‘ವರದಿ ಅಪೂರ್ಣ..ಅಸ್ಪಷ್ಟವಾಗಿದೆ, ಬೇರೆ ಕೊಡಿ’-ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆಯ ಬಗ್ಗೆ ಇನ್ನಷ್ಟು ವಿವರಣೆ ಕೇಳಿದ ಚುನಾವಣಾ ಆಯೋಗ
ಟಿಎಂಸಿಯನ್ನು ಬಿಟ್ಟು ಬಿಜೆಪಿ ಸೇರಿದ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಮಣಿಸಲು ಅದೇ ಕ್ಷೇತ್ರದಿಂದ ಆಖಾಡಕ್ಕೆ ಇಳಿದಿರುವ ಮಮತಾ ಬ್ಯಾನರ್ಜಿ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಕೋಲ್ಕತ್ತ: ನಂದಿಗ್ರಾಮದಲ್ಲಿ ಮಾ.10ರಂದು ಚುನಾವಣಾ ಪ್ರಚಾರದ ವೇಳೆ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಟಿಎಂಸಿ ಮುಖಂಡರ ನಿಯೋಗ ಮನವಿಯನ್ನೂ ಸಲ್ಲಿಸಿದೆ. ನಂದಿಗ್ರಾಮದಲ್ಲಿ ನಡೆದ ಹಲ್ಲೆಯ ವಿವರಗಳನ್ನೊಳಗೊಂಡ ವರದಿಯನ್ನೂ ರಾಜ್ಯ ಸರ್ಕಾರ ಎಲೆಕ್ಷನ್ ಕಮಿಷನ್ಗೆ ಈಗಾಗಲೇ ಸಲ್ಲಿಸಿದೆ. ಆದರೆ ಈ ವರದಿ ಅಪೂರ್ಣವಾಗಿದೆ.. ಬೇರೆ ವರದಿ ನೀಡಬೇಕು ಎಂದು ಇಂದು ಚುನಾವಣಾ ಆಯೋಗ ಪಶ್ಚಿಮಬಂಗಾಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಿಳಿಸಿದೆ.
ಮಮತಾ ಬ್ಯಾನರ್ಜಿಯವರ ಮೇಲೆ ನಡೆದ ಹಲ್ಲೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಸಲ್ಲಿಸಲಾದ ವರದಿಯಲ್ಲಿ ಸಂಪೂರ್ಣ, ಸ್ಪಷ್ಟವಾದ ಮಾಹಿತಿಗಳು ಇಲ್ಲ. ಘಟನೆ ಹೇಗೆ ನಡೆಯಿತು? ಅದರ ಹಿಂದೆ ಯಾರ ಕೈವಾಡ ಇರಬಹುದು? ಎಂಬಿತ್ಯಾದಿ ವಿವರಗಳು ಇಲ್ಲ. ಹಾಗಾಗಿ ಹಲ್ಲೆಗೆ ಸಂಬಂಧಪಟ್ಟಂತೆ ಇನ್ನಷ್ಟು ಮಾಹಿತಿಗಳನ್ನು ನೀಡಿ, ಹೊಸದಾಗಿ ವರದಿ ಸಲ್ಲಿಸಲು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ 4-5ಜನರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ. ಆದರೆ ಶುಕ್ರವಾರ ಸಂಜೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಆ 4-5 ಜನರ ಬಗ್ಗೆ ಏನೂ ಉಲ್ಲಖವಾಗಿಲ್ಲ. ಬದಲಿಗೆ ಅಂದು ದೊಡ್ಡ ಗುಂಪು ಸೇರಿತ್ತು ಎಂದು ಹೇಳಲಾಗಿದೆ. ಇನ್ನು ನೀಡಲಾದ ವಿಡಿಯೋದಲ್ಲಿ ಕೂಡ ಸ್ಪಷ್ಟವಾಗಿ ಏನೂ ಅರ್ಥವಾಗುವುದಿಲ್ಲ ಎಂದು ಆ ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ಚುನಾವಣೆಯಲ್ಲಿ ನಂದಿಗ್ರಾಮದಿಂದ ಕಣಕ್ಕೆ ಇಳಿದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾರ್ಚ್ 10ರಂದು ನಾಮಪತ್ರ ಸಲ್ಲಿಸಿ, ಪ್ರಚಾರ ನಡೆಸಲು ಅಲ್ಲಿಗೆ ತೆರಳಿದ್ದರು. ಈ ವೇಳೆ 3-4 ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಟಿಎಂಸಿ ನಾಯಕರು ಆರೋಪ ಮಾಡಿದ್ದರು. ಅಷ್ಟೇ ಅಲ್ಲ ಮುಖ್ಯ ಚುನಾವಣಾ ಅಧಿಕಾರಿ ಸುನೀಲ್ ಅರೋರಾ ಅವರನ್ನೂ ಭೇಟಿಯಾಗಿ, ತನಿಖೆಗೆ ಒತ್ತಾಯಿಸಿದ್ದರು. ಶುಕ್ರವಾರ ಸಂಜೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿತ್ತು.
ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧೆ ಟಿಎಂಸಿಯನ್ನು ಬಿಟ್ಟು ಬಿಜೆಪಿ ಸೇರಿದ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಮಣಿಸಲು ಅದೇ ಕ್ಷೇತ್ರದಿಂದ ಆಖಾಡಕ್ಕೆ ಇಳಿದಿರುವ ಮಮತಾ ಬ್ಯಾನರ್ಜಿ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹಾಗೇ ಮಾರ್ಚ್ 10ರಂದು ಪ್ರಚಾರ ನಡೆಸುತ್ತಿದ್ದ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆಯಾಗಿ, ಆಸ್ಪತ್ರೆ ಸೇರಿದ್ದರು. ನಾಲ್ಕೈದು ಮಂದಿ ಅಪರಿಚಿತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನನ್ನ ಪಾದ, ಕಾಲು, ಎದೆಗೆಲ್ಲ ಗಾಯವಾಗಿದೆ ಎಂದೂ ಆರೋಪಿಸಿದ್ದರು.
ಇದನ್ನೂ ಓದಿ: Mamata Banerjee: ನಂದಿಗ್ರಾಮದಲ್ಲಿ ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಡಿಸ್ಚಾರ್ಜ್