ಮೈಸೂರು: ಮಹಾಮಾರಿ ಕೊರೊನಾ ವಿದ್ಯಾರ್ಥಿಗಳ ಬದುಕನ್ನೇ ಅಂಧಕಾರಕ್ಕೆ ನೂಕಿತ್ತು. 8 ತಿಂಗಳಿನಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ರು. ಸದ್ಯ ಈಗ ಸರ್ಕಾರ ಕಾಲೇಜು ತೆರೆಯಲು ಅನುಮತಿ ನೀಡಿದ್ದು, ಇಂದಿನಿಂದ ಮರಳಿ ಕಾಲೇಜುಗಳತ್ತ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದಾರೆ. ಆದರೆ ಕೊವಿಡ್ ಟೆಸ್ಟ್ ಕಡ್ಡಾಯ ಮಾಡಿರುವುದು ಕೆಲ ಸಮಸ್ಯೆಗಳನ್ನು ತಂದೊಡ್ಡಿದೆ.
ಕಾಲೇಜುಗಳಲ್ಲಿ ಕೊರೊನಾ ರಿಪೋರ್ಟ್ ಇಲ್ಲದೆ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ. ಹೀಗಾಗಿ ಕೊರೊನಾ ಟೆಸ್ಟ್ ಕಡ್ಡಾಯ. ಆದ್ರೆ ಮಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲು ಹಣವಿಲ್ಲ ಎಂದು ಪೋಷಕರು ಕಣ್ಣೀರಿಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇನ್ನು ಬೆಂಗಳೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ಟೆಸ್ಟ್ ಮಾಡಿಸಿ ಮೂರು ದಿನ ಆದ ಮೇಲೆ ರಿಪೋರ್ಟ್ ಬರುತ್ತೆ ನಾವು ಊರಿಂದ ಬಂದಿದ್ದೇವೆ. ಎಲ್ಲಿ ಟೆಸ್ಟ್ ಮಾಡಿಸಬೇಕು ಎಂಬುವುದೇ ಗೊತ್ತಿಲ್ಲ ಎಂದು ತಮ್ಮ ಗೊಂದಲಗಳನ್ನು ಹೇಳಿಕೊಂಡಿದ್ದಾರೆ. ಈ ನಡುವೆ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೇ ಕೊರೊನಾ ಟೆಸ್ಟ್ ಮಾಡಿಸುವ ಮೂಲಕ ಮೈಸೂರಿನ ಮಹಾರಾಣಿ ಕಾಲೇಜು ಮಾದರಿಯಾಗಿದೆ.
ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಮಹಾರಾಣಿ ಕಲಾ ಕಾಲೇಜಿನಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಕೊವಿಡ್ ಟೆಸ್ಟ್ ಮಾಡಿಸದೇ ಇರುವ ಸ್ಟೂಡೆಂಟ್ಸ್, ಸಿಬ್ಬಂದಿಗೆ ಆರೋಗ್ಯ ಇಲಾಖೆ ಮತ್ತು ಮೈಸೂರು ಪಾಲಿಕೆ ಸಹಯೋಗದಲ್ಲಿ ಟೆಸ್ಟ್ ಮಾಡಿಸಲಾಗುತ್ತಿದೆ.