ಮತ್ತೊಮ್ಮೆ ಸಿ ಬಿ ಐ ಅಧಿಕಾರಿಗಳೆದುರು ಹಾಜರಾದ ರಿಯಾ ಚಕ್ರವರ್ತಿ

  • TV9 Web Team
  • Published On - 17:59 PM, 29 Aug 2020
ಮತ್ತೊಮ್ಮೆ ಸಿ ಬಿ ಐ ಅಧಿಕಾರಿಗಳೆದುರು ಹಾಜರಾದ ರಿಯಾ ಚಕ್ರವರ್ತಿ

ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಅವರ ಗರ್ಲ್​ಫ್ರೆಂಡ್ ರಿಯಾ ಚಕ್ರವರ್ತಿಯನ್ನು ಶುಕ್ರವಾರದಂದು 10 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಕೇಂದ್ರ ತನಿಖಾ ದಳದ ಅಧಿಕಾರಿಗಳು ಇಂದು ಪುನಃ ಆಕೆಯನ್ನು ಕರೆದು ಪ್ರಶ್ನಿಸುತ್ತಿದ್ದಾರೆ.  

ಮುಂಬೈನ ಡಿ ಆರ್ ಡಿ ಒ ಅತಿಥಿಗೃಹದಲ್ಲಿ ತಂಗಿರುವ ಸಿಬಿಐ ಅಧಿಕಾರಿಗಳು ಅಲ್ಲೇ ಆಕೆಯ ವಿಚಾರಣೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ರಿಯಾ ಅತಿಥಿ ಗೃಹಕ್ಕೆ ಮಧ್ಯಾಹ್ನ 1:30ಕ್ಕೆ ಆಗಮಿಸಿದಳು. ತನಿಖಾ ದಳದ ಎಸ್ ಪಿ ಱಂಕಿನ ಅಧಿಕಾರಿಗಳು ಆಕೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಶುಕ್ರವಾರದಂದು ಸಾಂತಾಕ್ರೂಜ್​ನಲ್ಲಿರುವ ಡಿ ಆರ್ ಡಿ ಒ ಅತಿಥಿ ಗೃಹಕ್ಕೆ ಆಗಮಿಸಿದ್ದ ರಿಯಾ ರಾತ್ರಿ ಮನೆಗೆ ತೆರಳುವಾಗ ರಾತ್ರಿ 9:00 ಗಂಟೆಯಾಗಿತ್ತು ಎಂದು ವರದಿಯಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ತನಿಖೆ ನಡೆಸುತ್ತಿರುವ ಸಿ ಬಿ ಐ, ಗುರುವಾರದಂದು, ರಿಯಾ ಸಹೋದರ ಶೊವಿಕ್ ಚಕ್ರವರ್ತಿಯ ವಿಚಾರಣೆ ನಡೆಸಿತ್ತು. ಸುಶಾಂತ್ ನಿಗೂಢ ಸಾವಿಗೆ ಸಂಬಂಧಿಸಿದಂತೆ ಅದು ಇದುವರೆಗೆ, ನಟನೊಂದಿಗೆ ವಾಸಿಸುತ್ತಿದ್ದ ಸಿದ್ಧಾರ್ಥ್ ಪತಾನಿ, ನಟನ ಅಡಿಗೆಯವ ನೀರಜ್ ಸಿಂಗ್, ಮನೆಗೆಲಸದ ಆಳು ದೀಪೇಶ್ ಸಾವಂತ್ ಮತ್ತಿತರನ್ನು ಪ್ರಶ್ನಿಸಿದ್ದಾರೆ.

ಸುಶಾಂತ್​ನ ಚಾರ್ಟರ್ಡ್ ಅಕೌಂಟೆಂಟ್ ಸಂದೀಪ್ ಶ್ರೀಧರ್, ಮತ್ತು ಅಕೌಂಟೆಂಟ್ ರಜತ್ ಮೆವಾತಿ ಅವರನ್ನು ಸಹ ತನಿಖಾ ದಳ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ಕೈಗೆತ್ತಿಕೊಂಡಿರುವ ಸಿ ಬಿ ಐ, ಸುಶಾಂತ್​ನ ಕುಟುಂಬವು, ಆತ್ಮಹತ್ಯೆ ಹಿಂದೆ, ರಿಯಾಳ ಕುಮ್ಮಕ್ಕಿದೆ, ಅವರ ಹಣವನ್ನು ರಿಯಾ ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದೆ.

ಸುಶಾಂತ್ ಸಿಂಗ್ ರಜಪೂತ ಅವರ ಮೃತದೇಹ ಜೂನ್ 14ರಂದು ಅವರ ಬಾಂದ್ರಾ ಪ್ಲ್ಯಾಟ್​ನಲ್ಲಿ ದೊರಕಿತ್ತು.