿ ಮತ್ತು ಇರುವೆಗಳಿಗೆ ಆಹಾರವಾಗುತ್ತದೆ ಅನ್ನೊದು ಚಿಟ್ಟೆ ತಜ್ನರ ಅಭಿಪ್ರಾಯ. -ಹರೀಶ್ ಪಾಲೇಚ್ಚಾರ್

Click on your DTH Provider to Add TV9 Kannada