DK Shivakumar | ಸಂಪತ್​ ರಾಜ್​ ಬೆನ್ನಿಗೆ ನಿಂತ ಡಿಕೆಶಿ.. ಶಾಸಕರ ಮನೆಗೆ ಬೆಂಕಿ ಕೇಸ್​ನಲ್ಲಿ ಮಾಜಿ ಮೇಯರ್ ಪಾತ್ರವಿಲ್ಲ ಎಂದರು

DK Shivakumar | ಸಂಪತ್​ ರಾಜ್​ ಬೆನ್ನಿಗೆ ನಿಂತ ಡಿಕೆಶಿ.. ಶಾಸಕರ ಮನೆಗೆ ಬೆಂಕಿ ಕೇಸ್​ನಲ್ಲಿ ಮಾಜಿ ಮೇಯರ್ ಪಾತ್ರವಿಲ್ಲ ಎಂದರು
ಡಿ.ಕೆ.ಶಿವಕುಮಾರ್

ಶಾಸಕರ ಮನೆಗೆ ಬೆಂಕಿ ಮತ್ತು 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ನಲ್ಲಿ ಮಾಜಿ ಮೇಯರ್ ಸಂಪತ್​ ರಾಜ್ ಪಾತ್ರವಿಲ್ಲ. ಸಂಪತ್​ ರಾಜ್ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ. ಗಲಭೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

KUSHAL V

|

Feb 25, 2021 | 6:32 PM

ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಮತ್ತು 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ನಲ್ಲಿ ಮಾಜಿ ಮೇಯರ್ ಸಂಪತ್​ ರಾಜ್ ಪಾತ್ರವಿಲ್ಲ. ಸಂಪತ್​ ರಾಜ್ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ. ಗಲಭೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಜೊತೆಗೆ, ಪೊಲೀಸರು ಕೇಸ್​ನಲ್ಲಿ ಸಂಪತ್​ ರಾಜ್​ರನ್ನ ಎಳೆತಂದಿದ್ದಾರೆ ಎಂದು ಹೇಳಿದರು. ಸಂಪತ್​ ರಾಜ್ ವಿರುದ್ಧ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆರೋಪ ವಿಚಾರವಾಗಿ ಸ್ಥಳೀಯ ರಾಜಕೀಯ ಇರುತ್ತೆ, ಅದಕ್ಕೆಲ್ಲ ಪ್ರತಿಕ್ರಿಯಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು. ನಾನು ನಮ್ಮ ಪಕ್ಷದ ವರದಿಗಳನ್ನು ನೋಡಿದ್ದೇವೆ. BJPಯವರು ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ ಎಂದು ಸಹ ಹೇಳಿದರು.

‘ಪುಲಿಕೇಶಿನಗರದ ಮಾಜಿ ಶಾಸಕ ಪ್ರಸನ್ನ ಕುಮಾರ್ ಹಾದಿ ತಪ್ಪಿದ್ರು’ ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸಿದ ಸುದ್ದಗೋಷ್ಠಿ ವೇಳೆ ಪುಲಿಕೇಶಿನಗರದ ಮಾಜಿ ಶಾಸಕ ಪ್ರಸನ್ನ ಕುಮಾರ್​ ಕಾಂಗ್ರೆಸ್​ಗೆ ಮತ್ತೆ ಸೇರ್ಪಡೆಯಾದರು. ಡಿ.ಕೆ.ಶಿವಕುಮಾರ್​ ಪಕ್ಷದ ಬಾವುಟ ನೀಡಿ ಪ್ರಸನ್ನ ಕುಮಾರ್​ರನ್ನು ಬರಮಾಡಿಕೊಂಡರು.

ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್​ ಪುಲಿಕೇಶಿನಗರದ ಮಾಜಿ ಶಾಸಕ ಪ್ರಸನ್ನ ಕುಮಾರ್ ಹಾದಿ ತಪ್ಪಿದ್ರು. ಆದರೆ, ಇವತ್ತು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾನು ಅಖಂಡ ಶ್ರೀನಿವಾಸಮೂರ್ತಿ ಅವರ ಜೊತೆಯೂ ಮಾತಾಡಿದ್ದೇನೆ. ಯಾರೇ ಒಬ್ಬ ವ್ಯಕ್ತಿಯ ಮೇಲೆ ಕಾಂಗ್ರೆಸ್ ಪಕ್ಷ ಕೆಲಸ ಮಾಡಲ್ಲ. ಪ್ರಸನ್ನ ಕುಮಾರ್ ಮೊದಲೇ ಸೇರ್ಪಡೆಯಾಗಬೇಕಿತ್ತು. ಆದರೆ, ಅಖಂಡ ಶ್ರೀನಿವಾಸಮೂರ್ತಿ ಅವರ ಕಾರಣದಿಂದಾಗಿಯೇ ವಿಳಂಬವಾಯಿತು ಎಂದು ಶಿವಕುಮಾರ್​ ಹೇಳಿದರು.

ಅಖಂಡ ಶ್ರೀನಿವಾಸಮೂರ್ತಿ ಸಂಪತ್ ರಾಜ್ ಮೇಲೆ ಆರೋಪ ಮಾಡ್ತಿರೋದು ಅವರ ವೈಯಕ್ತಿಕ ಅನಿಸಿಕೆ. ನಾನು ನಮ್ಮ ಪಕ್ಷದ ವರದಿಗಳನ್ನ ನೋಡಿದ್ದೇನೆ, ಬಿಜೆಪಿ ಅವರು ರಾಜಕೀಯಕ್ಕೆ ಹೇಳ್ತಾರೆ ಬಿಡಿ ಎಂದು ಹೇಳಿದರು.

‘2021ನೇ ವರ್ಷದ ಹೋರಾಟದ ವರ್ಷವೆಂದು ಘೋಷಣೆ’ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಚಿಂತನೆ ನಡೆಸುತ್ತಿದ್ದೇವೆ. ನಮ್ಮ ಶಾಸಕರು ಎಲ್ಲಿರುತ್ತಾರೋ ಅಲ್ಲೇ ಹೋರಾಟಕ್ಕೆ ಸೂಚನೆ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು. 2021ನೇ ವರ್ಷದ ಹೋರಾಟದ ವರ್ಷವೆಂದು ಘೋಷಣೆ ಮಾಡಿದ್ದೇವೆ. ಮಾರ್ಚ್ 3ರಂದು ಬೆಳಗ್ಗೆ ದೇವನಹಳ್ಳಿಯಲ್ಲಿ ಕಾರ್ಯಕ್ರಮ ಇರಲಿದೆ. ಅದೇ ದಿನ ಸಂಜೆ ಚಿಕ್ಕಬಳ್ಳಾಪುರದಲ್ಲಿ 2ನೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವಕುಮಾರ್​ ಹೇಳಿದರು.

ಪ್ರತಿ ಕ್ಷೇತ್ರದಲ್ಲೂ ನಾವು ಜನರ ನಡುವೆಯೇ ಇರುತ್ತೇವೆ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಅಗತ್ಯ ವಸ್ತುಗಳ ದರ ಏರಿಕೆ, ತೆರಿಗೆ ಹೆಚ್ಚಳ ವಿರುದ್ಧ ಧರಣಿ ನಡೆಸುತ್ತೇವೆ. ಜನಜಾಗೃತಿ ಮೂಡಿಸಿ ಕೇಂದ್ರದ ವಿರುದ್ಧ ಹೋರಾಡುತ್ತೇವೆ. ಸಿದ್ದರಾಮಯ್ಯ, ನಾನು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಪಾದಯಾತ್ರೆ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

‘ಮೈಸೂರು ಮೇಯರ್ ಸ್ಥಾನ ಯಾಕೆ ಕೈತಪ್ಪಿದೆ ಎಂದು ಗೊತ್ತಿಲ್ಲ’ ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಅಸಮಾಧಾನವಿಲ್ಲ. ಒಪ್ಪಂದದಂತೆ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಸಿಗಬೇಕಿತ್ತು. ಮೈಸೂರು ಮೇಯರ್ ಸ್ಥಾನ ಯಾಕೆ ಕೈತಪ್ಪಿದೆ ಎಂದು ಗೊತ್ತಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಬಳಿ ವರದಿ ಕೇಳಿದ್ದೇನೆ ಎಂದು ಶಿವಕುಮಾರ್​ ಹೇಳಿದರು.

ಮೇಯರ್ ಆಯ್ಕೆ ಬಗ್ಗೆ JDS ಜೊತೆ ಮಾತುಕತೆ ಬಗ್ಗೆ ಈ ವಿಚಾರವಾಗಿ ಕುಮಾರಸ್ವಾಮಿ ಜೊತೆ ಮಾತನಾಡಿಲ್ಲ. ಆದರೆ ಮಾಜಿ ಸಚಿವ ಸಾ.ರಾ.ಮಹೇಶ್ ಜೊತೆ ಮಾತಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

‘ಸಂಪತ್ ರಾಜ್ ವಿರುದ್ಧ ಕ್ರಮ ತೆಗೆದುಕೊಳ್ಳಲ್ಲ.. ಪಾಷಾನನ್ನೂ ಏನು ಮಾಡಲ್ಲ, ಬಾಷಾನನ್ನೂ ಏನೂ ಮಾಡಲ್ಲ’ ಇತ್ತ, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ ಸಂಬಂಧ 2020ರ ಆಗಸ್ಟ್ 11ರಂದು ದೊಡ್ಡ ಘಟನೆ ನಡೆಯಿತು. ಆ ದಿನ ಬೆಂಗಳೂರಲ್ಲಿ ಶಾಸಕರ ಮನೆಯೇ ಭಸ್ಮವಾಯಿತು. ಹಲವು ಕಡೆ ಗಲಾಟೆ ಮಾಡಿ ಬೆಂಕಿ ಕೂಡ ಹಚ್ಚಿದ್ದರು. BJP ನಿಯೋಗ ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿತ್ತು. ಪರಿಶೀಲನೆ ಮಾಡಿ ಮಾಹಿತಿ ಕಲೆಹಾಕಿ ವರದಿ ಕೊಟ್ಟೆವು. ಕಾಂಗ್ರೆಸ್ ನಾಯಕರು ಆಗ ಯಾರೂ ಅಲ್ಲಿಗೆ ಹೋಗಿಲ್ಲ. NIA ಕೂಡ ಘಟನೆಯ ಬಗ್ಗೆ ವರದಿಯನ್ನ ನೀಡಿದೆ. NIA 7,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

‘ಘಟನೆಗೆ ಮೂಲ ಕಾರಣ SDPI ಕಾರ್ಯಕರ್ತನ ಪೋಸ್ಟ್’ ಅಂದಿನ ಘಟನೆ ಕೇವಲ ರಾಜ್ಯಕ್ಕೆ ಸೀಮಿತವಾದದ್ದಲ್ಲ. ಬೇರೆ ರಾಜ್ಯಗಳಿಗೂ ಸಂಬಂಧ ಕಲ್ಪಿಸುತ್ತಿದೆ ಎಂದಿದ್ದೆವು. ಈ ವಿಚಾರವನ್ನು ನಾವು NIA ಗೆ ಮಾಹಿತಿ ನೀಡಿದ್ದೆವು. ಘಟನೆಗೆ ಮೂಲ ಕಾರಣ ಕೇವಲ ನವೀನ್ ಮಾತ್ರವಲ್ಲ. ಘಟನೆಗೆ ಮೂಲ ಕಾರಣ SDPI ಕಾರ್ಯಕರ್ತನ ಪೋಸ್ಟ್. ಆ ಅವಹೇಳನಕಾರಿ ಪೋಸ್ಟ್‌ಗೆ ನವೀನ್ ಕಮೆಂಟ್ ಹಾಕಿದ್ದ. ಆ ಕಮೆಂಟ್ ಎಲ್ಲೆಡೆ ಹಂಚಿ ದೊಡ್ಡ ಗಲಾಟೆ ಮಾಡಿದ್ದಾರೆ ಎಂದು ಲಿಂಬಾವಳಿ ಹೇಳಿದರು.

40ಕ್ಕೂ ಹೆಚ್ಚು ಗಲಭೆಕೋರರು SDPI ಸಂಪರ್ಕದಲ್ಲಿದ್ದಾರೆ. SDPI ಕಚೇರಿಯಲ್ಲಿ ಆಯುಧ ಸಿಕ್ಕಿದ ಬಗ್ಗೆ ದಾಖಲೆ ಇದೆ. ರಾಷ್ಟ್ರ ವಿರೋಧಿ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಈಗ ಚಾರ್ಜ್‌ಶೀಟ್ ಆಗಿ ಹಲವು ವಿಚಾರ ಹೊರಬರುತ್ತೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

‘ಸಿದ್ದರಾಮಯ್ಯ ಅವಧಿಯಲ್ಲೇ SDPI ವಿರುದ್ಧ ಕೇಸ್‌ಗಳನ್ನು ವಜಾ ಮಾಡಿದ್ದರು’ SDPI BJP ಪಕ್ಷದ B-ಟೀಂ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಅವರ ಅವಧಿಯಲ್ಲೇ ಕೇಸ್‌ಗಳು ವಜಾ ಮಾಡಿದ್ದರು. SDPI ಕೇಸ್‌ಗಳನ್ನು ವಜಾ ಮಾಡಿದ್ದರು. ಆಗ ವಿಪಕ್ಷದಲ್ಲಿದ್ದ ಯಡಿಯೂರಪ್ಪ ಅದನ್ನು ವಿರೋಧಿಸಿದ್ದರು. SDPIನವರು ಪಾಕಿಸ್ತಾನ ಜಿಂದಾಬಾದ್ ಅನ್ನುತ್ತಾರೆ. ಇದೇ ಗೂಂಡಾಗಳಿಂದ RSS ಕಾರ್ಯಕರ್ತರ ಕೊಲೆಯಾಗಿದೆ. ಕೇರಳದಲ್ಲಿ RS ಕಾರ್ಯಕರ್ತರ ಕೊಲೆಯಾಗಿದೆ ಎಂದು ಸಚಿವ ಲಿಂಬಾವಳಿ ಹೇಳಿದರು.

ಕೇರಳದಿಂದ ರಾಜ್ಯಕ್ಕೆ ಬರುತ್ತಿರುವ ಸಂಘಟನೆಯಿಂದ ಕಂಟಕ ಎದುರಾಗಿದೆ. ರಾಷ್ಟ್ರವಿರೋಧಿ ಸಂಘಟನೆಗಳಿಂದ ದೇಶ, ರಾಜ್ಯಕ್ಕೆ ಮಾರಕವಾಗಿದೆ. ಈ ಗಲಭೆ ಪ್ರಕರಣದಲ್ಲಿ ಅವರ ಅಪರಾಧ ಸಾಬೀತಾಗುತ್ತದೆ. ಆಗ ಇದನ್ನು ಬ್ಯಾನ್ ಮಾಡಬೇಕೆಂದು ನಾವು ಒತ್ತಾಯಿಸ್ತೇವೆ. ಕೇಂದ್ರ, ರಾಜ್ಯದಲ್ಲಿ ನಮ್ಮ BJP ಸರ್ಕಾರವೇ ಇದೆ. ಈಗಲೂ SDPI ಬ್ಯಾನ್ ಮಾಡದಿದ್ದರೆ ನಮಗೂ ಮುಜುಗರ ಉಂಟಾಗುತ್ತದೆ. ಇದಕ್ಕೆ ಒಂದಷ್ಟು ಸಾಕ್ಷ್ಯಗಳು ಕೂಡ ಬಿಲ್ಡ್ ಆಗಬೇಕಿದೆ. ಸರ್ಕಾರ ತನ್ನದೇ ಆದ ಚೌಕಟ್ಟಿನಲ್ಲಿ ನಿರ್ಧಾರ ಮಾಡುತ್ತೆ. ಆದಷ್ಟು ಬೇಗ SDPI ಬ್ಯಾನ್ ಮಾಡುವ ಸಂಬಂಧ ನಿರ್ಧಾರ ಮಾಡುತ್ತೆ ಎಂದು ಲಿಂಬಾವಳಿ ಹೇಳಿದರು.

ಸಂಪತ್ ರಾಜ್‌ನನ್ನ ಮಡಿಲಲ್ಲೇ ಕೂರಿಸಿಕೊಂಡಿದ್ದಾರೋ, ಇಲ್ಲಾ ತೊಡೆಯ ಮೇಲೆ ಕೂರಿಸಿಕೊಂಡಿದ್ದಾರೋ ಅಥವಾ ತಲೆ ಮೇಲೆ ಕೂರಿಸಿಕೊಂಡಿದ್ದಾರೋ ಎಂದು ಡಿಕೆಶಿ ಅವರೇ ಉತ್ತರ ಕೊಡಲಿ. ಎಷ್ಟೇ ಆದ್ರೂ ಸಂಪತ್ ರಾಜ್ ವಿರುದ್ಧ ಕ್ರಮ ತೆಗೆದುಕೊಳ್ಳಲ್ಲ. ಪಾಷಾನನ್ನೂ ಏನು ಮಾಡಲ್ಲ, ಬಾಷಾನನ್ನೂ ಏನೂ ಮಾಡಲ್ಲ. ಇವರಿಗೆ ಅಲ್ಪ ಸಂಖ್ಯಾತರ ವೋಟುಗಳಷ್ಟೇ ಬೇಕಾಗಿದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಇದನ್ನೂ ಓದಿ: ದೆಹಲಿ ತಲುಪಿದ ನಂತರ ಬಸನಗೌಡ ಪಾಟೀಲ್​ ಯತ್ನಾಳ್ ನಾಪತ್ತೆ! ಅಜ್ಞಾತವಾಸದಲ್ಲಿ ಮುಂದಿನ ನಡೆಗೆ ತಯಾರಾಗ್ತಿದ್ದಾರಾ ಶಾಸಕ?

Follow us on

Related Stories

Most Read Stories

Click on your DTH Provider to Add TV9 Kannada