ರಾಜ್ಯ ಸರ್ಕಾರದ ಸಂಯಮ ಪ್ರಶಸ್ತಿ ಪಡೆದ ಇಳಕಲ್ಲ ಶ್ರೀ ಗುರುಮಹಾಂತ ಸ್ವಾಮಿಗಳಿಗೆ ಸನ್ಮಾನ
ಡಾ.ಫ.ಗು.ಹಳಕಟ್ಟಿಯವರು ಇಡೀ ಸಮಾಜಕ್ಕೆ ಮಾಡಿದ ಬಹು ದೊಡ್ಡ ಕಾರ್ಯ ಎಂದರೆ ಬಸವಾದಿ ಶರಣರ ವಚನಗಳ ಸಂಗ್ರಹ ಹಾಗೂ ಅವುಗಳ ಪ್ರಕಟಣೆ. ಅವರ ನೆನಪಿನಲ್ಲಿ ಹಲವಾರು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಹಳಕಟ್ಟಿಯವರನ್ನು ಜೀವಂತವಾಗಿರಿಸಿದ ಶ್ರೇಯಸ್ಸು ಎಂ.ಬಿ. ಪಾಟೀಲರಿಗೆ ಸಲ್ಲುತ್ತದೆ ಎಂದು ಸ್ವಾಮೀಜಿ ಹೇಳಿದರು.

ವಿಜಯಪುರ: ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಗುರುಮಹಾಂತ ಮಹಾಸ್ವಾಮಿಗಳಿಗೆ ರಾಜ್ಯ ಸರ್ಕಾರ ಸಂಯಮ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿನ್ನೆಲೆಯಲ್ಲಿ, ಸ್ವಾಮಿಗಳನ್ನು ವಿಜಯಪುರ ಜಿಲ್ಲೆಯ, ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಗುರುಮಹಾಂತ ಸ್ವಾಮಿಗಳು ಮಾತನಾಡಿದರು. ಹಲವಾರು ಮಹನೀಯರು, ತ್ಯಾಗಿಗಳು ತಮ್ಮನ್ನು ತಾವು ನಿರಂತರವಾಗಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡು ಇತಿಹಾಸಗಳನ್ನು ಸೃಷ್ಟಿಸಿದ್ದಾರೆ. ಸೇವೆ ನೀಡಿರುವ ಮಹನೀಯರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಅವರು ಮಾಡಿದ ಕಾರ್ಯಗಳನ್ನು ರಕ್ಷಿಸಿ, ಉಳಿಸುವುದು ಪುಣ್ಯದ ಕಾರ್ಯ. ಅಂತಹ ಕೆಲಸವನ್ನು ಬಿ.ಎಲ್.ಡಿ.ಇ ಸಂಸ್ಥೆ ಮಾಡಿದೆ ಎಂದು ಚಿತ್ತರಗಿ ಇಳಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಹೇಳಿದರು.
ಹಳಕಟ್ಟಿಯವರು ಇಡೀ ಸಮಾಜಕ್ಕೆ ಮಾಡಿದ ಬಹು ದೊಡ್ಡ ಕಾರ್ಯ ಎಂದರೆ ಬಸವಾದಿ ಶರಣರ ವಚನಗಳ ಸಂಗ್ರಹ ಹಾಗೂ ಅವುಗಳ ಪ್ರಕಟಣೆ. ಅಂತಹ ಮಹಾನ್ ಕಾರ್ಯ ಮಾಡಿದ ಹಳಕಟ್ಟಿಯವರ ನೆನಪಿನಲ್ಲಿ ಭವನ ಸ್ಥಾಪಿಸಿ, ಗ್ರಂಥಾಲಯ ಆರಂಭಿಸಿ, ಸಂಶೋಧನ ಕೇಂದ್ರ ಸೇರಿದಂತೆ ಹಲವಾರು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಇಂದಿಗೂ, ಎಂದಿಗೂ ಹಳಕಟ್ಟಿಯವರನ್ನು ಜೀವಂತವಾಗಿರಿಸಿದ ಶ್ರೇಯಸ್ಸು ಎಂ.ಬಿ. ಪಾಟೀಲರಿಗೆ ಸಲ್ಲುತ್ತದೆ ಎಂದು ಸ್ವಾಮೀಜಿ ಹೇಳಿದರು.
ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಳಕಲ್ಲ ಮಹಾಂತಪ್ಪನವರು ವ್ಯಸನಮುಕ್ತ ಸಮಾಜ ಕಟ್ಟುವಲ್ಲಿ ನಿರತರಾಗಿದ್ದರು. ಎಲ್ಲಿಯೇ ಸಂಚರಿಸಲಿ ಅವರು ಭಿಕ್ಷೆ ಬೇಡುವುದು ದುಶ್ಚಟಗಳನ್ನು ಮಾತ್ರ. ನಿಮ್ಮ ಎಲ್ಲ ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದಾಗ, ಲಕ್ಷಾಂತರ ಜನರು ಪರಿವರ್ತನೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅದೇ ರೀತಿ ಪೂಜ್ಯ ಗುರುಮಹಾಂತ ಮಹಾಸ್ವಾಮಿಜಿಯವರಿಗೆ ಸರ್ಕಾರ ‘ಸಂಯಮ ಪ್ರಶಸ್ತಿ’ ನೀಡುವ ಮೂಲಕ ತನ್ನ ಗೌರವ ಹೆಚ್ಚಿಸಿದೆ ಎಂದು ತಿಳಿಸಿದರು.
ಹಳಕಟ್ಟಿ ಸಂಶೋಧನಾ ಕೇಂದ್ರದ ಸಾಹಿತಿ ಕೃಷ್ಣ ಕೋಲ್ಹಾರ ಕುಲಕರ್ಣಿ, ಆಡಳಿತಾಧಿಕಾರಿಗಳಾದ ರಾಘವೇಂದ್ರ ಕುಲಕರ್ಣಿ, ಬಿ.ಆರ್. ಪಾಟೀಲ, ಐ.ಎಸ್. ಕಾಳಪ್ಪನವರ, ಡಾ.ಕೆ.ಜಿ.ಪೂಜಾರಿ, ಸ್ವಾಮೀಜಿ ಅವರನ್ನು ಸನ್ಮಾನಿಸಿದರು.
ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಸಹಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ವಿ.ಸಿ. ನಾಗಠಾಣ, ಮ.ಗು. ಯಾದವಾಡ, ಡಾ. ಡಿ.ಆರ್. ನಿಡೋಣಿ, ಎ.ಎಸ್. ಪೂಜಾರ, ಎಸ್.ವೈ. ಗದಗ, ವಿಠ್ಠಲ ತೇಲಿ, ಡಾ. ಆರ್.ಬಿ. ಕೋಟ್ನಾಳ ಸೇರಿದಂತೆ ಇತರರು ಹಾಜರಿದ್ದರು. ರಾಜ್ಯ ಸರ್ಕಾರದ ಸಂಮಯ ಪ್ರಶಸ್ತಿಗೆ ಭಾಜನರಾದ ಶ್ರೀ ಗುರುಮಹಾಂತ ಮಹಾಸ್ವಾಮಿಗಳಿಗೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಕೂಡ ತಮ್ಮ ನಿವಾಸದಲ್ಲಿ ಸನ್ಮಾನಿಸಿ ಆಶೀರ್ವಾದ ಪಡೆದರು.

ಶ್ರೀ ಗುರುಮಹಾಂತ ಮಹಾಸ್ವಾಮಿಗಳಿಗೆ ಎಂ.ಬಿ. ಪಾಟೀಲರಿಂದ ಸನ್ಮಾನ

ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಮಾತನಾಡಿದರು
Published On - 7:50 pm, Sun, 17 January 21