YouTube Top Videos | ಇಡೀ ಜಗತ್ತಿನ ಜನಸಂಖ್ಯೆಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ ಈ ವಿಡಿಯೋ! ಹಾಗಾದ್ರೆ ಟಾಪ್ 3 ಹಾಡುಗಳು ಯಾವುವು?
YouTube Top Videos: ಈ ಮೂರೂ ಹಾಡುಗಳು ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದು, ಮೂರ್ನಾಲ್ಕು ವರ್ಷಗಳ ನಂತರವೂ ಅದೇ ತಾಜಾತನದೊಂದಿಗೆ ನೋಡುಗರನ್ನು ಸೆಳೆಯುತ್ತಿವೆ.

ಯೂಟ್ಯೂಬ್! ಕೆಲ ವರ್ಷಗಳ ಹಿಂದೆ ಒಂದಷ್ಟು ಜನರಿಗೆ ಮಾತ್ರ ಪರಿಚಿತವಾಗಿದ್ದ ಯೂಟ್ಯೂಬ್ (YouTube) ಇಂದು ಬಹುಪಾಲು ಜನರ ಅವಿಭಾಜ್ಯ ಅಂಗವಾಗಿದೆ. ಕೈಯಲ್ಲಿ ಮೊಬೈಲ್ ಇದ್ದಾಗ ನಮಗರಿವಿಲ್ಲದಂತೆಯೇ ಅದೆಷ್ಟೋ ಸಲ ಯೂಟ್ಯೂಬ್ ಒಳಹೊಕ್ಕು ಬಂದಿರುತ್ತೇವೆ. ಹೊಸ ಸಿನಿಮಾದ ಟೀಸರ್, ಟ್ರೇಲರ್ ಬಂದಾಗ, ಹಾಡು ಬಿಡುಗಡೆಯಾದಾಗ, ಯಾವುದೋ ಸುದ್ದಿ ನೋಡಬೇಕಾದಾಗ, ಅಡುಗೆ ಮಾಡುವುದು ಹೇಗೆಂದು ತಿಳಿಯಬೇಕಾದಾಗೆಲ್ಲಾ ನಮ್ಮ ಕೈಬೆರಳು ಯೂಟ್ಯೂಬ್ ದಾರಿ ಹಿಡಿದುಬಿಡುತ್ತೆ. ಆದರೆ, ಈ ಯೂಟ್ಯೂಬ್ನಲ್ಲಿ ಇದುವರೆಗೆ ಅತಿಹೆಚ್ಚು ನೋಡಲ್ಪಟ್ಟ ಟಾಪ್ 3 ವೀಡಿಯೋಗಳು (Top 3 Videos) ಯಾವುದೆಂದು ಯಾವತ್ತಾದರೂ ಹುಡುಕಿದ್ದೀರಾ?
ದೇಶ, ಭಾಷೆಗಳ ಗಡಿದಾಟಿ ಜಗತ್ತಿನೆಲ್ಲೆಡೆ ಹಬ್ಬಿಕೊಂಡಿರುವ ಯೂಟ್ಯೂಬ್ನಲ್ಲಿ ಕೆಲ ವಿಡಿಯೋಗಳು ಹೆಚ್ಚೂ ಕಡಿಮೆ ಈ ಜಗತ್ತಿನ ಜನಸಂಖ್ಯೆಯನ್ನೂ ಮೀರಿದ ಪ್ರಮಾಣದಲ್ಲಿ ವೀಕ್ಷಣೆ ಕಂಡಿವೆ! ಈ ವಿಷಯ ಅಚ್ಚರಿ ಅನಿಸಿದರೂ ಸತ್ಯ. ಯೂಟ್ಯೂಬ್ನ ಟಾಪ್ 3 ವಿಡಿಯೋಗಳು ಕ್ರಮವಾಗಿ 7.9 ಬಿಲಿಯನ್, 7.2 ಬಿಲಿಯನ್ ಮತ್ತು 5.1 ಬಿಲಿಯನ್ ವೀಕ್ಷಣೆ ಕಂಡಿವೆ. ಇನ್ನೊಂದೆಡೆ ಈ ಜಗತ್ತಿನ ಒಟ್ಟಾರೆ ಜನಸಂಖ್ಯೆ ಎಷ್ಟು ಎಂದು ಹುಡುಕಿದರೆ ಕಳೆದ ವರ್ಷದ ಲೆಕ್ಕದಲ್ಲಿ ಗೂಗಲ್ 7.8 ಬಿಲಿಯನ್ ಎಂದು ತೋರಿಸುತ್ತದೆ. ಅಂದರೆ ಯೂಟ್ಯೂಬ್ನ ನಂಬರ್ 1 ವಿಡಿಯೋ ಜಗತ್ತಿನ ಪ್ರಸ್ತುತ ಜನಸಂಖ್ಯೆಗಿಂತಲೂ ಅಧಿಕ ವೀಕ್ಷಣೆ ಕಂಡಿದೆ.
ಯೂಟ್ಯೂಬ್ನ ನಂಬರ್ ಒನ್ ವಿಡಿಯೋ ಯಾವುದು? ಯೂಟ್ಯೂಬ್ನಲ್ಲಿ ಇದುವರೆಗೆ ಅತಿ ಹೆಚ್ಚು ವೀಕ್ಷಣೆ ಕಂಡು ನಂಬರ್ 1 ಸ್ಥಾನದಲ್ಲಿರುವುದು ಒಂದು ಮಕ್ಕಳ ಹಾಡು. ಕೆಲ ವರ್ಷಗಳಿಂದೀಚೆಗೆ ಚಿಕ್ಕ ಮಕ್ಕಳು ಮೊಬೈಲ್ ಕಡೆಗೆ ಅತಿ ಹೆಚ್ಚು ಆಕರ್ಷಿತರಾಗಿದ್ದಾರೆ. ಹಟ ಮಾಡಿದಾಗೆಲ್ಲಾ ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸಮಾಧಾನ ಮಾಡುವುದನ್ನು ಕಲಿತುಕೊಂಡಿದ್ದಾರೆ. ಇದರ ಪರಿಣಾಮವೋ ಏನೋ ಎಂಬಂತೆ ಯುಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ವೀಡಿಯೋ ಎಂಬ ದಾಖಲೆಗೆ ‘ಬೇಬಿ ಶಾರ್ಕ್ ಡ್ಯಾನ್ಸ್’ (Baby Shark Dance) ಪಾತ್ರವಾಗಿದೆ. ಜೂನ್ 18, 2016ರಲ್ಲಿ ಬಿಡುಗಡೆಯಾದ ಈ ವಿಡಿಯೋ ಬರೋಬ್ಬರಿ 799,60,10,902 ಬಾರಿ ವೀಕ್ಷಣೆಯಾಗಿದೆ. ಅಂದ್ರೆ ಬಹುತೇಕ 8 ಶತಕೋಟಿ ವೀಕ್ಷಣೆ.. ಅಂದ್ರೆರೆ ಜಗತ್ತಿನ ಸಂಖ್ಯೆಯನ್ನೂ ದಾಟಿ ವ್ಯೂಸ್ ಕೊಟ್ಟಿದೆ.
ಎರಡನೇ ಸ್ಥಾನದಲ್ಲಿ ದೆಸ್ಪಸಿತೋ.. ಯೂಟ್ಯೂಬ್ನಲ್ಲಿ ಎರಡನೇ ಅತಿ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ದೆಸ್ಪಸಿತೋ (Despacito). ಬಹುಶಃ ಈ ವಿಡಿಯೋ ನೋಡಿರದಿದ್ದರೂ ಇದರ ರಾಗವನ್ನು ನಿಮ್ಮ ಕಿವಿ ಕೇಳದೇ ಇರುವುದು ಅಸಾಧ್ಯವೇ ಸರಿ. ಏಕೆಂದರೆ, ಮೂರ್ನಾಲ್ಕು ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾದ ಈ ಹಾಡು ಭಾಷೆಗಳ ಎಲ್ಲೆ ಮೀರಿ ಜನರ ಬಾಯಲ್ಲಿ ನುಲಿದಾಡಿದೆ. ಲೂಯಿಸ್ ಫಾನ್ಸಿ ಎಂಬ ಕಲಾವಿದನ ಯೂಟ್ಯೂಬ್ ಚಾನೆಲ್ನಲ್ಲಿ ಜನವರಿ 13, 2017ರಲ್ಲಿ ಬಿಡುಗಡೆಯಾದ ಈ ವಿಡಿಯೋ 722,01,48,622 ಬಾರಿ ವೀಕ್ಷಣೆ ಕಂಡಿದೆ.
ಮೂರನೇ ಸ್ಥಾನದಲ್ಲಿ ಶೇಪ್ ಆಫ್ ಯೂ ಎಡ್ ಶೀರನ್ ಯೂಟ್ಯೂಬ್ ಚಾನೆಲ್ನಲ್ಲಿ ತೆರೆಕಂಡ ಆ್ಯಮ್ ಇನ್ ಲವ್ ವಿತ್ ದ ಶೇಪ್ ಆಫ್ ಯೂ ಹಾಡು ಯುವ ಸಮೂಹವನ್ನು ಅಕ್ಷರಶಃ ಮೋಡಿಗೆ ಒಳಗಾಗಿಸಿತ್ತು. ಹದಿಹರೆಯದವರ ಅಂತಾರಾಷ್ಟ್ರೀಯ ಗೀತೆಯಂತಾಗಿದ್ದ ಶೇಪ್ ಆಫ್ ಯೂ (Shape of You) ವಿಡಿಯೋ ಸಾಂಗ್ ದೆಸ್ಪಸಿತೋ ಹಾಡಿನ ಬೆನ್ನಲ್ಲೇ ಬಿಡುಗಡೆಯಾಗಿತ್ತು. ಜನವರಿ 30, 2017ರಂದು ಬಿಡುಗಡೆಯಾದ ಈ ಹಾಡು 519,77,56,060 ವೀಕ್ಷಕರನ್ನು ಸೆಳೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ.
ಒಟ್ಟಾರೆ ಈ ಮೂರೂ ಹಾಡುಗಳು ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದು, ಮೂರ್ನಾಲ್ಕು ವರ್ಷಗಳ ನಂತರವೂ ಅದೇ ತಾಜಾತನದೊಂದಿಗೆ ನೋಡುಗರನ್ನು ಸೆಳೆಯುತ್ತಿವೆ. ಜಗತ್ತಿನ ಜನಸಂಖ್ಯೆಗಿಂತ ಹೆಚ್ಚು ವೀಕ್ಷಕರಿದ್ದಾರೆ ಎಂಬ ಮಾತ್ರಕ್ಕೆ ಪ್ರತಿಯೊಬ್ಬರೂ ಈ ವಿಡಿಯೋ ನೋಡಿರುತ್ತಾರೆ ಎಂದು ಅರ್ಥವೇನಲ್ಲ. ಆದರೆ, ನೋಡಿರುವವರೇ ಪದೇ ಪದೇ ನೋಡುವ ಮೂಲಕ ಇಷ್ಟು ಗರಿಷ್ಠ ವೀಕ್ಷಣೆಗೆ ಕಾರಣರಾಗಿದ್ದಾರೆಂದರೆ ಇವುಗಳ ಜನಪ್ರಿಯತೆಯನ್ನು ಅಂದಾಜು ಮಾಡಬಹುದು.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2 ಟೀಸರ್ ಯೂಟ್ಯೂಬ್ನಿಂದ ಗಳಿಸಿದ್ದೆಷ್ಟು ಗೊತ್ತಾ? ಗಂಡ ಝೂಮ್ ಮೀಟಿಂಗ್ನಲ್ಲಿದ್ದಾಗಲೇ ಜುಮ್ಮನೆ ಮುತ್ತಿಕ್ಕಲು ಬಂದ ಪತ್ನಿ! ನಂತರ ಆಗಿದ್ದು ಮಾತ್ರ
Published On - 5:23 pm, Mon, 22 February 21