Baarack Sheep: ಈ ಪರಿ ಉಣ್ಣೆ ಬೆಳೆಸಿಕೊಂಡ ಕುರಿಯನ್ನು ಎಲ್ಲಾದರೂ ನೋಡಿದ್ದೀರಾ?
Viral Video: ಈ ಕುರಿಯ ಮೈಮೇಲಿದ್ದ ಉಣ್ಣೆಯನ್ನು ತೆಗೆದು ತೂಕ ಮಾಡಿದಾಗ ಅದು ಸುಮಾರು 35 ಕೆ.ಜಿಗೂ ಹೆಚ್ಚು ಭಾರವಿತ್ತಂತೆ. ಒಂದು ವಯಸ್ಕ ಕಾಂಗರೂವಿನ ಅರ್ಧದಷ್ಟು ಭಾರವಿದ್ದ ಉಣ್ಣೆಯನ್ನು ಸ್ವಚ್ಛಗೊಳಿಸಿದ ಮೇಲೆ ಅದು ನೋಡಲು ಕುರಿಯಂತೆ ಕಂಡಿದೆ.
ಚಳಿಗಾಲದಲ್ಲಿ ನಮಗೆಲ್ಲಾ ಬೆಚ್ಚಗೆ ಹೊದ್ದು ಮಲಗಲು, ಕೊರೆಯುವ ಚಳಿಯಿಂದ ರಕ್ಷಣೆ ಪಡೆಯಲು ಏನಾದರೂ ಬೇಕೇಬೇಕು. ಅದರಲ್ಲೂ ಉಣ್ಣೆಯಿಂದ ತಯಾರಿಸಿದ ಸ್ವೆಟರ್ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಬೆಚ್ಚನೆಯ ಬಿಸಿ ಅನುಭವಿಸುತ್ತಾ ಇದ್ದುಬಿಡಬಹುದು. ಆದರೆ, ಕುರಿಗಳಿಗೆ ಹಾಗಲ್ಲ. ಪ್ರಕೃತಿಯೇ ಮೈಮೇಲೆ ಉಣ್ಣೆಯ ಹೊದಿಕೆ ನೀಡಿಬಿಟ್ಟಿದೆ. ವಿಪರ್ಯಾಸವೆಂದರೆ ಒಮ್ಮೊಮ್ಮೆ ನಾವು ವರವೆಂದು ಭಾವಿಸಿದ ಸಂಗತಿಗಳೇ ಕೆಲವರಿಗೆ ಶಾಪವಾಗುತ್ತದೆ. ಇಲ್ಲೊಂದು ಕುರಿಗೂ ಹಾಗೆಯೇ ಆಗಿದೆ.
ಆಸ್ಟ್ರೇಲಿಯಾದ ಸಾಕು ಕುರಿಯೊಂದು ಕಾಡಿನಲ್ಲಿ ಕಳೆದುಹೋಗಿತ್ತು. ಅದಾಗಿ ಅನೇಕ ದಿನಗಳ ನಂತರ ಕೆಲವರಿಗೆ ಹೊರಲಾರದಷ್ಟು ಪ್ರಮಾಣದಲ್ಲಿ ಉಣ್ಣೆ ಬೆಳೆಸಿಕೊಂಡ ಕುರಿಯೊಂದು ಕಂಡುಬಂದಿದೆ. ಆರಂಭದಲ್ಲಿ ಅದು ಯಾವ ಪ್ರಾಣಿಯೆಂದು ಕಂಡುಹಿಡಿಯುವುದಕ್ಕೂ ಕಷ್ಟವಾಗಿತ್ತಂತೆ. ನಂತರ ಅನುಮಾನದಿಂದ ಕುರಿ ಹೌದೋ, ಅಲ್ಲವೋ ಎಂದು ನೋಡಿದಾಗ ಮೈಮೇಲೆ ಮಿತಿಮೀರಿ ಉಣ್ಣೆ ಬೆಳೆದಿರುವ ಕಾರಣ ಅದು ಹಾಗೆ ಕಾಣುತ್ತಿದೆ ಎಂದು ಗೊತ್ತಾಗಿದೆ. ಆ ಕುರಿಯನ್ನು ನೋಡಿ ಬೆಚ್ಚಿಬಿದ್ದ ಜನ ಅದನ್ನು ಕೊನೆಗೂ ಹಿಡಿದು ರಕ್ಷಿಸಿದ್ದಾರೆ.
ಈ ಕುರಿಯ ಮೈಮೇಲಿದ್ದ ಉಣ್ಣೆಯನ್ನು ತೆಗೆದು ತೂಕ ಮಾಡಿದಾಗ ಅದು ಸುಮಾರು 35 ಕೆ.ಜಿಗೂ ಹೆಚ್ಚು ಭಾರವಿತ್ತಂತೆ. ಒಂದು ವಯಸ್ಕ ಕಾಂಗರೂವಿನ ಅರ್ಧದಷ್ಟು ಭಾರವಿದ್ದ ಉಣ್ಣೆಯನ್ನು ಸ್ವಚ್ಛಗೊಳಿಸಿದ ಮೇಲೆ ಅದು ನೋಡಲು ಕುರಿಯಂತೆ ಕಂಡಿದೆ. ರಕ್ಷಿಸಲಾದ ಕುರಿಗೆ ಬರಾಕ್ ಎಂದು ಹೆಸರಿಡಲಾಗಿದ್ದು, ಮೆಲ್ಬೋರ್ನ್ನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿರುವ ವಿಕ್ಟೋರಿಯಾದ ಲ್ಯಾನ್ಸ್ ಫೀಲ್ಡ್ ಬಳಿಯ ಎಡ್ಗರ್ಸ್ ಮಿಷನ್ ಫಾರ್ಮ್ ಸಿಬ್ಬಂದಿ ಅದರ ಆರೈಕೆ ಮಾಡುತ್ತಿದ್ದಾರೆ.
ಉಣ್ಣೆ ತೆಗೆದ ನಂತರ ಕುರಿಯ ಕಿವಿಯಲ್ಲಿ ಟ್ಯಾಗ್ ಇರುವುದು ಕಂಡುಬಂದಿದ್ದು, ಇದನ್ನು ಈ ಹಿಂದೆ ಯಾರೋ ಸಾಕುತ್ತಿದ್ದರು ಎನ್ನುವುದು ಸ್ಪಷ್ಟ ಎಂದು ಫಾರ್ಮ್ ಸಿಬ್ಬಂದಿ ಬೆಹ್ರೆಂಡ್ ಅಭಿಪ್ರಾಯಪಟ್ಟಿದ್ದಾರೆ. ಕಲ್ಲು ಬಂಡೆಗಳ ನಡುವೆ ಓಡಾಡಿದ ಕುರಿಯ ಕಾಲು ಸಾಕು ಕುರಿಗಳ ಕಾಲಿಗಿಂತಲೂ ಹೆಚ್ಚು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ಈ ಕುರಿಯ ಮೈಮೇಲೆ ಬೆಳೆದ ಉಣ್ಣೆಯನ್ನು ದೀರ್ಘಕಾಲದ ತನಕ ಯಾರೂ ತೆಗೆದಿರದ ಕಾರಣ ಅದು ಮುಖದ ಮೇಲೆಲ್ಲಾ ಆವರಿಸಿಕೊಂಡು ಕಣ್ಣಿಗೂ ಅಡ್ಡಿಯಾಗಿತ್ತಂತೆ. ಫಾರ್ಮ್ ಸಿಬ್ಬಂದಿ ಹೇಳುವ ಪ್ರಕಾರ ಹೀಗೆ ಹೆಚ್ಚು ಉಣ್ಣೆ ಹೊಂದುವ ಕುರಿಗಳ ಮೈಯನ್ನು ಕನಿಷ್ಠ ಒಂದು ವರ್ಷಕ್ಕೊಮ್ಮೆಯಾದರೂ ಸ್ವಚ್ಛ ಮಾಡದಿದ್ದರೆ ಅದು ಮಿತಿಮೀರಿ ಬೆಳೆದು ಕುರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸದ್ಯ ಆಸ್ಟ್ರೇಲಿಯಾದ ಈ ಕುರಿಯ ವಿಡಿಯೋ ವೈರಲ್ ಆಗಿದ್ದು, ನೋಡಿದವರೆಲ್ಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ
ಇದನ್ನೂ ಓದಿ: ಹಾರುವ ದೋಸೆ ನಂತರ ವೈರಲ್ ಆಯ್ತು ರಜನಿಕಾಂತ್ ಸ್ಟೈಲ್ ದೋಸೆ