Breast Cancer : ಅಪಾಯಕಾರಿ ಸ್ತನ ಕ್ಯಾನ್ಸರ್ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?
ಇಂದಿನ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮಗಳಿಂದಾಗಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಎಲ್ಲರನ್ನು ಕಾಡುತ್ತಲೇ ಇದೆ. ಕಳೆದ ಕೆಲವು ವರ್ಷಗಳಿಂದ ಹೃದಯಾಘಾತ ಹಾಗೂ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯ ಪ್ರಮಾಣವು ಹೆಚ್ಚಳವಾಗುತ್ತಿದೆ. ಹಾಗಾದ್ರೆ ಈ ರೋಗವು ಬಾರದಂತೆ ಮಹಿಳೆಯರು ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಈ ಕಾಯಿಲೆಯಿಂದ ದೂರ ಉಳಿಯಬಹುದು.
ಕ್ಯಾನ್ಸರ್ ಎನ್ನುವ ಪದವೇ ಎಲ್ಲರನ್ನು ಭಯಪಡಿಸುತ್ತದೆ. ಈ ಗಂಭೀರ ಕಾಯಿಲೆಯು ಯಾರಿಗೂ ಬಾರದಿರಲಿ ಎಂದುಕೊಳ್ಳುವವರೇ ಹೆಚ್ಚು. ಆದರೆ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಪ್ರಮಾಣವು ಹೆಚ್ಚಳವಾಗುತ್ತಿದೆ ಎನ್ನಲಾಗಿದೆ. ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. 2025 ರ ವೇಳೆಗೆ ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವು ಹೆಚ್ಚಳವಾಗಲಿದೆ ಎನ್ನುವ ಆಘಾತಕಾರಿ ಸುದ್ದಿಯೊಂದು ಐಸಿಎಂಆರ್ ನಡೆಸಿದ ಅಧ್ಯಯನದಿಂದ ಹೊರ ಬಿದ್ದಿದೆ. ಈ ರೋಗ ಲಕ್ಷಣವು ಕಂಡು ಬಂದ ತಕ್ಷಣವೇ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಮಾರಕ ಕಾಯಿಲೆಯಿಂದ ಗುಣಮುಖರಾಗಬಹುದು.
ಸ್ತನ ಕ್ಯಾನ್ಸರ್ ಎಂದರೇನು?
ಸ್ತನ ಕ್ಯಾನ್ಸರ್ ಎನ್ನುವುದು ಸ್ತನದಲ್ಲಿನ ಅಂಗಾಂಶದ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಸ್ತನದಲ್ಲಿನ ಜೀವಕೋಶಗಳು ಅಭಿವೃದ್ಧಿಗೊಳ್ಳುವಾಗ ಹಾಗೂ ಅನಿಯಂತ್ರಿತ ರೀತಿಯಲ್ಲಿ ವಿಭಜನೆಯಾದಾಗ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ.
ಸ್ತನ ಕ್ಯಾನ್ಸರ್ ಬರಲು ಕಾರಣಗಳು
* ಮಹಿಳೆಯರಲ್ಲಿ ಅತಿಯಾದ ಮದ್ಯಪಾನ ಹಾಗೂ ಧೂಮಪಾನದಂತಹ ಅಭ್ಯಾಸಗಳಿಂದ ಈ ಕಾಯಿಲೆ ಬರುವ ಸಾಧ್ಯತೆಯೂ ಅಧಿಕವಾಗಿರುತ್ತದೆ.
* ಅನುವಂಶಿಕವಾಗಿ ಈ ಕಾಯಿಲೆಗೆ ತುತ್ತಾಗಬಹುದು.
* ಪಾಶ್ಚಿಮಾತ್ಯ ಜೀವನ ಶೈಲಿ ಹಾಗೂ ಡಯಟ್ ನಂತಹ ಅಭ್ಯಾಸಗಳು
* ಅತಿ ಬೇಗನೇ ಋತುಸ್ರಾವ
* ತಡವಾದ ಋತುಬಂಧ
* ಮಗುವಿಗೆ ಹಾಲು ಉಣಿಸದೇ ಇರುವುದು
* ಗರ್ಭನಿರೋಧಕ ಬಳಕೆ
* ಹಾರ್ಮೋನು ಬದಲಾವಣೆಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು.
* ಬೊಜ್ಜು, ತೂಕ ಹೆಚ್ಚಾಗುವುದು ಕೊಬ್ಬಿನ ಅಂಶದಿಂದ ಈ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯು ಅಧಿಕವಾಗಿರುತ್ತದೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ನಲ್ಲಿ ಕರ್ನಾಟಕ ನಂಬರ್ ಒನ್, 2025 ವೇಳೆಗೆ ಇದರ ಪ್ರಮಾಣ ಹೆಚ್ಚಳ
ಸ್ತನ ಕ್ಯಾನ್ಸರ್ ಬಾರದಂತೆ ವಹಿಸಬೇಕಾದ ಎಚ್ಚರಿಕಾ ಕ್ರಮಗಳು
* 35 ವರ್ಷ ದಾಟಿದ ಮಹಿಳೆಯರು ಅಗತ್ಯವಾಗಿ ಸ್ತನಗಳ ಪರೀಕ್ಷೆ ಮಾಡುತ್ತಿರಿ.
* ಸ್ತನ ಕ್ಯಾನ್ಸರ್ ಬರದಂತೆ ತಡೆಯಲು ನಾವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಸೊಪ್ಪು, ತರಕಾರಿಗಳ ಸೇವನೆಯಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
* ನಿದ್ರಾ ಚಕ್ರದ ಮೇಲೆ ಗಮನ ಕೊಡಿ. ದೇಹಕ್ಕೆ ಆದಷ್ಟು ವಿಶ್ರಾಂತಿ ನೀಡುವ ಮೂಲಕ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರಿಸಿ.
* ಕ್ಯಾನ್ಸರ್ ಅಪಾಯವನ್ನು ತಡೆಯುವ ಬೆರಿ ಹಣ್ಣುಗಳು, ಶುಂಠಿ, ಅವಕಾಡೋ, ದಾಲ್ಚನಿಯನ್ನು ಆಹಾರ ಪದ್ಧತಿಯಲ್ಲಿ ಬಳಸುವುದು ಮುಖ್ಯವಾಗಿದೆ.
* ಧೂಮಪಾನ, ಮದ್ಯಪಾನದ ಅಭ್ಯಾಸದಿಂದ ದೂರವಿರುವ ಮೂಲಕ ಈ ಕಾಯಿಲೆ ಬರುವ ಮುಂಚಿತವಾಗಿ ಈ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ವಹಿಸಬಹುದು.
* ದೈಹಿಕ ಚಟುವಟಿಕೆಗಳತ್ತ ಹೆಚ್ಚು ಗಮನ ಕೊಡುವುದು ಸೂಕ್ತ. ದಿನನಿತ್ಯವು ನಿಯಮಿತವಾಗಿ ವ್ಯಾಯಾಮವನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
* ಅತಿಯಾದ ಬೊಜ್ಜು ಹಾಗೂ ತೂಕ ಹೆಚ್ಚಳವಾಗುವುದನ್ನು ಆದಷ್ಟು ತಪ್ಪಿಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ