ಬೆಳಗಾವಿಯಲ್ಲಿ ಬಿಜೆಪಿಯತ್ತ ಮುಖ ಮಾಡಿದ ಕಾಂಗ್ರೆಸ್ ನಾಯಕರು, ಜಾರಕಿಹೊಳಿ ಸಿಡಿಸ್ತಾರಾ ‘ಲಕ್ಷ್ಮಿ’ ಪಟಾಕಿ!
ಕಾಂಗ್ರೆಸ್ ಪಕ್ಷಕ್ಕೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದು ಮುಂಬರುವ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವೆ ಎಂದು ಕೃಷ್ಣಾ ಅನಗೋಳ್ಕರ್ ಹೇಳಿದ್ದಾರೆ.

ಬೆಳಗಾವಿ: ಸದ್ಯ ಹಾವು-ಮುಂಗುಸಿಯಂತಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ನಡುವೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ.
ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿಯಾಗಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಅಲುಗಾಡಿಸಲು ರಮೇಶ್ ಜಾರಕಿಹೊಳಿ ಯೋಜನೆ ಹೂಡಿದ್ರಾ? ಬೆಳಗಾವಿ ಸಾಹುಕಾರ್ ಆಪರೇಷನ್ ಕಮಲಕ್ಕೆ ಕೈ ಹಾಕಿದ್ರಾ ಎನ್ನುವ ಅನುಮಾನ ಸದ್ಯ ರಾಜಕೀಯ ವಲಯದಲ್ಲಿ ಗರಿಗೆದರಿದೆ.
ಬಿಜೆಪಿ ಸೇರಲಿದ್ದಾರೆ 200 ಮಂದಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಾಂಬ್ರಾ ಜಿ.ಪಂ. ಸದಸ್ಯ ಕೃಷ್ಣಾ ಅನಗೋಳ್ಕರ್ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ. ಜಿ.ಪಂ ಸದಸ್ಯ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕೃಷ್ಣಾ ಅನಗೋಳ್ಕರ್ ಸುದ್ದಿಗೋಷ್ಠಿ ನಡೆಸಿ ನನ್ನೊಂದಿಗೆ ನನ್ನ ಕ್ಷೇತ್ರದ 200 ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದು ಮುಂಬರುವ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವೆ ಎಂದು ಕೃಷ್ಣಾ ಅನಗೋಳ್ಕರ್ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಯತ್ತ ಮುಖ ಮಾಡುತ್ತಾರೆ. ಸಚಿವ ರಮೇಶ್ ಜಾರಕಿಹೊಳಿ ಆಶೀರ್ವಾದ ನಮ್ಮ ಮೇಲಿದೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.
ಇದನ್ನೂ ಓದಿ: ಸಮಾವೇಶಕ್ಕೆ ಮುನ್ನ ‘ಟೆಂಪಲ್ ರನ್’: ಕೊಲ್ಲೂರಿನಲ್ಲಿ ಡಿಕೆಶಿ, ಬನಶಂಕರಿ ಸನ್ನಿಧಿಯಲ್ಲಿ ಈಶ್ವರಪ್ಪ