ಎಷ್ಟೇ ಸಂಪಾದಿಸಿದ್ರೂ ನಿಮ್ಮ ಕೈಯಲ್ಲಿ ದುಡ್ಡು ನಿಲ್ತಿಲ್ವಾ? ಹಾಗಿದ್ರೆ ಕಾಸು ಉಳಿಸಲು ತಕ್ಷಣವೇ ಈ ಕೆಲಸಗಳನ್ನು ಮಾಡಿ
ಹಣ ಸಂಪಾದಿಸುವುದು ಎಷ್ಟು ಮುಖ್ಯವೋ, ಅದನ್ನು ಉಳಿಸುವುದು ಕೂಡ ಅಷ್ಟೇ ಮುಖ್ಯ. ಅನೇಕ ಜನರು ಚೆನ್ನಾಗಿ ಸಂಪಾದಿಸುತ್ತಾರೆ, ಆದರೆ ಅವರ ಕೈಯಲ್ಲಿ ದುಡ್ಡು ನಿಲ್ಲೋದೇ ಇಲ್ಲ. ಇದೇ ರೀತಿ ಎಷ್ಟೇ ದುಡ್ಡಿದ್ದರೂ ನಿಮ್ಮ ಕೈಯಲ್ಲೂ ಹಣ ಅನ್ನೋದು ನಿಲ್ತಿಲ್ವಾ? ಹಾಗಿದ್ರೆ ತಕ್ಷಣವೇ ಈ ಕೆಲವು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ.

ಇವತ್ತಿನ ಕಾಲದಲ್ಲಿ ಹಣ (money) ಸಂಪಾದನೆಗೆ ಎಷ್ಟೇ ದಾರಿಯಿದ್ದರೂ, ಸಂಪಾದಿಸಿದ ಹಣವನ್ನು ಉಳಿಸುವುದು ದೊಡ್ಡ ಸವಾಲಾಗಿದೆ. ಎಷ್ಟೇ ಸಂಪಾದನೆ ಮಾಡಿದರೂ ಸಹ ಕೈಯಲ್ಲಿ ಹಣ ಅನ್ನೋದು ನಿಲ್ಲೋದೇ ಇಲ್ಲ. ಹೌದು ಬಹುತೇಕರು ಈ ಒಂದು ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ, ಕೈ ತುಂಬಾ ಸಂಪಾದನೆ ಮಾಡಿದರೂ ತಿಂಗಳ ಕೊನೆಯಲ್ಲಿ ಅವರ ಬಳಿ ಹಣವೇ ಇರೋದಿಲ್ಲ. ಈ ರೀತಿಯ ಹಣಕಾಸಿನ ಸಮಸ್ಯೆಗಳು ಉದ್ಭವಿಸಲು ನಾವು ಮಾಡುವ ಕೆಲವೊಂದು ತಪ್ಪುಗಳೇ ಕಾರಣ. ಅವುಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ಹಣವನ್ನು ಉಳಿತಾಯ ಮಾಡಬಹುದು. ಹಾಗಿದ್ರೆ ಸಂಪಾದಿಸಿದ ಹಣವನ್ನು ಉಳಿಸಲು ಯಾವೆಲ್ಲಾ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.
ನಿಮ್ಮ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡಿ:
ತಿಂಗಳ ಕೊನೆಯಲ್ಲಿ ಹಣ ಉಳಿಯಬೇಕೆಂದು ನೀವು ಬಯಸಿದರೆ, ನಿಮ್ಮ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡಲು ಕಲಿಯಿರಿ. ನಿಮ್ಮ ಅಗತ್ಯತೆಗಳು ಮತ್ತು ಬಯಕೆಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ಮೊದಲು, ಮನೆ ಬಾಡಿಗೆ, ದಿನಸಿ, ವಿದ್ಯುತ್ ಬಿಲ್‌ಗಳು ಮತ್ತು ಇತರ ಅಗತ್ಯಗಳಿಗೆ ಹಣವನ್ನು ಮೀಸಲಿಡಿ. ನಂತರ ಮಾತ್ರ ಇತರ ವಿಷಯಗಳಿಗೆ ಮಿತ ಖರ್ಚು ಮಾಡಿ.
ಕಷ್ಟ ಕಾಲಕ್ಕಾಗಿ ಹಣವನ್ನು ಉಳಿಸಿ:
ಜೀವನದಲ್ಲಿ ಕಷ್ಟಗಳು ಹೇಗೆ ಬರುತ್ತವೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಇಲ್ಲವೇ ಕೈಯಲ್ಲಿದ್ದ ಉದ್ಯೋಗವನ್ನೇ ಕಳೆದುಕೊಳ್ಳಬಹುದು. ಇಂತಹ ಸಂದರ್ಭದಗಳನ್ನು ಎದುರಿಸಲು ಒಂದಷ್ಟು ಉಳಿತಾಯ ನಿಮ್ಮ ಕೈಯಲ್ಲಿ ಇರಲೇಬೇಕು. ಹಾಗಾಗಿ ಸಂಬಳದಲ್ಲಿ ಕೊಂಚ ಹಣವನ್ನು ಉಳಿತಾಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಅನಗತ್ಯ ಖರ್ಚು ಮಾಡಬೇಡಿ:
ಕೆಲವರು ಪ್ರದರ್ಶನಕ್ಕಾಗಿ ಅಥವಾ ಇತತರ ಬಳಿ ಆ ವಸ್ತುಗಳು ಇವೆ ಎಂಬ ಕಾರಣಕ್ಕೆ ದುಬಾರಿ ಬಟ್ಟೆ, ಮೊಬೈಲ್ ಫೋನ್ ಮತ್ತು ಇತರ ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಇದು ಅವರ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನೀವು ಕೂಡ ಇದೇ ರೀತಿ ಅನಗತ್ಯ ಖರ್ಚು ಮಾಡ್ತೀರಾ? ಹಾಗಿದ್ರೆ ತಕ್ಷಣವೇ ಈ ಅಭ್ಯಾಸವನ್ನು ಬಿಟ್ಟುಬಿಡಿ. ಹಣವನ್ನು ಯಾವಾಗಲೂ ಬುದ್ಧಿವಂತಿಕೆಯಿಂದ ಬಳಸಿ, ನಿಮ್ಮ ಅಗತ್ಯಗಳಿಗೆ ಮಾತ್ರ ಆದ್ಯತೆ ನೀಡಿ ಮತ್ತು ಇತರರನ್ನು ಮೆಚ್ಚಿಸಲು ಖರ್ಚು ಮಾಡುವುದನ್ನು ತಪ್ಪಿಸಿ. ಆಗ ಮಾತ್ರ ನಿಮ್ಮ ಕೈಯಲ್ಲಿ ಹಣ ಉಳಿಯಲು ಸಾಧ್ಯ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳು ಅಷ್ಟಿಷ್ಟಲ್ಲ
ಯೋಚಿಸದೆ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ:
ಹಣದ ಬಗ್ಗೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹೂಡಿಕೆ ಮಾಡುವುದಾಗಲಿ, ಸಾಲ ನೀಡುವುದಾಗಲಿ, ಸಾಲ ತೆಗೆದುಕೊಳ್ಳುವುದಾಗಲಿ ಅಥವಾ ದುಬಾರಿ ವಸ್ತುವನ್ನು ಖರೀದಿಸುವುದಾಗಲಿ, ಮೊದಲು ಅವುಗಳ ಸಾಧಕ-ಬಾಧಕಗಳನ್ನು ಅಳೆಯಿರಿ. ನಂತರವೇ ಈ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಿ. ಇತರರ ಪ್ರಭಾವಕ್ಕೆ ಒಳಗಾಗಿ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವ್ಯರ್ಥ ಮಾಡಲು ಬಿಡಬೇಕು. ಯಾವಾಗಲೂ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ.
ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಾಗ ಕಲಿಕೆಯತ್ತ ಗಮನಹರಿಸಿ:
ಹಣ ಉಳಿಸಲು ಕೇವಲ ಖರ್ಚುಗಳನ್ನು ಕಡಿಮೆ ಮಾಡಿದರೆ ಸಾಲದು. ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸುವತ್ತಲೂ ನೀವು ಗಮನಹರಿಸಬೇಕು. ಹೊಸ ವಿಷಯಗಳನ್ನು ಕಲಿಯುವುದರಿಂದ ಭವಿಷ್ಯದಲ್ಲಿ ಉತ್ತಮ ಗಳಿಕೆಯ ಅವಕಾಶಗಳು ದೊರೆಯಬಹುದು. ಜೊತೆಗೆ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವ ಮೂಲಕವು ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ಜೊತೆಗೆ ಆ ಹಣವನ್ನು ಉಳಿತಾಯ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




