Koo ಆ್ಯಪ್​ ಮಾಹಿತಿ ಕದಿಯಬಹುದು ಎಂದ ಹ್ಯಾಕರ್ಸ್​​: ತಿರುಗೇಟು ನೀಡಿದ ಸಿಇಒ

ಕೂ ಬಳಕೆದಾರರ, ಇ-ಮೇಲ್​ ಐಡಿ, ಲಿಂಗ, ಜನ್ಮದಿನಾಂಕ ಮಾಹಿತಿಯನ್ನು ಸುಲಭವಾಗಿ ಕದಿಯಬಹುದು. ಕೂ ಆ್ಯಪ್​ನಿಂದ ಈ ಮಾಹಿತಿ ಕದಿಯಲು ತೆಗೆದುಕೊಂಡಿದ್ದು ಕೇವಲ 30 ನಿಮಿಷ ಎಂದು ಬರೆದುಕೊಂಡಿದ್ದಾರೆ.

  • TV9 Web Team
  • Published On - 21:40 PM, 12 Feb 2021
Koo ಆ್ಯಪ್​ ಮಾಹಿತಿ ಕದಿಯಬಹುದು ಎಂದ ಹ್ಯಾಕರ್ಸ್​​: ತಿರುಗೇಟು ನೀಡಿದ ಸಿಇಒ

ಭಾರತದಲ್ಲಿ ಟ್ವಿಟರ್​ಗೆ ಬದಲಿಯಾಗಿ ಕೂ ಆ್ಯಪ್​ ಬಳಕೆ ಆರಂಭವಾಗಿದೆ. ಕೇಂದ್ರ ಸರ್ಕಾರ ಹಾಗೂ ಟ್ವಿಟರ್​ ನಡುವಣ ಸಂಘರ್ಷದಿಂದ ಕೂ ಆ್ಯಪ್​ನ ಜನಪ್ರಿಯತೆ ಹೆಚ್ಚಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರವೇ ಕೂಗೆ ಆದ್ಯತೆ ನೀಡುತ್ತಿದೆ. ಈ ಮಧ್ಯೆ, ಕೂ ಆ್ಯಪ್​​ನಲ್ಲಿರುವ ಮಾಹಿತಿಯನ್ನು ಸುಲಭವಾಗಿ ಹ್ಯಾಕ್​ ಮಾಡಬಹುದು ಎಂದು ಹ್ಯಾಕರ್ಸ್​ಗಳು ಹೇಳಿದ್ದಾರೆ. ಇದಕ್ಕೆ ಕೂ ಆ್ಯಪ್​ನವರು ಸರಿಯಾದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

ಮಾನಿಕರ್ ಎಲಿಯಟ್ ಆಲ್ಡರ್ಸನ್ ಎಂದು ಕರೆಯಲ್ಪಡುವ ಫ್ರೆಂಚ್​ ಸೈಬರ್​ ಭದ್ರತಾ ಸಂಶೋಧಕರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಕೂ ಬಳಕೆದಾರರ, ಇ-ಮೇಲ್​ ಐಡಿ, ಲಿಂಗ, ಜನ್ಮದಿನಾಂಕ ಮಾಹಿತಿಯನ್ನು ಸುಲಭವಾಗಿ ಕದಿಯಬಹುದು. ಕೂ ಆ್ಯಪ್​ನಿಂದ ಈ ಮಾಹಿತಿ ಕದಿಯಲು ತೆಗೆದುಕೊಂಡಿದ್ದು ಕೇವಲ 30 ನಿಮಿಷ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಕದ್ದ ಮಾಹಿತಿಯ ಸ್ಕ್ರೀನ್​ಶಾಟ್​ ಕೂಡ ಹಾಕಿದ್ದಾರೆ.

ಇದಕ್ಕೆ ಕೂ ಸಹ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಉತ್ತರಿಸಿದ್ದಾರೆ. ಇವರು ಕದ್ದಿದ್ದೇನೆ ಎಂದು ಹೇಳಿಕೊಂಡಿರುವ ಮಾಹಿತಿ ಕೂ ಪ್ರೊಫೈಲ್​ನಲ್ಲೇ ಕಾಣುತ್ತದೆ. ಬಳಕೆದಾರರು ಸಾರ್ವಜನಿಕವಾಗಿಯೇ ಈ ಮಾಹಿತಿ ಹಂಚಿಕೊಂಡಿರುತ್ತಾರೆ. ಹೀಗಿರುವಾಗ ಇದನ್ನು ಮಾಹಿತಿ ಸೋರಿಕೆ ಎಂದು ಕರೆಯೋಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

 

ಕೂ ಆ್ಯಪ್​ ಮೊಟ್ಟ ಮೊದಲ ಬಾರಿಗೆ ಲಾಂಚ್​ ಆಗಿದ್ದು 2020 ಮಾರ್ಚ್​ ತಿಂಗಳಲ್ಲಿ. ಇದು ಬೆಂಗಳೂರು ಮೂಲದ ಸ್ಟಾರ್ಟ್​​-ಅಪ್​. ಭಾರತದಲ್ಲಿ ಟ್ವಿಟರ್​ಗೆ​ ಬದಲಿ ತಾಣ ಕೂ ಆಗಲಿದೆ ಎನ್ನುವುದು ಅನೇಕರ ಅಭಿಪ್ರಾಯ. ಆತ್ಮನಿರ್ಭರ ಆ್ಯಪ್​ ಚಾಲೆಂಜ್​ ಅನ್ನು ಕೂ ಗೆದ್ದಿದೆ. ಹೀಗಾಗಿ ಸರ್ಕಾರದಿಂದ ಈ ಆ್ಯಪ್​ಗೆ ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ ಇದೆ. ಇಂಗ್ಲಿಷ್​ ಮಾತ್ರ ಅಲ್ಲದೆ, ಕನ್ನಡ ಸೇರಿ ಹಲವು ಭಾರತೀಯ ಭಾಷೆಗಳಲ್ಲಿ ಇದನ್ನು ಬಳಸಬಹುದು.

ಇದನ್ನೂ ಓದಿ: ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್​ಗೆ ಮಹತ್ವ ಕೊಡ್ತಿರೋದೇಕೆ?