57 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ನಮ್ಮ ಮಗುವೀಗ ವಾಪಾಸು ಬಂದಿದೆ…

ಮಲ್ಲಿಗೆಯ ಕವಿ ಕೆ.ಎಸ್​. ನರಸಿಂಹಸ್ವಾಮಿ ಅವರ 106ನೇ ಜನ್ಮದಿನ ಇಂದು. ಅವರ ಮೊಮ್ಮಗಳು. ಇಂಗ್ಲಿಷ್ ಪ್ರಾಧ್ಯಾಪಕಿ ಡಾ. ಮೇಖಲಾ ವೆಂಕಟೇಶ್ ಅವರು ತಮ್ಮ ತಾತನನ್ನು ನೆನಪಿಸಿಕೊಂಡ ಆಪ್ತಕ್ಷಣಗಳು ಇಲ್ಲಿವೆ.

57 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ನಮ್ಮ ಮಗುವೀಗ ವಾಪಾಸು ಬಂದಿದೆ...
Follow us
ಶ್ರೀದೇವಿ ಕಳಸದ
| Updated By: ರಾಜೇಶ್ ದುಗ್ಗುಮನೆ

Updated on:Jan 26, 2021 | 8:25 PM

ಇಪ್ಪತ್ತೊಂದರ ಹುಡುಗ, ತನ್ನ ಮನೆಯವರೊಂದಿಗೆ ಹುಡುಗಿಯನ್ನು ನೋಡಲು ಹುಡುಗಿ ಮನೆಗೆ ಬರುತ್ತಾನೆ. ಹುಡುಗಿಗೆ ಗೊತ್ತಿತ್ತೋ ಇಲ್ಲವೋ ಈ ವಿಷಯ, ಆಕೆ ಶಾಲೆಗೆ ಹೋಗಿರುತ್ತಾಳೆ. ಆಕೆಯ ತಮ್ಮ ಕರೆದುಕೊಂಡು ಬರಲು ಓಡಿಹೋಗುತ್ತಾನೆ. ಆ ಹುಡುಗಿ ಶಾಲೆಯಂಗಳದಲ್ಲಿ ಹುಣಸೆಬೀಜ ಆರಿಸುತ್ತ ಕೂತಿರುತ್ತಾಳೆ. ಹಾಗೇ ಅವಳ ಕೈಹಿಡಿದುಕೊಂಡು ಓಡೋಡಿ ಮನೆಗೆ ಕರೆದುಕೊಂಡು ಬರುತ್ತಾನೆ. ನೋಡಲು ಬಂದ ಹುಡುಗನೆದುರು ಆಕೆ ಉಡಿಯಲ್ಲಿ ಕಟ್ಟಿಕೊಂಡ ಹುಣಸೆಬೀಜದೊಂದಿಗೇ ನಿಲ್ಲುತ್ತಾಳೆ.  ಆ ಹುಡುಗನೇ ನಮ್ಮ ತಾತ, ಕವಿ, ಕೆ. ಎಸ್​. ನರಸಿಂಹಸ್ವಾಮಿ. ಆ ಹುಡುಗಿಯೇ ನಮ್ಮ ಅಜ್ಜಿ ವೆಂಕಮ್ಮ. ಮುಂದೆ ಹುಣಸೆಬೀಜದ ಹುಡುಗಿಯ ಪ್ರಸ್ತಾಪ ಅವರ ಸಾಕಷ್ಟು ಕವಿತೆಗಳಲ್ಲಿ ಬರುತ್ತದೆ.

ಐದು ವರ್ಷದವರಿದ್ದಾಗ ನಮ್ಮ ತಾತ ತನ್ನ ಕುಟುಂಬದೊಂದಿಗೆ ಮೈಸೂರಿಗೆ ಬಂದರು. ದುರಾದೃಷ್ಟ, ಹದಿನೆಂಟು ವರ್ಷಕ್ಕೇ ತಂದೆಯನ್ನು ಕಳೆದುಕೊಂಡುಬಿಟ್ಟರು. ಆಗ ಅವರಿಗೆ ಜೊತೆಯಾಗಿದ್ದು ಪುಸ್ತಕಗಳು. ಮನೆಯ ಮಾಲಿಕರ ಬಳಿ ಇದ್ದ ಇಂಗ್ಲಿಷ್ ಕನ್ನಡ ಪುಸ್ತಕಗಳೊಂದಿಗೆ ನಂಟು ಬೆಳೆಸಿಕೊಂಡರು. ಅವರಿಗೆ ರಾಬರ್ಟ್​ ಬರ್ನ್ಸ್​ ಅವರ ಪದ್ಯಗಳೆಂದರೆ ತುಂಬಾ ಇಷ್ಟ. ಅವರ ಕಾವ್ಯಾತ್ಮಕ ಶೈಲಿ, ಲಯಕ್ಕೆ ಇವರು ತುಂಬಾ ಮಾರು ಹೋಗಿದ್ದರು. ಒಮ್ಮೆ ಕನ್ನಡದ ಮೇಷ್ಟ್ರು ಪಟ್ಟಾಭಿರಾಮನ್ ನಮ್ಮ ತಾತನ ಕವನಗಳನ್ನು ಓದಿ, ಕನ್ನಡದಲ್ಲೇ ಇನ್ನು ಕವನ ಬರಿ ಎಂದು ಸೂಚಿಸಿದರು.

ಅರವತ್ತೇಳು ವರ್ಷದ ದಾಂಪತ್ಯ ಜೀವನ ನಮ್ಮ ಅಜ್ಜಿ ತಾತರದು. ನಮ್ಮ ಅಜ್ಜಿಯೇ ಇವರ ಕವನಕ್ಕೆ ಸ್ಫೂರ್ತಿ ಅಂತ ಹೇಳುತ್ತಾರೆ. ಅದು ನಿಜ. ಹಾಗೆಯೇ ನಮ್ಮಜ್ಜಿ ತಾತನಿಗೆ ಶಕ್ತಿ ಕೂಡ. ಆದರೆ ಇಬ್ಬರ ಸ್ವಭಾವ ಸಂಪೂರ್ಣ ವಿಭಿನ್ನ. ಮೌನದಾಚೆಯ ಮಾತು (ಕವಿತೆ). ತಾತನಿಗೆ ಕವಿತೆಯಲ್ಲೇ ನೋವು ನಲಿವಿನಲ್ಲೇ ಎಲ್ಲವೂ. ಅಜ್ಜಿಗೆ ತುಂಬಾ ಮಾತು ಬೇಕು, ಜನ ಬೇಕು. ಹಾಗೆ ನೋಡಿದರೆ ಒಂದು ರೀತಿ ಸಾಮರಸ್ಯ, ಹೊಂದಾಣಿಕೆಗಿಂತ ಜಾಸ್ತಿ, ಜೀವನ ಮತ್ತು ದಾಂಪತ್ಯ ಸಂಬಂಧಗಳು ಇಷ್ಟೇ ಅಂತ ಸ್ವೀಕರಿಸುವ ಮನೋಭಾವ ಆಗಿನ ಕಾಲದಲ್ಲಿ ಎಲ್ಲರಿಗೂ ಇತ್ತು ಎನ್ನುವುದುನ್ನು ಗಮನಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇವರ ಕವಿತೆಗಳನ್ನು ಎಲ್ಲರೂ ಹೆಚ್ಚು ಓದಬೇಕು ಎನ್ನಿಸುತ್ತದೆ.

ಇವರ ಕವನಗಳನ್ನು ವಿಮರ್ಶಕರು ಮೂರು ಹಂತದಲ್ಲಿ ವಿಮರ್ಶಿಸಿದ್ದಾರೆ. ಮೊದಲ ಹಂತದಲ್ಲಿ ಮೈಸೂರು ಮಲ್ಲಿಗೆ, ಇರುವಂತಿಗೆ. ಈ ಸಂಕಲನಗಳು ಮದುವೆಯಾದ ಆರು ವರ್ಷಕ್ಕೆ ಬಿಡುಗಡೆಯಾದವು. ಮದುವೆಯ ನಂತರ ತಾತ ಹೌಸಿಂಗ್ ಬೋರ್ಡ್​ನಲ್ಲಿ ಕೆಲಸ ಸಿಗುವ ತನಕ ಎರಡು ವರ್ಷಗಳ ಕಾಲ ಅಜ್ಜಿಯ ತವರಿನಲ್ಲೇ ಇದ್ದರು. ಈ ಸಂದರ್ಭದಲ್ಲಿ ನನಗೆ ನಮ್ಮ ಮುತ್ತಾತನ ಪ್ರಸಂಗ ನೆನಪಾಗುತ್ತಿದೆ. ನಮ್ಮ ತಾತ, ಅಜ್ಜಿಯನ್ನು ನೋಡಿಕೊಂಡು ಹೋದ ಮೇಲೆ ಮುತ್ತಾತನಿಗೆ (ಅಜ್ಜಿಯ ಅಪ್ಪನಿಗೆ) ಪತ್ರ ಬರೆಯುತ್ತಾರೆ. ನಮ್ಮ ತಾಯಿಗೆ ಹುಡುಗಿ ಇಷ್ಟವಾಗಿದ್ದಾಳೆ ಎಂದು. ಆಗ ನಮ್ಮ ಮುತ್ತಾತ, ಹುಡುಗನ ಅಕ್ಷರಗಳು ತುಂಬಾ ಚೆನ್ನಾಗಿದೆ. ಕೆಲಸ ಇಲ್ಲದಿದ್ದರೂ ಇವರ ಭವಿಷ್ಯ ಚೆನ್ನಾಗಿರುತ್ತದೆ ಎಂದು ಹೇಳಿ ಮದುವೆ ಮಾಡಿಬಿಡುತ್ತಾರೆ. ಆ ನಂತರವೇ ಅವರು ಬರೆದ ಕವನ, ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ, ಗೃಹಲಕ್ಷ್ಮೀ… ಹೀಗೆ ನಮ್ಮ ಅವರು ದಾಂಪತ್ಯ ಕವಿತೆ ಬರೆಯಲು ಶುರು ಮಾಡಿದರು.

ಕೆ. ಎಸ್​. ನರಸಿಂಹಸ್ವಾಮಿಯವರ ಮೊಮ್ಮಗಳು ಡಾ. ಮೇಖಲಾ ವೆಂಕಟೇಶ

ಹೀಗೆ ಬರೆಯುತ್ತಲೇ ಅರವತ್ತಕ್ಕಿಂತ ಹೆಚ್ಚು ಕವನಗಳನ್ನು ಬರೆದು ಕುವೆಂಪು ಅವರಿಗೆ ತೋರಿಸಿದರು. ಕುವೆಂಪು ಅವುಗಳಲ್ಲಿ ನಲವತ್ತೊಂಬತ್ತು ಕವನಗಳನ್ನು ಆಯ್ಕೆ ಮಾಡಿದರು. ನಂತರ ತೀನಂಶ್ರೀ ಮೈಸೂರಿನ ವೆಸ್ಟ್ಲೀ ಪ್ರೆಸ್​ ನಲ್ಲಿ ಪ್ರಕಟಿಸಿದರು. ಡಿವಿಜಿಯವರು ತುಂಬಾ ಆತ್ಮೀಯವಾಗಿ, ‘ಅವರಿಂದ ಇವರಿಂದ ಮುನ್ನುಡಿ ಬರೆಸುವ ಫ್ಯಾಷನ್​ ಅನ್ನು ಕನ್ನಡದ ಲೇಖಕರು ಇನ್ನು ಬಿಡಬಹುದೆಂದು ತೋರುತ್ತದೆ. ನಿಮ್ ಮಲ್ಲಿಗೆಯ ಬಳ್ಳಿ ಎಲ್ಲ ಋತುಗಳಲ್ಲಿ ನಗುತಿರಲಿ’ ಎಂದು ಆಶೀರ್ವಾದ ಮಾಡಿದರು. 70 ವರ್ಷಗಳಲ್ಲಿ 100ಕ್ಕೂ ಹೆಚ್ಚು ಮರುಮುದ್ರಣ ಕಂಡು ಮೈಸೂರು ಮಲ್ಲಿಗೆ ದಾಖಲೆ ನಿರ್ಮಿಸಿತು.

1950ರ ಹೊತ್ತಿಗೆ ಗೋಪಾಲಕೃಷ್ಣ ಅಡಿಗರಿಂದ ನವ್ಯಕಾಲ ಶುರುವಾಯಿತು. ನಂತರ ನವ್ಯಕವಿತೆಯ ಪಟಾಲಂ ನಿರ್ಮಾಣವಾಯಿತು ಮತ್ತು ನವೋದಯ ಕವಿಗಳನ್ನು ಹಗುರವಾಗಿ ನೋಡುವುದೂ ಶುರುವಾಯಿತು. ಬರೀ ಪ್ರೀತಿ ಪ್ರೇಮದ ಬಗ್ಗೆಯೇ ಬರೆಯುತ್ತಾರೆ ಎನ್ನುವ ಕಾರಣಕ್ಕೆ. ಹೀಗಿರುವಾಗ ವಿ. ಸೀತಾರಾಮಯ್ಯನವರು ಇವರನ್ನು ಲಾಲಬಾಗಿಗೆ ಕರೆದುಕೊಂಡು ಹೋಗಿ, ಯೇಟ್ಸ್​, ಎಲಿಯೆಟ್ಸ್​ ಮುಂತಾದ ಪಾಶ್ಚಾತ್ಯ ಕವಿತೆಗಳ ಬಗ್ಗೆ ತಿಳಿಸಿ, ಎಷ್ಟು ದಿನ ಹೆಂಡತಿ ಸೆರಗು ಹಿಡಿದುಕೊಂಡು ಓಡಾಡುತ್ತೀ ಎಂದು ಕೇಳಿದರು.

ಎರಡನೇ ಹಂತದಲ್ಲಿ ಮನೆಯಿಂದ ಮನೆಗೆ, ತೆರೆದ ಬಾಗಿಲು, ಶಿಲಾಲತೆ ಕವನ ಸಂಕಲನಗಳು ಪ್ರಕಟಗೊಂಡವು. ಈಗಲೂ ಬೆಂಗಳೂರಿನ ಹೌಸಿಂಗ್ ಬೋರ್ಡ್​ ನಲ್ಲಿ ಮಾಧವನ್ ಪಾರ್ಕ್​ ಕಡೆ ಹೋದಾಗ ಮೈ ಝುಮ್ ಅನ್ನುತ್ತದೆ. ಆ ಮನೆಯಲ್ಲಿ ನನ್ನನ್ನು ಎತ್ತಿಕೊಂಡಿರುವ ಫೋಟೋಗಳಿದ್ದವಲ್ಲ… ಮುಂದೆ ಅನಾನುಕೂಲತೆಯಿಂದ ಆ ಮನೆ ಮಾರಬೇಕಾಗುತ್ತದೆ. ಏಕೆಂದರೆ ಮೂರು ಮಕ್ಕಳಿಗಷ್ಟೇ ಮದುವೆಯಾಗಿತ್ತು ಐದು ಜನ ಓದುತ್ತಿದ್ದರು. ಇಷ್ಟೇ ಅಲ್ಲ ಸಣ್ಣ ಮೊತ್ತಕ್ಕೆ ಮೈಸೂರು ಮಲ್ಲಿಗೆಯ ಕಾಪಿರೈಟ್ಸ್ ಕೂಡ ಕೊಟ್ಟುಬಿಟ್ಟರು. ಕೊನೆಗೆ 57 ವರ್ಷಗಳ ನಂತರ ನಮ್ಮ ತಂದೆ, ಪಬ್ಲಿಷಿಂಗ್ ರೈಟ್ಸ್ ನೀವು ಇಟ್ಕೊಳ್ಳಿ. ಕಾಪಿರೈಟ್ಸ್ ಕವಿಗೆ ಕೊಡಿ ಅಂತ ಹೇಳಿದರು. ಇದೆಲ್ಲ ನಡೆದಿದ್ದು ಅಜ್ಜ ತೀರುವ ಮೂರು ವರ್ಷಗಳ ಮೊದಲು. ಆಗ ನಮ್ಮ ತಾತ ಅಜ್ಜಿ ಕೈಗೆ ಅದನ್ನು ಕೊಟ್ಟು, ‘57 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ನಮ್ಮ ಮಗು ವಾಪಾಸು ಬಂದಿದೆ. ಜೋಪಾನವಾಗಿ ಇಟ್ಟುಕೋ’ ಅಂದರು. ಸಾಮಾನ್ಯವಾಗಿ ಹೆಚ್ಚು ಮಾತನಾಡದ ತಾತ ಅಜ್ಜಿಗೆ ಹೀಗೆ ಹೇಳಿದ್ದು ಎಂಥ ಭಾವುಕ ಕ್ಷಣವಾಗಿದ್ದಿರಬಹುದು?

ಮೂರನೇ ಹಂತದಲ್ಲಿ ದುಂಡು ಮಲ್ಲಿಗೆ ಮೂಲಕ ಇವರು ಆಶಾಭಾವಕ್ಕೆ ತಿರುಗಿದರು. ಏಕೆಂದರೆ ರಮ್ಯಕವಿತೆಗಳು ಕವಿತ್ವಕ್ಕೆ ಮಿತಿಯೊಡ್ಡಿದ ಹಾಗೆ. ಭೂತಾಯಿಯ ಮೇಲೆ ಅಪಾರವಾದ  ನಂಬಿಕೆ ಇದ್ದ ಅವರ ಕವಿತೆಗಳಲ್ಲಿ ರಿಯಲಿಸ್ಟಿಕ್ ಆಪ್ಟಿಮಿಸಮ್ ಕಾಣಿಸತೊಡಗಿತು. ಎಲ್ಲರೊಳಿಗೊಳಿತನು ಬಯಸಲಿ ಕವನ, ಕಾವ್ಯದ ಬಗ್ಗೆ ಇರೋ ವಿಶ್ವಾಸ, ಜೀವನದ ಬಗ್ಗೆ ಇರೋ ಉತ್ಸಾಹವನ್ನು ಬಿಂಬಿಸುತ್ತದೆ.

ಎಲ್ಲರೊಳಿಗೊಳಿತನು ಬಯಸಲಿ ಕವನ

ಭೇದವನರಿಯದು ನೀಲಿಯ ಗಗನ; ಒಂದೆ ಮಣ್ಣಿನಿಂದೆಲ್ಲರ ಜನನ; ಒಂದೆ ದಿಕ್ಕಿನಲಿ ಎಲ್ಲರ ಪಯಣ; ನೋವೋ ನಲಿವೋ ಬಂದರು ಬರಲೆಂದು ಎಲ್ಲರಿಗೊಳಿತನು ಬಯಲಿ ಕವನ.

ಅಡ್ಡಗೋಡೆಗಳನೊಡೆಯುತ ನಡೆದು, ಬಡವ ಬಲ್ಲಿದರು ಹಿತದಲಿ ಕಲೆತು, ಸೋದರರೆಲ್ಲರು ಒಟ್ಟಿಗೆ ದುಡಿದು, ಗಳಿಕೆಯನೆಲ್ಲರು ಸವಿಯಲಿ ಎಂದು ಎಲ್ಲರಿಗೊಳಿತನು ಬಯಸಲಿ ಕವನ.

ಲಭಿಸಲೆಲ್ಲರಿಗು ನಿಲ್ಲಲು ನೆರಳು, ಎಲ್ಲ ಮಕ್ಕಳಿಗು ಒಳ್ಳೆಯ ಹಾಲು; ಹೊಂಬಿಸಿಲಿಯಲಿ ಎಲ್ಲರ ಮೇಲು, ನೆಮ್ಮದಿಯುಕ್ಕಲಿ ಎಲ್ಲರಿಗೆಂದು ಎಲ್ಲರಿಗೊಳಿತನು ಬಯಸಲಿ ಕವನ.

ಭೂಮಿಯ ಕರುಣೆಗೆ ಮಿತಿಯಿರದೆಂದು, ಎಲ್ಲರ ದುಡಿಮೆಗೆ ಫಲವಿಹುದೆಂದು, ನಾಳೆಯ ಬಾಗಿಲು ನಂದನವೆಂದು, ಪ್ರೀತಿಗೆ ಶಾಂತಿಗೆ ಜಯವಿರಲೆಂದು ಎಲ್ಲರಿಗೊಳಿತನು ಬಯಸಲಿ ಕವನ.

ಅವಿತಕವಿತೆ: ಜೀವರಸ ಕುಡಿದು ಮತ್ತೇರಿ ಹುಟ್ಟಬೇಕು ಮತ್ತೆ ಮತ್ತೆ…

Published On - 7:15 pm, Tue, 26 January 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್