Mamata Banerjee Attacked: ಚುನಾವಣಾ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದು ಹೇಗೆ? ವಿಡಿಯೊದಲ್ಲಿ ಸೆರೆಯಾಗಿವೆ ದೃಶ್ಯಗಳು
West Bengal Assembly Elections: ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುವಾಗ ಎಸ್ಯುವಿ ಫುಟ್ಬೋರ್ಡ್ನಲ್ಲಿ ನಿಂತಿದ್ದಾರೆ. ಥಟ್ಟನೆ ಅಲ್ಲಿ ನೆರೆದಿದ್ದ ಜನರ ಗುಂಪು ಮುಂದೆ ನುಗ್ಗಿದ್ದು ಮಮತಾ ಹಿಂದಕ್ಕೆ ಬಿದ್ದರು. ಆ ಹೊತ್ತಿಗೆ ಕಾರಿನ ಬಾಗಿಲು ತಾಗಿ ಅವರಿಗೆ ಗಾಯಗಳಾಗಿರಬಹುದು.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬುಧವಾರ ಸಂಜೆ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಹಲ್ಲೆಯಲ್ಲಿ ಅವರ ಕಾಲು ಮತ್ತು ಪಾದಕ್ಕೆ ಗಾಯವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ಇದು ರಾಜಕೀಯ ನಾಟಕ ಎಂದು ಬಿಜೆಪಿ ಆರೋಪಿಸಿತ್ತು. ಅದೇ ವೇಳೆ ಬಿಜೆಪಿ ಇದನ್ನೆಲ್ಲ ಮಾಡಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಟಿಎಂಸಿ ಆರೋಪ ನಿರಾಕರಿಸಿದ ಬಿಜೆಪಿ, ಮಮತಾ ಬ್ಯಾನರ್ಜಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಹೇಳಿದೆ.
ಮಮತಾ ಬ್ಯಾನರ್ಜಿ ಅವರಿಗೆ ಝೆಡ್ ಪ್ಲಸ್ ಭದ್ರತೆ ಇದ್ದು, ಚುನಾವಣಾ ಪ್ರಚಾರ ಕಾರ್ಯಕ್ರಮದ ವೇಳೆ ಮಾಧ್ಯಮಗಳ ದಂಡೇ ಇರುತ್ತದೆ. ಹೀಗಿರುವ ಹಲ್ಲೆ ನಡೆದಿದ್ದಾದರೂ ಹೇಗೆ? ಹಲ್ಲೆಯ ದೃಶ್ಯಗಳು ಯಾಕೆ ಹೊರ ಬಂದಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ತಾನು ಕಾರಿನಲ್ಲಿ ಜನರ ಜತೆ ಸಂವಹನ ನಡೆಸುತ್ತಿದ್ದ ವೇಳೆ ಕೆಲವರು ಬಂದು ಕಾರಿನ ಬಾಗಿಲಿಗೆ ಗುದ್ದಿದರು. ನಾನು ಹಿಂದಕ್ಕೆ ಬಿದ್ದೆ, ನನ್ನ ಕಾಲಿಗೆ ಏಟಾಯಿತು. ಅವರು ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಘಟನೆ ಬಗ್ಗೆ ವಿವರಿಸಿದ್ದರು.
ವಿಡಿಯೊದಲ್ಲೇನಿದೆ? ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುವಾಗ ಎಸ್ಯುವಿ ಫುಟ್ಬೋರ್ಡ್ನಲ್ಲಿ ನಿಂತಿದ್ದಾರೆ. ಸಾಮಾನ್ಯ ರಾಜಕಾರಣಿಗಳು ಜನರನ್ನು ಭೇಟಿ ಮಾಡಿ, ಜನರೊಂದಿಗೆ ಸಂವಹನ ಮಾಡುವಂತೆ ಮಮತಾ ಫುಟ್ಬೋರ್ಡ್ನಲ್ಲಿ ನಿಂತಾಗ ಎಸ್ಯುವಿ ನಿಧಾನವಾಗಿ ಚಲಿಸಿದೆ. ಕಾರಿನ ಬಾಗಿಲು ಸ್ವಲ್ಪವೇ ತೆರೆದಿದ್ದು, ಮಮತಾ ವಿಂಡೊ ಫ್ರೇಮ್ ಮೇಲೆ ತೋಳು ಬಳಸಿ ನಮಸ್ಕಾರ ಮಾಡಿದ್ದಾರೆ. ಥಟ್ಟನೆ ಅಲ್ಲಿ ನೆರೆದಿದ್ದ ಜನರ ಗುಂಪು ಮುಂದೆ ನುಗ್ಗಿದ್ದು ಮಮತಾ ಹಿಂದಕ್ಕೆ ಬಿದ್ದರು. ಆ ಹೊತ್ತಿಗೆ ಕಾರಿನ ಬಾಗಿಲು ತಾಗಿ ಅವರಿಗೆ ಗಾಯಗಳಾಗಿರಬಹುದು ಎಂದು ವಿಡಿಯೊ ದೃಶ್ಯ ನೋಡಿ ಊಹಿಸಬಹುದು.
Moments before receiving the injury, this was how West Bengal CM Mamata Banerjee was mobbed today at Nandigram. The EC should answer how the police official’s allowed so many people in front of her car’s window. pic.twitter.com/FKy2Ggwmdp
— Sourav Sengupta (সৌরভ সেনগুপ্ত) (@sourav_sngupta) March 10, 2021
ಮಮತಾ ಹೇಳಿದ್ದೇನು? ಈ ಘಟನೆ ನಡೆದ ನಂತರ ಕೊಲ್ಕತ್ತಾಗೆ ಮರಳುವ ಮುನ್ನ ಮಾಧ್ಯಮದವರೊಂದಿದೆ ಮಾತನಾಡಿದ ಮಮತಾ, ನಾಲ್ಕೈದು ಅಪರಿಚಿತರು ನನ್ನ ಕಾರಿನ ಬಾಗಿಲನ್ನು ದೂಡಿ ಮುಚ್ಚಿದರು, ಬಾಗಿಲು ನನಗೆ ಬಡಿಯಿತು. ಇದೊಂದು ಪೂರ್ವಯೋಜಿತ ಸಂಚು ಎಂದು ನಿಮಗನಿಸುತ್ತಿದೆಯೇ? ಎಂದು ಕೇಳಿದಾಗ, ಹೌದು, ಇದು ಸಂಚು. ಉದ್ದೇಶಪೂರ್ವಕ ಈ ಕೃತ್ಯವೆಸಗಲಾಗಿದೆ. ನನ್ನ ಸುತ್ತ ಸ್ಥಳೀಯ ಪೊಲೀಸರು ಯಾರೂ ಇರಲಿಲ್ಲ ಎಂದಿದ್ದರು.
ಗುರುವಾರ ಆಸ್ಪತ್ರೆಯ ಹಾಸಿಗೆಯಿಂದಲೇ ಮಾತನಾಡಿದ ಮಮತಾ, ನಿನ್ನೆ ನನಗೆ ತುಂಬಾ ಗಾಯವಾಗಿತ್ತು, ನನ್ನ ಪಾದಕ್ಕೆ ಗಾಯವಾಗಿದೆ. ಮೂಳೆಗೆ ಏಟಾಗಿದೆ. ಗಾಯದಿಂದಾಗಿ ನನಗೆ ತಲೆ ನೋವು ಮತ್ತು ಎದೆ ನೋವಾಗಿದೆೆ ಎಂದಿದ್ದರು. ನಾನು ಕಾರಿನಲ್ಲಿ ಜನರೊಡನೆ ಸಂವಹನ ನಡೆಸುತ್ತಿದ್ದೆ, ಆಕಡೆಯಿಂದ ಜನರು ತಳ್ಳಿದರು ನನ್ನ ಪಾದಕ್ಕೆ ಗಾಯಗಳಾಯಿತು ಎಂದಿದ್ದಾರೆ.
দলনেত্রীর @MamataOfficial আবেদন pic.twitter.com/SPoD3m7Iu3
— All India Trinamool Congress (@AITCofficial) March 11, 2021
ಬಿಜೆಪಿ ವಿರುದ್ಧ ಟಿಎಂಸಿ ಆರೋಪ ಈ ಕೃತ್ಯದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗದ ಕೈವಾಡ ಇದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಜೀವಕ್ಕೆ ಅಪಾಯ ಉಂಟುಮಾಡಿದ ಘಟನೆ ಇದು. ಬಂಗಾಳದ ಪೊಲೀಸ್ ಮುಖ್ಯಸ್ಥರನ್ನು ವಜಾ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಟಿಎಂಸಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಯಾವ ಆಧಾರದ ಮೇಲೆ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದೀರಿ ಎಂದು ಟಿಎಂಸಿಯನ್ನು ಪ್ರಶ್ನಿಸಿದೆ. ಚುನಾವಣಾ ಆಯೋಗವು ರಾಜ್ಯದ ಕಾನೂನು ವ್ಯವಸ್ಥೆಯನ್ನು ಕೈಗೆತ್ತಿಕೊಂಡಿದೆ ಎಂಬುದು ಅಸಂಬದ್ಧ ಎಂದು ಆಯೋಗ ಉತ್ತರಿಸಿದೆ. ಅದೇ ವೇಳೆ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ ರಾಜ್ಯದ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿತ್ತು.
ಇದನ್ನೂ ಓದಿ: ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪ
ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಶಾಂತಿ ಮಂತ್ರ ಪಠಿಸಿದ ಮಮತಾ ಬ್ಯಾನರ್ಜಿ; ದಯಮಾಡಿ ಶಾಂತರಾಗಿರಿ ಎಂದು ಕರೆ
Published On - 12:20 pm, Fri, 12 March 21