Mamata Banerjee: ನಂದಿಗ್ರಾಮದಲ್ಲಿ ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮಮತಾ ಬ್ಯಾನರ್ಜಿ ಚಿಕಿತ್ಸೆಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸೂಕ್ತ ಸೂಚನೆಗಳನ್ನು ನೀಡಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಏಳು ದಿನಗಳ ಬಳಿಕ ಮತ್ತೆ ಆರೋಗ್ಯ ಪರೀಕ್ಷೆ ಮಾಡುತ್ತೇವೆ ಎಂದು ಕೋಲ್ಕತ್ತಾದ SSKM ಆಸ್ಪತ್ರೆ ತಿಳಿಸಿದೆ.
ಕೋಲ್ಕತ್ತಾ: ನಂದಿಗ್ರಾಮದಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಮತಾ ಬ್ಯಾನರ್ಜಿ ಇಂದು (ಮಾರ್ಚ್ 12) SSKM ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿ, ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ತೃಣಮೂಲ ಕಾಂಗ್ರೆಸ್ (TMC) ನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ 3-4 ಮಂದಿ ಹಲ್ಲೆ ಮಾಡಲಾಗಿದೆ ಎಂದು ಆರೋಪ ವ್ಯಕ್ತವಾಗಿತ್ತು. ಘಟನೆಯಲ್ಲಿ ದೀದಿ ಗಾಯಗೊಂಡಿದ್ದರು. ಬಳಿಕ, ಆಸ್ಪತ್ರೆಗೂ ದಾಖಲಾಗಿದ್ದರು. ಇದೀಗ ಎರಡು ದಿನಗಳ ಬಳಿಕ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಚಿಕಿತ್ಸೆಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿದ್ದಾರೆ. ಸೂಕ್ತ ಸೂಚನೆಗಳನ್ನು ನೀಡಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಏಳು ದಿನಗಳ ಬಳಿಕ ಮತ್ತೆ ಆರೋಗ್ಯ ಪರೀಕ್ಷೆ ಮಾಡುತ್ತೇವೆ ಎಂದು ಕೋಲ್ಕತ್ತಾದ SSKM ಆಸ್ಪತ್ರೆ ತಿಳಿಸಿದೆ.
ಉನ್ನತ ಮಟ್ಟದ ತನಿಖೆ ಆಗ್ರಹಿಸಿ ಚುನಾವಣಾ ಆಯೋಗ ಭೇಟಿ ಮಾಡಿದ ಟಿಎಂಸಿ ನಿಯೋಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯ ಕುರಿತಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೋರಿ ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗ ಇಂದು (ಮಾರ್ಚ್ 12) ಚುನಾವಣಾ ಆಯೋಗವನ್ನು (EC) ಭೇಟಿ ಮಾಡಿದೆ. ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿ ಹಿಂದಿರುಗುವ ವೇಳೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆರು ಮಂದಿ ಟಿಎಂಸಿ ಸದಸ್ಯರ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿದೆ. ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾ ಅವರನ್ನು ಕೂಡ ಭೇಟಿಯಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಚುನಾವಣಾ ಆಯೋಗದ ಸದಸ್ಯರ ಜತೆ ಮಾತುಕತೆ ನಡೆಸಿದ ಟಿಎಂಸಿ ನಿಯೋಗ ಜ್ಞಾಪಕ ಪತ್ರವನ್ನೂ ಸಲ್ಲಿಸಿದೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯನ್ನು ಟ್ವೀಟ್ ಮತ್ತು ಇತರ ಮಾರ್ಗಗಳ ಮೂಲಕ ಹೇಗೆ ಗುರಿಯಾಗಿಸಿದ್ದಾರೆ ಎಂದೂ ಹೇಳಿದೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಗಾಯವಾದ ಘಟನೆ ಅಚಾತುರ್ಯದಿಂದ ಘಟಿಸಿದ್ದಲ್ಲ. ಬದಲಾಗಿ ಇದೊಂದು ಪಿತೂರಿಯ ಭಾಗವಾಗಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಲೋಕಸಭಾ ಸದಸ್ಯ ಸೌಗತಾ ರಾಯ್ ಹೇಳಿದ್ದಾರೆ. ಜತೆಗೆ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ನೀಡಿದ ಜ್ಞಾಪಕ ಪತ್ರದಲ್ಲಿ, ಆರೋಪ ಮಾಡಲಾಗಿದೆ. ಮಮತಾಗೆ ಗಾಯವಾಗುವಲ್ಲಿ ಸುವೇಂದು ಅಧಿಕಾರಿ ಸಹಚರರು ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ.
West Bengal: Chief Minister Mamata Banerjee discharged from SSKM Hospital, Kolkata pic.twitter.com/9oXlcnPqR4
— ANI (@ANI) March 12, 2021
ಕೇಂದ್ರ ಗೃಹ ಸಚಿವಾಲಯದಿಂದ ಮಿಥುನ್ ಚಕ್ರವರ್ತಿಗೆ Y+ ಭದ್ರತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾ ಭೇಟಿಯ ಸಂದರ್ಭ ಬಿಜೆಪಿ ಸೇರಿದ್ದ ಬಾಲಿವುಡ್ನ ಖ್ಯಾತ ನಟ ಮಿಥುನ್ ಚಕ್ರವರ್ತಿಗೆ ಕೇಂದ್ರ ಸರ್ಕಾರ Y-Plus ಭದ್ರತೆ ನೀಡಿದೆ. ಜತೆಗೆ, ಕೇಂದ್ರದ ಗೃಹ ಸಚಿವಾಲಯ ಪಶ್ಚಿಮ ಬಂಗಾಳದ 10 ನಾಯಕರಿಗೆ Y ಶ್ರೇಣಿ ಭದ್ರತೆ ನೀಡಿದೆ.
ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಶಾಂತಿ ಮಂತ್ರ ಪಠಿಸಿದ ಮಮತಾ ಬ್ಯಾನರ್ಜಿ; ದಯಮಾಡಿ ಶಾಂತರಾಗಿರಿ ಎಂದು ಕರೆ
Published On - 7:49 pm, Fri, 12 March 21