
ಇತರರ ಮಾತು ಕೇಳುವುದು ಒಳ್ಳೆಯದು ಆದರೆ ಅವರ ಸಲಹೆಗಳನ್ನು ಅನುಸರಿಸಿ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಈ ಸಣ್ಣ ತಪ್ಪು ಜೀವನದ ಮೇಲೆ ಶಾಶ್ವತ ಪರಿಣಾಮವನ್ನು ಬೀರುತ್ತದೆ. ಆದರೆ ಕೆಲವೊಮ್ಮೆ ಇತತರು ಅವರು ಹೇಳುವಂತೆ ಕೇಳಬೇಕೆಂದು ಒತ್ತಡವನ್ನು ಹೇರುತ್ತಾರೆ. ಹೆಚ್ಚಾಗಿ ಹೆಣ್ಣು ಮಕ್ಕಳ (Women) ಮೇಲೆ ಈ ಒತ್ತಡವನ್ನು ಹೇರಳಾಗುತ್ತದೆ. ಹೌದು ಕೆಲವೊಮ್ಮೆ, ಕುಟುಂಬದವರು ಮದುವೆಗೆ ಒತ್ತಾಯಿಸುತ್ತಾರೆ, ಹತ್ತಿರದವರು ಕೆಲಸವನ್ನು ಬಿಡುವಂತೆ ಅಥವಾ ಯಾರ ಜೊತೆಯಾದರೈ ಸ್ನೇಹ ಸಂಬಂಧವನ್ನು ಕಡಿದುಕೊಳ್ಳುವಂತೆ ಒತ್ತಡ ಹೇರುತ್ತಾರೆ. ಹೀಗೆ ಇತರರ ಮಾತಿನ ಮೇರೆಗೆ ಹೆಣ್ಣು ಮಕ್ಕಳು ತಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಯಾರೊಬ್ಬರ ಸಲಹೆಯನ್ನು ಒಪ್ಪಿಕೊಳ್ಳುವ ಮೊದಲು, ಆ ನಿರ್ಧಾರವು ನಿಮಗೆ ಸರಿಯಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಹಾಗಿದ್ರೆ ಮುಖ್ಯವಾಗಿ ಮಹಿಳೆಯರು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರ ಮಾತನ್ನು ಕೇಳಬಾರದು ಎಂಬುದನ್ನು ನೋಡೋಣ ಬನ್ನಿ.
ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ತಮ್ಮ ವೃತ್ತಿಜೀವನದೊಂದಿಗೆ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಮದುವೆಯಾದ ಬಳಿಕ ಮಹಿಳೆಯರಿಗೆ ನೀನು ಕೆಲಸಕ್ಕೆ ಹೋಗಬೇಡ, ಮನೆಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗು ಎಂದು ಸಲಹೆ ನೀಡುತ್ತಾರೆ. ಹೀಗೆ ಇತರರ ಮಾತಿಗೆ ಮಣಿದು ಕೆಲವು ಮಹಿಳೆಯರು ತಮ್ಮ ಉದ್ಯೋಗವನ್ನೇ ತ್ಯಜಿಸುತ್ತಾರೆ. ಇದರಿಂದ ಆರ್ಥಿಕವಾಗಿ ಸ್ವಾತಂತ್ರ್ಯರಾಗಲು ಸಾಧ್ಯವಾಗುವುದಿಲ್ಲ, ಏನೇ ಬೇಕಿದ್ದರೂ ಗಂಡ ಮತ್ತು ಮನೆಯವರನ್ನೇ ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಇತರರು ಹೇಳ್ತಾರೆ ಅಂತ ಮಹಿಳೆಯರು ತಮ್ಮ ಉದ್ಯೋಗವನ್ನು ತ್ಯಜಿಸುವುದು ಒಳ್ಳೆಯ ನಿರ್ಧಾರವಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಕೆಲವು ಹೆಣ್ಣುಮಕ್ಕಳ ಮನೆಯಲ್ಲಿ ಮದುವೆಗೆ ತುಂಬಾ ಒತ್ತಾಯ ಮಾಡಲಾಗುತ್ತದೆ. ಹಾಗಾಗಿ ಕೆಲವು ಮಹಿಳೆಯರು ತಮ್ಮ ಕುಟುಂಬದ ಸಂತೋಷಕ್ಕಾಗಿ ತಮ್ಮ ಸ್ವಂತ ಆದ್ಯತೆಗಳು ಮತ್ತು ಆಸೆಗಳನ್ನು ಬದಿಗಿಡುತ್ತಾರೆ. ಆದರೆ ಇತರರನ್ನು ಮೆಚ್ಚಿಸಲು, ಇತರರನ್ನು ಖುಷಿ ಪಡಿಸಲು ನೀವು ಇಷ್ಟವಿಲ್ಲದ ಮದುವೆಗೆ ಒಪ್ಪಿಕೊಳ್ಳುವುದು ಸರಿಯಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಮದುವೆ ಜೀವನದ ಪ್ರಮುಖ ನಿರ್ಧಾರವಾಗಿದ್ದು, ಕುಟುಂಬ ಅಥವಾ ಸಂಬಂಧಿಕರ ಒತ್ತಡಕ್ಕೆ ಮಣಿದು ಮದುವೆಯ ನಿರ್ಧಾರ ತೆಗೆದುಕೊಳ್ಳಬಾರದು. ಇತರರ ಅಭಿಪ್ರಾಯಗಳನ್ನು ಕೇಳುವುದು ಒಳ್ಳೆಯದು, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಸ್ವಂತ ಆದ್ಯತೆಗಳು, ಅಗತ್ಯಗಳು ಮತ್ತು ಸಂದರ್ಭಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಿ.
ಮೂರನೇ ವ್ಯಕ್ತಿಗಳಿಂದಲೇ ಸಂಬಂಧಗಳು ಹಾಳಾದ ಅದೆಷ್ಟೋ ಉದಾಹರಣೆಗಳಿವೆ. ಹಾಗಾಗಿ ದಾಂಪತ್ಯ, ಪ್ರೇಮ ಅಥವಾ ಸ್ನೇಹ ಇದ್ಯಾವುದೇ ಸಂಬಂಧವನ್ನು ಇತರರ ಮಾತನ್ನು ಕೇಳಿ ಕೊನೆಗೊಳಿಸಬಾರದು. ಇದರಿಂದ ಮುಂದೊಂದು ದಿನ ನೀವೇ ಪಾಶ್ಚಾತಾಪವನ್ನು ಪಡಬೇಕಾಗುತ್ತದೆ ಎಂದಿದ್ದಾರೆ ಚಾಣಕ್ಯ. ಒಬ್ಬ ಸ್ನೇಹಿತ ನಿಮ್ಮ ಸಂಗಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು, ಅಥವಾ ಸಂಬಂಧಿಯೊಬ್ಬರು ನಿಮ್ಮ ಸಂಬಂಧದಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಬಹುದು. ಅಂತಹ ಸಂದರ್ಭಗಳಲ್ಲಿ, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ನಿಜಾಂಶವನ್ನು ತಿಳಿಯಲು ಪ್ರಯತ್ನಿಸಿ. ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ಅವರ ನಡವಳಿಕೆಯನ್ನು ಅರ್ಥಮಾಡಿಕೊಳ್ಳಿ. ಯಾವುದೇ ತಪ್ಪು ತಿಳುವಳಿಕೆಗಳಿದ್ದರೆ, ಅವುಗಳನ್ನು ಚರ್ಚೆಯ ಮೂಲಕ ಪರಿಹರಿಸಿ.
ಇದನ್ನೂ ಓದಿ: ಎಷ್ಟೇ ಸಂಪಾದಿಸಿದ್ರೂ ನಿಮ್ಮ ಕೈಯಲ್ಲಿ ದುಡ್ಡು ನಿಲ್ತಿಲ್ವಾ? ಹಾಗಿದ್ರೆ ಕಾಸು ಉಳಿಸಲು ತಕ್ಷಣವೇ ಈ ಕೆಲಸಗಳನ್ನು ಮಾಡಿ
ಹಣದ ವಿಷಯದಲ್ಲಿ ಇತರರನ್ನು ಕುರುಡಾಗಿ ನಂಬುವುದು ನಷ್ಟಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಚಾಣಕ್ಯ. ಕೆಲವೊಮ್ಮೆ, ಸ್ನೇಹಿತರು ಅಥವಾ ಸಂಬಂಧಿಕರು ಕಡಿಮೆ ಅವಧಿಯಲ್ಲಿ ಉತ್ತಮ ಲಾಭದ ಭರವಸೆ ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ. ಅವರ ಸಲಹೆಯನ್ನು ನಂಬಿ, ಕೆಲವು ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಸಹ ಹೂಡಿಕೆ ಮಾಡುತ್ತಾರೆ. ಆದರೆ ಈ ಹುಡಿಕೆಯ ಬಗ್ಗೆ ಸಂಪೂರ್ಣವಾದ ಜ್ಞಾನ ನಿಮ್ಮಲ್ಲಿ ಇಲ್ಲದಿದ್ದರೆ, ಹೂಡಿಕೆ ಮಾಡಿದ ಹಣವನ್ನೆಲ್ಲಾ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಹಣದ ವ್ಯವಹಾರದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ.
ಕೆಲವು ಮಹಿಳೆಯರು ಇತರರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಎಷ್ಟು ಮುಳುಗಿರುತ್ತಾರೆಂದರೆ, ಅವರು ತಮ್ಮ ಸ್ವಂತ ಆದ್ಯತೆಗಳು ಮತ್ತು ಅಗತ್ಯಗಳನ್ನು ನಿರ್ಲಕ್ಷಿಸುತ್ತಾರೆ. ಹೀಗೆ ಇತರರನ್ನು ಮೆಚ್ಚಿಸಲು ಬದುಕುವ ಅವಶ್ಯಕತೆಯಿಲ್ಲ. ನಮಗಾಗಿ ನಾವು ಬದುಕಬೇಕು ಜೊತೆಗೆ ನಾವು ನಮಗನಿಸಿದ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಅದರ ಪರಿಣಾಮಗಳನ್ನು ಮತ್ತು ಅದು ನಿಮ್ಮ ಜೀವನ ಮತ್ತು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಗಣಿಸುವುದು ಮುಖ್ಯ ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ