ಮೈಸೂರು: ಜಿಲ್ಲೆಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಸೋಂಕಿತರ ಕಡೆಗಣನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಸ್ಥಳೀಯ ಶಾಸಕ ರಾಮ್ದಾಸ್ ಸೋಂಕಿತರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಕ್ಷೇತ್ರದ ವಿದ್ಯಾರಣ್ಯಪುರಂನಲ್ಲಿರುವ ಸೋಂಕಿತನ ಕುಟುಂಬಸ್ಥರು ಶಾಸಕ ಮತ್ತು ಆತನ ಬೆಂಬಲಿಗರ ಜೊತೆ ವಾಗ್ವಾದಕ್ಕೆ ಇಳಿದರು.
ಶಾಸಕ ರಾಮದಾಸ್ ಜೊತೆ ಮಾತಿನ ಚಕಮಕಿಗೆ ಇಳಿದ ಕುಟುಂಬಸ್ಥರು ಸೋಂಕಿತರು ತಮ್ಮ ಮನೆಯಲ್ಲೇ ಇದ್ರೂ ಯಾರೂ ಕ್ಯಾರೇ ಅಂತಿಲ್ಲ. ಸೊಂಕಿತರ ಮನೆ ಸೇರಿದಂತೆ ಆಸುಪಾಸಿನಲ್ಲಿ ಸ್ಯಾನಿಟೈಸ್ ಮಾಡಿಲ್ಲ. ವಾರದಿಂದ ಮನೆಯಲ್ಲಿ ಸಂಗ್ರಹವಾದ ಕಸ ತೆಗೆದುಕೊಂಡು ಹೋಗಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
Scene create ಮಾಡಬೇಡಿ ಎಂದಿದ್ದಕ್ಕೆ ಕುಟುಂಬಸ್ಥರಿಂದ ತರಾಟೆ ಜೊತೆಗೆ, ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ನೀವು ಬರುತ್ತೀರೆಂದು ಇಂದು ರಸ್ತೆಯನ್ನ ಗುಡಿಸಿ ಸ್ವಚ್ಛ ಮಾಡಿದ್ದಾರೆ ಎಂದು ಸಿಟ್ಟಿನಿಂದ ಮಾತನಾಡಿದರು. ಸ್ಥಳೀಯ ಪಾಲಿಕೆ ಸದಸ್ಯ ರಾಮಪ್ರಸಾದ್ ಅವರು ಬಂದು ಹೋಗಿದ್ದಾರೆ. ಪ್ರತಿಯೊಂದಕ್ಕೂ ಅವರನ್ನೇ ಕೇಳಬೇಕಿದೆ. ನೀವು ಈಗ ಬಂದಿದ್ದೀರಾ ಎಂದು ಸ್ಥಳೀಯರು ರಾಮದಾಸ್‌ಗೆ ಪ್ರಶ್ನೆ ಮಾಡಿದರು.
ಇದೇ ವೇಳೆ ಶಾಸಕ ರಾಮ್ದಾಸ್ರ ಬೆಂಬಲಿಗನೊಬ್ಬ scene create ಮಾಡಬೇಡಿ ಎಂದನಂತೆ. ಇದರಿಂದ ಮತ್ತಷ್ಟು ಕೆರಳಿದ ಸೋಂಕಿತನ ಕುಟುಂಬಸ್ಥರು ನಮ್ಮ ಸಮಸ್ಯೆಯನ್ನು ಬಗೆಹರಿಸಲು ಕೇಳ್ತಿದ್ದೀವಿ. ಇದಕ್ಕೆ ಸೀನ್ ಕ್ರಿಯೇಟ್ ಮಾಡಬೇಡಿ ಅಂದರೆ ಏನರ್ಥ ಎಂದು ಶಾಸಕರನ್ನ ಸಿಕ್ಕಾಪಟ್ಟೆ ತರಾಟೆಗೆ ತೆದೆದುಕೊಂಡರು.
ಈ ವೇಳೆ ಸಮಸ್ಯೆ ಬಗೆಹರಿಸಲು ಯತ್ನಿಸಿದ ರಾಮದಾಸ್ ನಿಮ್ಮ ಮನೆ ಬಾಗಿಲಿಗೆ ಬಂದರೂ ಈ ರೀತಿ ಹೇಳ್ತೀರಾ. ಸೋಂಕು ನಿಯಂತ್ರಣಕ್ಕಾಗಿ ಕಳೆದ ನಾಲ್ಕು ತಿಂಗಳಿಂದ ಅವಿರತವಾಗಿ ದುಡಿಯತ್ತಿದ್ದೇವೆ. ಆದರೂ ಜನರಿಂದ ಈ ರೀತಿಯ ಮಾತುಗಳನ್ನು ಕೇಳಬೇಕಾಗಿದೆ ಎಂದು ಜನರನ್ನು ಸಮಾಧಾನಪಡಿಸಲು ಮುಂದಾದರು.
ಜೊತೆಗೆ, ಅಲ್ಲೇ ನೆರೆದಿದ್ದ ಅಧಿಕಾರಿಗಳಿಗೆ ಮಹಾನಗರ ಪಾಲಿಕೆ ಸತ್ತು ಹೋಗಿದ್ಯಾ? ಎಂದು ಖಾರವಾಗಿ ಪ್ರಶ್ನಿಸಿದರು. ನಿಮ್ಮ ಅಯೋಗ್ಯತನದಿಂದ ನಾವು ಜನರಿಂದ ಇಂಥ ಮಾತುಗಳನ್ನು ಕೇಳಬೇಕಾಗಿದೆ ಎಂದು ಅಧಿಕಾರಿಗಳನ್ನು ರಾಮದಾಸ್ ತರಾಟೆಗೆ ತೆಗೆದುಕೊಂಡರು.