ಚಿಕ್ಕ ಕಾಮಗಾರಿಗೂ ನನಗೆ ಕಷ್ಟ ಕೊಡ್ತಿದ್ದಾರೆ -ಸಚಿವ ಜಾರಕಿಹೊಳಿ ವಿರುದ್ಧ ಹೆಬ್ಬಾಳ್ಕರ್ ಕೆಂಡ

ಚಿಕ್ಕ ಕಾಮಗಾರಿಗೂ ನನಗೆ ಕಷ್ಟ ಕೊಡ್ತಿದ್ದಾರೆ -ಸಚಿವ ಜಾರಕಿಹೊಳಿ ವಿರುದ್ಧ ಹೆಬ್ಬಾಳ್ಕರ್ ಕೆಂಡ
ಲಕ್ಷ್ಮಿ ಹೆಬ್ಬಾಳ್ಕರ್ (ಎಡ) , ರಮೇಶ್ ಜಾರಕಿಹೊಳಿ (ಬಲ)

ಬೆಳಗಾವಿ: ಐದು ಲಕ್ಷ ರೂಪಾಯಿ ಮಂಜೂರು ಮಾಡಲು ಸಹ ನನಗೆ ಕಷ್ಟ ಕೊಡುತ್ತಿದ್ದಾರೆ ಎಂದು ಜಿಲ್ಲೆಯ ಸುಳೇಬಾವಿಯಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ.

ನಾನು ಶಾಸಕಿಯಾದಾಗಿನಿಂದ ಒಂದಲ್ಲ ಒಂದು ಕಷ್ಟ ಬರುತ್ತಿವೆ. ಕಾಂಗ್ರೆಸ್ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಹೆಣ್ಣುಮಗಳಿಗೆ ಏನೆಲ್ಲ ಕಷ್ಟ ಬರಬೇಕು ಅದೆಲ್ಲಾ ಒಮ್ಮೆಗೆ ಬಂತು. ಶಾಸಕಿ ಆದ ಮೇಲೆ ಎಲ್ಲಾ ಸರಿಹೋಗುತ್ತೆ ಅಂದುಕೊಂಡಿದ್ದೆ.

ಆದರೆ ಶಾಸಕಿ ಆದ ಮೇಲೆ ಸಂಘರ್ಷ ಜಾಸ್ತಿಯಾಯ್ತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ, ನನಗೆ ಯಾರು ಕಷ್ಟ ಕೊಡ್ತಿದಾರೆ ಎಂದು ತಮಗೆಲ್ಲಾ ಗೊತ್ತು ಅಂತಾ ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬೆಟ್ಟು ಮಾಡಿದ್ದಾರೆ.

ಚೆನ್ನಾಗಿ ಕೆಲಸ ಮಾಡಿದ್ರೆ ಒಳ್ಳೆಯ ಹೆಸರು ಬರುತ್ತೆ ಅಂತಾ ಬಹಳ ಪ್ರಾಬ್ಲಂ ಕೊಡ್ತಿದ್ದಾರೆ. ಆದರೆ ನಾನು ಯಾವುದಕ್ಕೂ ಜಗ್ಗುತ್ತಿಲ್ಲ, ನಿತ್ಯ ಒಂದು ಕೋಟಿ ರೂಪಾಯಿಯಷ್ಟು ಕೆಲಸ ಮಾಡ್ತಿದ್ದೀನಿ. ಅವರು ನನ್ನನ್ನ ಎಷ್ಟು ತಡಿಬೇಕು ಅಂತಾ ಪ್ರಯತ್ನಿಸುತ್ತಾರೋ ಅಷ್ಟು ಜೋರು ನನ್ನ ಕೆಲಸ ಮಾಡ್ತಿದ್ದೀನಿ ಎಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಅವರದ್ದೇ ಸರ್ಕಾರ, ಅವರದ್ದೇ ಮಂತ್ರಿಗಳು ಇದ್ದಾರೆ. ಆದರೆ, ಅದೇ ಅಧಿಕಾರಿಗಳನ್ನ ಒಪ್ಪಿಸಿ ನನ್ನ ಕ್ಷೇತ್ರದ ಕೆಲಸ ಮಾಡಿಸುತ್ತಿದ್ದೇನೆ ಅಂತಾ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿಯಾಗಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ 4 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕೊಟ್ಟಿದ್ದಾರೆ.

Click on your DTH Provider to Add TV9 Kannada