ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಲು ಪಾಲಿಕೆ ಅಧಿಕಾರಿಯಿಂದ ಸುಪಾರಿ?

  • TV9 Web Team
  • Published On - 14:30 PM, 22 Nov 2020
ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಲು ಪಾಲಿಕೆ ಅಧಿಕಾರಿಯಿಂದ ಸುಪಾರಿ?

ಮೈಸೂರು: ಮಹಾನಗರ ಪಾಲಿಕೆ ಅಧಿಕಾರಿಯೇ ಪೌರಕಾರ್ಮಿಕ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ನಡೆಸಲು ಸುಪಾರಿ ಕೊಟ್ಟಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ನಗರದ ಪುಲಕೇಶಿ ರಸ್ತೆಯ ಬಿಬಿ ಕೇರಿಯಲ್ಲಿ ನ.19ರಂದು ಪೌರಕಾರ್ಮಿಕ ಶಿವಕುಮಾರ್​ ಮತ್ತು ಆತನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆದಿತ್ತು.

ಶಿವಕುಮಾರ್ ವಾಸವಿರುವ ಮನೆ ಮತ್ತು ಅವರ ಸುಪರ್ದಿಯಲ್ಲಿರುವ ಖಾಲಿ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ ತೀರ್ಪು ಶಿವಕುಮಾರ್ ಪರ ಹೊರಬಂದ ಹಿನ್ನೆಲೆಯಲ್ಲಿ ಆತನ ಮೇಲೆ ಹಲ್ಲೆ ನಡೆಸಲು ಕೆಲ ಪುಂಡರಿಗೆ ಆಕ್ರೋಶಗೊಂಡ ಪಾಲಿಕೆಯ ಕಂದಾಯ ನಿರೀಕ್ಷಕ ಕುಪ್ಪರಾಜು ಸುಪಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಕುಪ್ಪರಾಜು ಸಹೋದರರಾದ ಹರಿಪ್ರಸಾದ್​ ಮತ್ತು ವಿಶ್ವನಾಥ್ ಸೇರಿದಂತೆ ಹಲವರು ಶಿವಕುಮಾರ್ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಸದ್ಯ, ಗಾಯಾಳುಗಳು ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೆ ಸಂಬಂಧಿಸಿದಂತೆ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ನಗರದ ಎನ್​.ಆರ್​.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೂ ಪೊಲೀಸರು ಕುಪ್ಪರಾಜುನ ಹೆಸರನ್ನು ಪ್ರಕರಣದಿಂದ ಕೈಬಿಟ್ಟಿದ್ದಾರೆ ಎಂದು ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.