ಔಷಧಿ ತಯಾರಿಕಾ ಘಟಕದ ತ್ಯಾಜ್ಯ ಸೀದಾ ಕೆರೆಗೆ: ಜೀವ ಸಂಕುಲಕ್ಕೆ ಎದುರಾಯ್ತು ಪ್ರಾಣ ಸಂಕಟ
ವಿನ್ ಟ್ಯಾಕ್ ಔಷಧಿ ತಯಾರಿಕಾ ಘಟಕದಿಂದ ಹೊರ ಬರುತ್ತಿರುವ ವಿಷಯುಕ್ತ ನೀರನ್ನು ಕುಡಿದು ಹಸು, ಕರು ಹಾಗೂ ಮೇಕೆ ಪ್ರಾಣ ಕಳೆದುಕೊಂಡಿವೆ. ಅಲ್ಲದೆ ಕೆರೆಯಲ್ಲಿ ಜಲ ಚರಗಳು ಸಾವನ್ನಪ್ಪಿವೆ.

ನೆಲಮಂಗಲ: ಮೆಡಿಸಿನ್ ತಯಾರಿಸುವ ಪ್ರಸಿದ್ಧ ಕಂಪನಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ಇಡೀ ಹಳ್ಳಿಗೆ ಕಂಟಕ ಎದುರಾಗಿದೆ. ಪಶು ಪಕ್ಷಿ ಜೀವ ಸಂಕುಲ ಹಾಗೂ ಜಲಚರಗಳ ಪ್ರಾಣಕ್ಕೂ ಸಂಕಷ್ಟ ಎದುರಾಗಿದೆ.
ಕೆರೆಯಂಚಿನಲ್ಲಿರುವ ಬೃಹತ್ ಔಷಧಿ ತಯಾರಿಕಾ ಘಟಕದಿಂದ ಕೆರೆಗೆ ಪೈಪ್‌ಗಳ ಮೂಲಕ ಕಡು ಕಪ್ಪು ಬಣ್ಣದ ವಿಷಯುಕ್ತ ನೀರು, ಸಂಪೂರ್ಣ ಕಲುಷಿತವಾಗಿರುವ ನೀರು ದುಮ್ಮಿಕ್ಕುತ್ತಿದ್ದು ಈ ನೀರನ್ನು ಕುಡಿದು ಕರು, ಮೇಕೆ ಸತ್ತಿರುವ ಅಮಾನವೀಯ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹುರುಳಿಹಳ್ಳಿ ಗ್ರಾಮದ ಕೆರೆಯ ಹಂಚಿಗೆ ಹೊಂದಿಕೊಂಡಿರುವ ವಿನ್ ಟ್ಯಾಕ್ ಔಷಧಿ ತಯಾರಿಕಾ ಘಟಕದಿಂದ ಭಾರಿ ಪ್ರಮಾಣದ ವಿಷಯುಕ್ತ ಕಲುಷಿತ ನೀರು ದೊಡ್ಡ ದೊಡ್ಡ ಪೈಪ್‌ಗಳ ಮುಖಾಂತರ ರಾತ್ರಿ ವೇಳೆ ಕೆರೆಗೆ ಹರಿದು ಬಿಡಲಾಗುತ್ತಿದೆ.
ಕಂಪನಿಯ ವಿಷಯುಕ್ತ ನೀರು ಕುಡಿದು ಪ್ರಾಣಿಗಳ ಸಾವು: ಇನ್ನು ಇತ್ತೀಚೆಗೆ ಇದೇ ಕೆರೆಯ ನೀರು ಕುಡಿದು ಹಸು, ಕರು ಹಾಗೂ ಮೇಕೆ ಪ್ರಾಣ ಕಳೆದುಕೊಂಡಿವೆ. ಅಲ್ಲದೆ ಈ ಹಿಂದೆ ಕೆರೆಯಲ್ಲಿ ಭಾರಿ ಮೀನುಗಳಿದ್ದು ನೀರು ಕಲುಷಿತಗೊಂಡ ನಂತರ ಜಲಚರಗಳು ಸಾವನ್ನಪ್ಪಿ ಕೆರೆಯಂಗಳ ಬರಿದಾಗಿದೆ. ಸುತ್ತಮುತ್ತಲಿರುವ ಭೂಮಿಯಲ್ಲಿನ ಕೃಷಿ ಚಟುವಟಿಕೆಗಳಿಗೂ ಕಲುಷಿತ ನೀರಿನಿಂದ ಭಾರಿ ತೊದರೆಯಾಗುತ್ತಿದೆ.
ರೈತ ಬಿತ್ತ ಬೀಜ ಫಲ ಕೊಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಔಷಧಿ ತಯಾರಿಕಾ ಘಟಕದ ವಿರುದ್ಧ ಬೂದಿಹಾಲ್ ಗ್ರಾಮ ಪಂಚಾಯ್ತಿಗೆ ಸ್ಥಳೀಯರು ದೂರು ನೀಡಿದ್ದು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ವಿನ್ ಟ್ಯಾಕ್ ಆಡಳಿತ ಮಂಡಳಿಯವರನ್ನ ಪ್ರಶ್ನಿಸಿದರೆ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
ಒಟ್ಟಾರೆ ಔಷದಿ ತಯಾರಿಕಾ ಘಟಕವೇ ಪಶು ಪಕ್ಷಿಗಳ ಆರೋಗ್ಯಕ್ಕೆ ಮಾರಕವಾಗಿದ್ದು, ಸಂಬಂಧಪಟ್ಟ ಇಲಾಖೆಯವರು ತುರ್ತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. -ಮೂರ್ತಿ ಬಿ
Published On - 2:11 pm, Thu, 26 November 20