Chanakya Niti: ಜೀವನದಲ್ಲಿ ಸಂಕಷ್ಟ ಎದುರಾಗಬಾರದೆಂದರೆ ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಿ
ಆಚಾರ್ಯ ಚಾಣಕ್ಯರು ಯಶಸ್ಸನ್ನು ಸಾಧಿಸಲು ಹಲವಾರು ತತ್ವಗಳನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಯಶಸ್ಸಿನ ಜೊತೆಜೊತೆಗೆ ಯಾವುದೇ ಕಷ್ಟಗಳು ಎದುರಾಗದೆ ಒತ್ತಡ ರಹಿತ ಜೀವನವನ್ನು ನಡೆಸಲು ಒಂದಷ್ಟು ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ನಾವು ಯಾರೊಂದಿಗೂ ಹಂಚಿಕೊಳ್ಳಬಾರದ ಆ ವೈಯಕ್ತಿಕ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಬಹುತೇಕ ಹೆಚ್ಚಿನವರು ತಮ್ಮ ಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಘಟನೆಗಳು, ರಹಸ್ಯಗಳ (secrets) ಬಗ್ಗೆ ಯಾರೊಂದಿಗಾದರೂ ಶೇರ್ ಮಾಡುತ್ತಲೇ ಇರುತ್ತಾರೆ. ಈ ಅಭ್ಯಾಸ ಖಂಡಿತವಾಗಿಯೂ ಒಳ್ಳೆಯದಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಯಶಸ್ಸಿಗೆ ಅಡ್ಡಿಯುಂಟಾಗುವುದು ಮಾತ್ರವಲ್ಲದೆ, ಸಾಕಷ್ಟು ಸಂಕಷ್ಟಗಳು ಸಹ ಎದುರಾಗಬಹುದು. ಹಾಗಾಗಿ ಯಶಸ್ವಿ, ಒತ್ತಡರಹಿತ ಜೀವನವನ್ನು ನಡೆಸಲು, ಆರ್ಥಿಕವಾಗಿ ಮುಂದುವರೆಯಲು ಬಯಸಿದರೆ ನೀವು ಈ ಕೆಲವೊಂದು ಸೀಕ್ರೆಟ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ:
ನಿಮ್ಮ ಭವಿಷ್ಯದ ಯೋಜನೆಗಳು: ಚಾಣಕ್ಯರ ಪ್ರಕಾರ ಯಾರೊಬ್ಬರೂ ಸಹತಮ್ಮ ಭವಿಷ್ಯದ ಯೋಜನೆಗಳನ್ನು ಯಾರೊಂದಿಗೂ ಬಹಿರಂಗಪಡಿಸಬಾರದು. ಹಾಗೆ ಮಾಡುವುದರಿಂದ ನೀವು ಆ ಯೋಜನೆಗಳನ್ನು ಪ್ರಾರಂಭಿಸುವ ಮೊದಲೇ ಅಡೆತಡೆಗಳು ಉಂಟಾಗಬಹುದು.ಹೌದು ಕೆಲವರು ತಮ್ಮ ಅಸೂಯೆಯ ಕಾರಣದಿಂದ ನಿಮ್ಮ ಯೋಜನೆಗಳಿಗೆ ಕಲ್ಲು ಹಾಕುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಗುರಿಗಳು ಮತ್ತು ತಂತ್ರಗಳನ್ನು ಯಾವಾಗಲೂ ಗೌಪ್ಯವಾಗಿಡಿ.
ನಿಮ್ಮ ಆರ್ಥಿಕ ಸ್ಥಿತಿ: ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಎಂದಿಗೂ ಯಾರ ಬಳಿಯೂ ಹೇಳಿಕೊಳ್ಳಬಾರದು. ನೀವು ಶ್ರೀಮಂತರಾಗಿದ್ದರೆ, ನಿಮ್ಮ ಆದಾಯವನ್ನು ಬಹಿರಂಗಪಡಿಸುವುದರಿಂದ ಇತರರಲ್ಲಿ ಅಸೂಯೆ ಅಥವಾ ಅಸಮಾಧಾನ ಉಂಟಾಗಬಹುದು. ಇದೇ ಕಾರಣ ಇಟ್ಟುಕೊಂಡು ನಿಮಗೆ ತೊಂದರೆಯನ್ನೂ ಉಂಟು ಮಾಡಬಹುದು. ಮತ್ತೊಂದೆಡೆ, ನೀವು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದರೆ, ಜನರು ನಿಮ್ಮನ್ನು ಕೀಳಾಗಿ ಕಾಣಲು ಪ್ರಾರಂಭಿಸಬಹುದು.
ಇತರರೊಂದಿಗಿನ ಖಾಸಗಿ ಸಂಭಾಷಣೆಗಳು: ಇಬ್ಬರು ವ್ಯಕ್ತಿಗಳ ನಡುವೆ ಚರ್ಚಿಸಲ್ಪಟ್ಟ ವಿಷಯಗಳು ಅವರಿಬ್ಬರ ನಡುವೆಯೇ ಇರಬೇಕು, ಆ ಗುಟ್ಟಿನ ವಿಚಾರವನ್ನು ಮೂರನೇ ವ್ಯಕ್ತಿಯ ಬಳಿ ಹಂಚಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಯಾರಾದರೂ ನಿಮ್ಮನ್ನು ಖಾಸಗಿಯಾಗಿ ಹೊಗಳಿದರೆ, ಗೌಪ್ಯವಾಗಿ ಸಹಾಯ ಕೇಳಿದರೆ ಅಥವಾ ನಿಮ್ಮ ಮೇಲೆ ನಂಬಿಕೆ ಇಟ್ಟು ಇನ್ಯಾವುದೇ ವಿಚಾರಗಳ ಬಗ್ಗೆ ಶೇರ್ ಮಾಡಿಕೊಂಡರೆ ನೀವು ಆ ಸಂಭಾಷಣೆಯನ್ನು ಇತರರಿಗೆ ಎಂದಿಗೂ ಬಹಿರಂಗಪಡಿಸಬಾರದು. ಈ ರೀತಿ ಮಾಡುವುದರಿಂದ ನಂಬಿಕೆ ಹಾಳಾಗುವುದಲ್ಲದೆ, ಸಂಬಂಧದಲ್ಲಿಯೂ ಬಿರುಕು ಮೂಡಬಹುದು.
ಇದನ್ನೂ ಓದಿ: ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಲು ಈ ತತ್ವಗಳನ್ನು ಅನುಸರಿಸಿ
ನಿಮ್ಮ ವೈಯಕ್ತಿಕ ಜೀವನ: ಚಾಣಕ್ಯರ ಪ್ರಕಾರ, ಹಿಂದಿನ ಸಂಬಂಧಗಳು, ಕೌಟುಂಬಿಕ ವಿವಾದಗಳು ಅಥವಾ ಇತರ ಖಾಸಗಿ ಸಮಸ್ಯೆಗಳಂತಹ ವೈಯಕ್ತಿಕ ವಿಷಯಗಳನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳಬಾರದು. ಏಕೆಂದರೆ ಕೆಲವರು ನಿಮ್ಮ ಈ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ನಿಮಗೆಯೇ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಇದು ನಿಮ್ಮ ಮನಸ್ಸಿನ ಶಾಂತಿಯನ್ನೇ ಕದಡುತ್ತದೆ.
ನಿಮ್ಮ ಅನಾರೋಗ್ಯ, ದೌರ್ಬಲ್ಯ: ನಿಮ್ಮ ಅನಾರೋಗ್ಯ, ನಿಮ್ಮ ದೌರ್ಬಲ್ಯವನ್ನು ಇತರರೊಂದಿಗೆ ಯಾವತ್ತಿಗೂ ಹಂಚಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ನಿಮ್ಮ ದೌರ್ಬಲ್ಯಗಳ ಬಗ್ಗೆ ಹಂಚಿಕೊಂಡರೆ ಜನರು ನಿಮ್ಮ ಸ್ಥಿತಿಯ ಲಾಭ ಪಡೆಯಬಹುದು ಮತ್ತು ಇದು ಭವಿಷ್ಯದಲ್ಲಿ ನಿಮಗೆ ತುಂಬಾ ಹಾನಿಯನ್ನು ಮಾಡಬಹುದು. ಆದ್ದರಿಂದ ಇಂತಹ ಸೂಕ್ಷ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡದಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




