ಸೈಟ್ ವಿಚಾರವಾಗಿ ಯೋಧನ ಕುಟುಂಬಸ್ಥರ ಮೇಲೆ BJP ಮುಖಂಡನಿಂದ ಹಲ್ಲೆ ಆರೋಪ.. DC ಮೊರೆ ಹೋದ ಮಹಿಳೆ
ಬೆಳಗಾವಿ: ಸೈಟ್ ವಿಚಾರವಾಗಿ ಯೋಧನ ಕುಟುಂಬಸ್ಥರ ಮೇಲೆ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಸೇರಿ ಇಬ್ಬರು ಸಂಗಡಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿ: ಸೈಟ್ ವಿಚಾರವಾಗಿ ಯೋಧನ ಕುಟುಂಬಸ್ಥರ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ ನಡೆದಿರುವ ಘಟನೆ ಬೆಳಗಾವಿ ತಾಲೂಕಿನ ಕಣಬರಗಿಯಲ್ಲಿ ನಡೆದಿದೆ. ಜಿಲ್ಲಾ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜನವರಿ 31ರಂದು ಯೋಧ ಭೀಮಪ್ಪ ನರಸಗೋಳ ಮಗ ವಿಜಯ್ ಮೇಲೆ ರಾಡ್‌ನಿಂದ ಮನಬಂದಂತೆ ಜಿಲ್ಲಾ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ್ ಹಾಗೂ ಇಬ್ಬರು ಸಂಗಡಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೂ ದೂರು ಸ್ವೀಕರಿಸಲಿಲ್ಲ ಎಂದು ಮಾಳಮಾರುತಿ ಪೊಲೀಸರ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ರಾಜಿಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ ಎಂದು ಮಾಳಮಾರುತಿ ಸಿಪಿಐ ಸೂಚಿಸಿದ್ರು ಎಂದು ಯೋಧನ ಪತ್ನಿ ಆರೋಪಿಸಿದ್ದಾರೆ. ಗಾಯಾಳು ಮಗ, ಇಬ್ಬರು ಮಕ್ಕಳ ಸಮೇತ ಯೋಧನ ಪತ್ನಿ ಇಂದಿರಾ ಆಗಮಿಸಿ ಡಿಸಿಗೆ ದೂರು ನೀಡಿದ್ದಾರೆ.
2005ರಲ್ಲಿ ಯೋಧ ಭೀಮಪ್ಪ ನರಸಗೋಳ ಸೈಟ್ ಖರೀದಿಸಿದ್ದು ಕಣಬರಗಿ ಬಸ್‌ನಿಲ್ದಾಣ ಬಳಿಯ ಪ್ಲಾಟ್ ನಂಬರ್ 423/1/1 ಕುರಿತು ವಿವಾದವಾಗಿದೆ. ರಾಡ್‌ನಿಂದ ಮಗನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದಷ್ಟು ಬೇಗ ಕ್ರಮ ಕೈಗೊಳ್ಳಿ, ನ್ಯಾಯ ದೊರಕಿಸಿಕೊಡಿ ಎಂದು ಯೋಧ ಭೀಮಪ್ಪ ನರಸಗೋಳ ಪತ್ನಿ ಇಂದಿರಾ ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.