ದೇಶಕ್ಕೆ ಮಾದರಿಯಾಗಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ವೈದ್ಯರಿಲ್ಲದೆ ರೋಗಿಗಳ ನರಳಾಟ, ಯಾವೂರಲ್ಲಿ?
ತಾವರೆಕೆರೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ದೇಶಕ್ಕೆ ಮೂರನೇ ಸ್ಥಾನ ಗಳಿಸಿತ್ತು. ಇದಕ್ಕಾಗಿ ಪ್ರಶಸ್ತಿ ಸಹ ನೀಡಲಾಗಿತ್ತು. ಇಲ್ಲಿನ ವೈದ್ಯರೇ ದೆಹಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದರು.

ದಾವಣಗೆರೆ: ಅದು ಇಡಿ ದೇಶಕ್ಕೆ ಮಾದರಿಯಾದ ಸಂಸ್ಥೆ. ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನಗಳಿಸಿದ್ದ ಸಂಸ್ಥೆ. ಇದಕ್ಕಾಗಿ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಕ್ಕೆಲ್ಲಾ ಕಾರಣ ಅಲ್ಲಿದ್ದ ಓರ್ವ ವೈದ್ಯ. ಆದ್ರೆ ಆ ವೈದ್ಯ ಉನ್ನತ ಅಧ್ಯಯನಕ್ಕಾಗಿ ಬೇರೆ ಕಡೆ ಹೋದರು. ಹೀಗೆ ವೈದ್ಯ ಹೋಗಿದ್ದೆ ತಡ ಯಾರೂ ಅತ್ತ ಬರಲೇ ಇಲ್ಲಾ. ದೇಶಕ್ಕೆ ಮಾದರಿಯಾದ ಸಂಸ್ಥೆಯಲ್ಲಿ ಈಗ ಜನ ನರಳುವಂತಾಗಿದೆ.
ಹಸಿರು ತಪ್ಪಲಿನಲ್ಲಿರುವ ತಾವರೆಕೆರೆ ಅಂದ್ರೆ ತಪ್ಪಾಗಲಿಕ್ಕಿಲ್ಲ..
ನಾವು ಹೇಳುತ್ತಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ. ಸುತ್ತಲು ಅಡಿಕೆ ತೋಟ. ಮಲೆನಾಡಿನ ಉಡಿಯಲ್ಲಿ ಇರುವ ಗ್ರಾಮ ಒಂದು ರೀತಿಯಲ್ಲಿ ಹಸಿರು ತಪ್ಪಲಿನಲ್ಲಿರುವ ತಾವರೆಕೆರೆ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆ ಒಂದು ಸರ್ವೇ ಮಾಡಿಸಿತ್ತು. ದೇಶದಲ್ಲಿ ಇರುವ ಸರ್ಕಾರಿ ಆರೋಗ್ಯ ಸಂಸ್ಥೆಗಳು ಗುಣಮಟ್ಟದ ಚಿಕಿತ್ಸೆ ಹಾಗೂ ಸ್ವಚ್ಛತೆಗೆ ಆಧ್ಯತೆ ನೀಡಿದ ಸಂಸ್ಥೆಗಳನ್ನ ಗುರ್ತಿಸಿ ಇಂತಹ ಸಂಸ್ಥೆಗಳನ್ನ ಗೌರವಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರ ದೇಶಕ್ಕೆ ಮೂರನೇ ಸ್ಥಾನ ಗಳಿಸಿತ್ತು.. ಇಂತಹ ಸಮೀಕ್ಷೆಯಲ್ಲಿ ತಾವರೆಕೆರೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ದೇಶಕ್ಕೆ ಮೂರನೇ ಸ್ಥಾನ ಗಳಿಸಿತ್ತು. ಇದಕ್ಕಾಗಿ ಪ್ರಶಸ್ತಿ ಸಹ ನೀಡಲಾಗಿತ್ತು. ಇಲ್ಲಿನ ವೈದ್ಯರೇ ದೆಹಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದರು.
ಇದರಿಂದ ಆಸ್ಪತ್ರೆ ವ್ಯಾಪ್ತಿಗೆ ಬರುವ 24 ಗ್ರಾಮಗಳ ಗ್ರಾಮಸ್ಥರು ಸಂತಸ ಪಟ್ಟಿದ್ದರು. ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಶಿವಣಿ ಸೇರಿದಂತೆ ಹತ್ತಾರು ಗ್ರಾಮದ ಜನ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿದ್ದ ಡಾ. ದೇವರಾಜ್ ಎಂಬ ವೈದ್ಯ ಸ್ನಾತಕೋತ್ತರ ಅಧ್ಯಯನಕ್ಕಾಗಿ ಹೋದ್ರು.
ಅವರು ಹೋದ ಬಳಿಕ ಯಾವ ವೈದ್ಯರೂ ಸಹ ಈ ಆಸ್ಪತ್ರೆಯತ್ತ ಬರಲೇ ಇಲ್ಲಾ. ಇದ್ದ ಇಬ್ಬರು ನರ್ಸಗಳೆ ಆಸ್ಪತ್ರೆ ಜೀವಾಳ. ಜನ ಚಿಕಿತ್ಸೆಗಾಗಿ 25 ಕಿಲೋ ಮೀಟರ್ ದೂರದ ಚನ್ನಗಿರಿಗೆ ಹೋಗುವುದು ಅನಿವಾರ್ಯವಾಗಿದೆ.
ಮೇಲಾಗಿ ಓರ್ವ ನರ್ಸ್ ಇದ್ದರು ಇತ್ತೀಚಿಗೆ ಅವರು ತೀರ್ಥಹಳ್ಳಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಇವರಿದ್ದಾಗ ಸುತ್ತಲಿನ ಗ್ರಾಮಗಳ ಮಹಿಳೆಯರ ಹೆರಿಗೆ ಅವರೇ ಮಾಡುತ್ತಿದ್ದರು. ತುರ್ತು ಪರಿಸ್ಥಿತಿಯಲ್ಲಿ ನೇರವಾಗಿ ಮನೆಗೆ ಹೋಗಿ ಹೆರಿಗೆ ಮಾಡಿಸಿದ ನಿದರ್ಶನಗಳೂ ಇವೆ.
ದೇಶಕ್ಕೆ ಮಾದರಿಯಾದ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲಾ.. ಡಾ. ದೇವರಾಜ ಹೋದ ಬಳಿಕ ಜಿಲ್ಲಾಡಳಿತ ಈ ಆಸ್ಪತ್ರೆಗೆ ಯಾವುದೇ ವೈದ್ಯರನ್ನ ನೇಮಕ ಮಾಡಿಲ್ಲ. ಮೇಲಾಗಿ ಇಡಿ ದಾವಣಗೆರೆ ಜಿಲ್ಲೆಯ ಗಡಿಭಾಗ. ದಾವಣಗೆರೆ ನಗರದಿಂದ 100 ಕಿಲೋ ಮೀಟರ್ ದೂರದಲ್ಲಿದೆ. ಇದೇ ಕಾರಣಕ್ಕೆ ವೈದ್ಯರು ಬರಲು ಹಿಂದೇಟು ಹಾಕುವ ಸಾಧ್ಯತೆ ಜಾಸ್ತಿ. ಹೀಗೆ ಒಂದು ಕಾಲದಲ್ಲಿ ದೇಶಕ್ಕೆ ಮಾದರಿಯಾದ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲಾ.
ಇದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದ ಸಂಸ್ಥೆ ಇಂತಹ ಸಾವಿರಾರು ಜನರ ಆರೋಗ್ಯ ಪಾಲನೆಯ ಜವಾಬ್ದಾರಿ ಹೊತ್ತಿತ್ತು. ಆದ್ರೆ ಈಗ ದೇವರಿಲ್ಲದ ಗುಡಿಯಾಗಿದೆ. ಹೋದ್ರೆ ಕೇವಲ ಪೂಜಾರಿಗಳು ಮಾತ್ರ ಕಂಡು ಬರುತ್ತಾರೆ. ಆದ್ರೆ ವೈದ್ಯನೆಂಬ ದೇವರು ಮಾತ್ರ ಇಲ್ಲಿಗೆ ಬರುತ್ತಿಲ್ಲ. ಇಂತಹ ಅಪರೂಪದ ಸಂಸ್ಥೆಗೆ ಸರ್ಕಾರ ವೈದ್ಯರನ್ನ ನೇಮಕ ಮಾಡಿ ಜನರ ಸಂಕಷ್ಟಕ್ಕೆ ಸ್ಪಂಧಿಸಬೇಕಾಗಿದೆ. -ಬಸವರಾಜ್ ದೊಡ್ಮನಿ