ಚಿಕ್ಕಮಗಳೂರು: ಜಮೀನೊಂದರಲ್ಲಿ ಟ್ರ್ಯಾಕ್ಟರ್ನ ನೇಗಿಲಿಗೆ ಸಿಕ್ಕಿ ಹಾಕಿಕೊಂಡಿದ್ದ ಬೃಹತ್ ಗಾತ್ರದ ಹನ್ನೊಂದು ವರ್ಷದ ನಾಗರಹಾವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ನಡೆದಿದೆ. ಗುಬ್ಬಿಗಾ ಗ್ರಾಮದ ಗೋಪಾಲಾಚಾರ್ ಎಂಬುವವರು ತಮ್ಮ ಗದ್ದೆಯಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ನ ನೇಗಿಲಿಗೆ ನಾಗರಹಾವು ಸಿಲುಕಿಕೊಂಡಿದೆ.
ಈ ವೇಳೆ ಸಿಕ್ಕಿ ಹಾಕಿಕೊಂಡಿದ್ದ ನಾಗರಹಾವು ಬಿಡಿಸಿಕೊಳ್ಳಲಾಗದೇ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಕೂಡಲೇ ಉಳುಮೆ ಮಾಡುವುದನ್ನು ನಿಲ್ಲಿಸಿದ ರೈತ ನಾಗರಹಾವಿನ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಗೊತ್ತಿಲ್ಲದೇ, ಕಣ್ತಪ್ಪಿನಿಂದ ನಡೆದ ಅನಾಹುತಕ್ಕಾಗಿ ಮಮ್ಮುಲ ಮರುಗಿದ್ದಾರೆ. ತಡಮಾಡದೆ ಸಮೀಪದ ಕುದುರೆಗುಂಡಿಯ ಉರಗತಜ್ಞ ಹರೀಂದ್ರಗೆ ವಿಷಯ ತಿಳಿಸಿದ್ದಾರೆ.
ಪಶು ಆಸ್ಪತ್ರೆಯಲ್ಲಿ ನಾಗರಹಾವಿಗೆ ಚಿಕಿತ್ಸೆ:
ಸ್ಥಳಕ್ಕೆ ಬಂದ ಹರೀಂದ್ರ, ನೇಗಿಲಿಗೆ ಸಿಲುಕಿಕೊಂಡಿದ್ದ ನಾಗರಹಾವನ್ನ ಬಿಡಿಸಿ ಸ್ಥಳೀಯರಾದ ಅರುಣ್ ಹಾಗೂ ಸಾಜು ಎಂಬುವವರ ಸಹಾಯದಿಂದ ಎನ್.ಆರ್.ಪುರದ ಪಶು ಆಸ್ಪತ್ರೆಗೆ ತಂದಿದ್ದಾರೆ. ಪಶು ಆಸ್ಪತ್ರೆ ವೈದ್ಯ ವಿಜಯ್ ಕುಮಾರ್ ಹಾಗೂ ಶಿವಕುಮಾರ್ ಸುಮಾರು ಅರ್ಧ ಗಂಟೆಗಳ ಕಾಲ ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಹಾವು ಟ್ರ್ಯಾಕ್ಟರ್ ನೇಗಿಲಿಗೆ ಸಿಕ್ಕಿದರಿಂದ ಹಾವಿನ ತಲೆ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು.
ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹಾವಿನ ಹೊಟ್ಟೆ ಭಾಗದಲ್ಲಿ ಸುಮಾರು ಒಂದು ಇಂಚಿನಷ್ಟು ಹೊಲಿಗೆ ಹಾಕಿದ್ದಾರೆ. ಹಾವಿಗೆ ಬೆನ್ನಿನ ಒಂದು ಎಲುಬು ಕೂಡ ಮುರಿದಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ನಾಗರಹಾವಿಗೆ ಸುಮಾರು ಮೂರ್ನಾಲ್ಕು ದಿನಗಳ ಕಾಲ ಚಿಕಿತ್ಸೆಯ ಅಗತ್ಯವಿದ್ದು, ಹಾವನ್ನ ಪಶು ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಚಿಕಿತ್ಸೆಯ ಬಳಿಕವಷ್ಟೆ ಹಾವು ಚೇತರಿಸಿಕೊಳ್ಳಲಿದೆ. ಒಟ್ಟಿನಲ್ಲಿ ತಾನು ಉಳುಮೆ ಮಾಡುತ್ತಿದ್ದಾಗ ಕಣ್ತಪ್ಪಿನಿಂದ ನಡೆದ ಅಚಾತುರ್ಯಕ್ಕೆ ರೈತ ಮರುಕ ಪಟ್ಟ ರೀತಿ ಹಾಗೆಯೇ ಹಾವು ಬದುಕಿಸಲು ರೈತನು ತೋರಿದ ಕಾಳಜಿ ನಿಜಕ್ಕೂ ಶ್ಲಾಘನೀಯ.
Published On - 10:22 am, Thu, 21 May 20