
ಕೊಡಗು: ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ ಬ್ರಹ್ಮಗಿರಿ ಬೆಟ್ಟಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ನೀಡಿದ ಪರಿಹಾರದ ಚೆಕ್ ಇದೀಗ ಗೊಂದಲಕ್ಕೆ ಕಾರಣವಾಗಿದೆ. ಮೃತ ನಾರಾಯಣಾಚಾರ್ ಪುತ್ರಿಯರ ಹೆಸರು ಬದಲಾಗಿರುವ ಹಿನ್ನೆಲೆಯಲ್ಲಿ ಹಣ ಪಡೆಯಲಾಗದೆ ಅವರಿಬ್ಬರು ಸರ್ಕಾರದ ಚೆಕ್ ಹಿಂದಿರುಗಿಸಿದರು.
ಆದ್ದರಿಂದ ಜಿಲ್ಲಾಡಳಿತವು ಪುತ್ರಿಯರಿಬ್ಬರಿಗೂ ನಾಮ ಪರಿವರ್ತನೆಯ ಸೂಕ್ತ ದಾಖಲೆಗಳನ್ನು ನೀಡಲು ಸೂಚಿಸಿದ್ದಾರೆ. ಕಳೆದ ಆಗಸ್ಟ್ 15ರಂದು ಮೃತ ನಾರಾಯಣಾಚಾರ್ ಪುತ್ರಿಯರಿಗೆ ಸಚಿವ ವಿ. ಸೋಮಣ್ಣ ಪರಿಹಾರದ ಚೆಕ್ಗಳನ್ನು ನೀಡಿದ್ದರು. ಇದಲ್ಲದೆ, ನಾರಾಯಣಾಚಾರ್ ಜೊತೆ ಮೃತರಾದ ಅವರ ಸಹೋದರ ಆನಂದತೀರ್ಥರ ಪರಿಹಾರದ ಚೆಕ್ನ ಅವರ ಸಹೋದರಿಗೆ ವಿತರಣೆ ಮಾಡಿದ್ದರು.
ಆಗ ಪುತ್ರಿಯರಿಬ್ಬರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಆನಂದ ತೀರ್ಥರ ಚೆಕ್ನ ಮಡಿಕೇರಿ ತಹಶೀಲ್ದಾರ್ ಮಹೇಶ್ ತಡೆಹಿಡಿದಿದ್ದರು.