
ಮೈಸೂರು: ಸರಳ ದಸರಾವನ್ನು ಯಾವುದೇ ಅಡಚಣೆಗಳಿಲ್ಲದಂತೆ ಸುಸೂತ್ರವಾಗಿ ನೆರವೇರಿಸಲಾಗಿದೆ. ದಸರಾ ಮುಗಿದ ಹಿನ್ನೆಲೆಯಲ್ಲಿ ಈಗ ಗಜಪಡೆಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ ನೀಡಲಾಗುತ್ತಿದೆ. ನಾಳೆ ಅಭಿಮನ್ಯು ಅಂಡ್ ಟೀಂ ಕಾಡಿನತ್ತ ತೆರಳಲಿದ್ದಾರೆ.
ದಸರಾದ ವೈಭವವನ್ನು ಹೆಚ್ಚಿಸುವ ಗಜಪಡೆ ನಾಳೆ ತಮ್ಮ ತಮ್ಮ ‘ಮನೆಗಳಿಗೆ’ ತೆರಳಿವೆ. ಹೀಗಾಗಿ ಇಂದು ದಸರಾ ಆನೆಗಳಿಗೆ ಮತ್ತು ಮಾವುತರಿಗೆ ವಿಶೇಷ ಭೋಜನ ಅತಿಥ್ಯ ಸತ್ಕಾರ ಮಾಡಲಾಗುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಯಶಸ್ವಿಯಾದ ಹಿನ್ನೆಲೆ ಗಜಪಡೆಗೆ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ಪೂಜೆ ಸಲ್ಲಿಸಿದ್ರು.
ಅಭಿಮನ್ಯು, ವಿಕ್ರಮ, ಗೋಪಿ, ವಿಜಯಾ, ಕಾವೇರಿಗೆ ಪುಷ್ಪಾರ್ಚನೆ ಮಾಡಿ, ಆನೆಗಳಿಗೆ ಕಬ್ಬು ಬೆಲ್ಲ ನೀಡಿದ್ರು. ಬಳಿಕ ಗಜಪಡೆ ಮಾವುತರು, ಕಾವಾಡಿಗರಿಗೆ ಪ್ರೋತ್ಸಾಹಧನ ವಿತರಿಸಿದ್ರು. ಈ ವೇಳೆ ಶಾಸಕರಾದ ರಾಮದಾಸ್, ನಾಗೇಂದ್ರ, ಮುಡಾ ಅಧ್ಯಕ್ಷ ರಾಜೀವ್ ಸಾಥ್ ಕೊಟ್ರು.
ಅಭಿಮನ್ಯು ಬಗ್ಗೆ ಸಂತಸವಿದೆ
ಅಭಿಮನ್ಯು ಯಶಸ್ಸಿನ ಬಗ್ಗೆ ಮಾವುತ ವಸಂತ ಸಂತಸ ಹಂಚಿಕೊಂಡಿದ್ದಾರೆ. ಅಭಿಮನ್ಯು ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಸಾಗಿದ. ಪ್ರಾರಂಭದಲ್ಲಿ ಹೆದರಿಕೆ ಇತ್ತು. ಅಧಿಕಾರಿಗಳು ಧೈರ್ಯ ತುಂಬಿದ್ರು. ಮಾಡೇ ಮಾಡ್ತಾನೆ ಹೆದರಬೇಡ ಎಂದಿದ್ರು. ಮರದ ಅಂಬಾರಿ ಹೊತ್ತಿದ್ದ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತಿರಲಿಲ್ಲ.
ಆದರೆ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಅಭಿಮನ್ಯು ಕಾರ್ಯದ ಬಗ್ಗೆ ಖುಷಿಯಾಗಿದೆ. ಶ್ರೀರಂಗಪಟ್ಟಣದಲ್ಲಿ ಪುಷ್ಪಾರ್ಚನೆ ಮಾಡಿದ ಅನುಭವ ಅಭಿಮನ್ಯುಗೆ ಇತ್ತು. ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ನಡೆಸಿಕೊಟ್ಟಿದ್ದಾನೆ ಎಂದು ಮಾವುತ ವಸಂತ ಖುಷಿಯಲ್ಲಿ ತೇಲಾಡಿದ್ದಾರೆ.