
ಯಶಸ್ಸು (Success) ಎಂಬುದು ನಮ್ಮ ಸಾಮರ್ಥ್ಯದ ಮೇಲೆ ಮಾತ್ರವಲ್ಲ, ನಮ್ಮ ನಡವಳಿಕೆ ಮತ್ತು ಅಭ್ಯಾಸಗಳ ಮೇಲೂ ಅವಲಂಬಿತವಾಗಿದೆ. ಹೌದು ಒಬ್ಬ ವ್ಯಕ್ತಿ ಎಷ್ಟೇ ಕಠಿಣ ಪರಿಶ್ರಮಿಯಾಗಿದ್ದರೂ, ಅವನಲ್ಲಿ ಕೆಲವೊಂದು ದುರ್ಗುಣಗಳಿದ್ದರೆ ಆತ ಎಂದಿಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸಣ್ಣ ಕೆಟ್ಟ ಅಭ್ಯಾಸಗಳು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನು ಉಂಟುಮಾಡಬಹುದು. ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ, ಜೀವನ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಪುರುಷರ ಯಾವ ಗುಣ ಅವರ ಜೀವನವನ್ನು ಹಾಳು ಮಾಡಲು ಕಾರಣವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಸೋಮಾರಿತನವಿದ್ದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇಂದಿನ ಕೆಲಸಗಳನ್ನು ನಾಳೆಗೆ ಮುಂದೂಡುವುದು ಅಥವಾ ಸಮಯವನ್ನು ಸುಮ್ಮನೆ ವ್ಯರ್ಥ ಮಾಡುವವರು ವೃತ್ತಿ ಜೀವನದಲ್ಲಿ ಎಂದಿಗೂ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ ಜೊತೆಗೆ ಅವರು ವೈಯಕ್ತಿಕ ಜೀವನದಲ್ಲೂ ಏಳಿಗೆಯನ್ನು ಹೊಂದಲು ಆಗುವುದಿಲ್ಲ. ಆದ್ದರಿಂದ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು.
ಕೆಟ್ಟ ಸ್ನೇಹಿತರು ಅಥವಾ ಕೆಟ್ಟ ಸಹವಾಸ ಜೊತೆಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಲ್ಲಿ ಎಡವಿದರೆ ಇದು ವ್ಯಕ್ತಿಯ ವೈಯಕ್ತಿಕ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೌದು ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲದ, ನಿಮ್ಮನ್ನು ಪ್ರೋತ್ಸಾಹಿಸದ ಜೀವನ ಸಂಗಾತಿ ಇದ್ದರೆ ನಿಮಗೆ ಜೀವನದಲ್ಲಿ ನೆಮ್ಮದಿಯೂ ಇರೋಲ್ಲ, ಯಶಸ್ಸನ್ನೂ ಸಹ ಸಾಧಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಕೆಟ್ಟ ಸ್ನೇಹಿತರ ಸಹವಾಸದಲ್ಲಿದ್ದರೆ, ನೀವು ಕೂಡ ಅವರ ಕೆಟ್ಟ ಅಭ್ಯಾಸವನ್ನು ಕಲಿತು ನಿಮ್ಮ ಜೀವನವನ್ನು ನೀವೇ ನಿಮ್ಮ ಕೈಯಾರೆ ಹಾಳು ಮಾಡಿದಂತಾಗುತ್ತದೆ.
ಅಹಂಕಾರ:
ಆಚಾರ್ಯ ಚಾಣಕ್ಯರ ಪ್ರಕಾರ, ಸಂಪತ್ತು ಅಥವಾ ಅಧಿಕಾರದ ಅಹಂಕಾರವು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ. ಎಷ್ಟೇ ಹಣ, ಶ್ರೀಮಂತಿಕೆ ಗಳಿಸಿದರೂ ಅಹಂಕಾರ ಇರಬಾರದು. ಏಕೆಂದರೆ ದುರಹಂಕಾರಿ ವ್ಯಕ್ತಿಗೆ ಹೊಸದನ್ನು ಕಲಿಯಲು ಸಾಧ್ಯವಿಲ್ಲ ಮತ್ತು ಇದು ಅವನ ಅವನತಿಯ ಆರಂಭವಾಗಿರುತ್ತದೆ. ಇದೇ ದುರಹಂಕಾರ ಒಂದು ದಿನ ವ್ಯಕ್ತಿಯ ಸಂಪೂರ್ಣ ಜೀವನವನ್ನು ಹಾಳು ಮಾಡುತ್ತದೆ.
ಆಚಾರ್ಯ ಚಾಣಕ್ಯರ ಪ್ರಕಾರ, ಪುರುಷರು ಇತರರೊಂದಿಗೆ ಮಾತನಾಡುವಾಗ ಯಾವಾಗಲೂ ತಮ್ಮ ಮಾತನ್ನು ನಿಯಂತ್ರಿಸಬೇಕು. ನಿಂದನೀಯ ಭಾಷೆ ಅಥವಾ ಕಠಿಣ ಪದಗಳನ್ನು ಬಳಸುವ ಪುರುಷರು ಕೆಲಸದಲ್ಲಿ ಹಾಗೂ ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾರೆ ಮತ್ತು ಇವರ ಈ ನಡವಳಿಕೆ ಮನೆಯಲ್ಲಿನ ಶಾಂತಿ ಮತ್ತು ಸಂತೋಷದ ಮೇಲೂ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಈ ಐದು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಆದಾಯಕ್ಕೆ ಅನುಗುಣವಾಗಿ ಹಣವನ್ನು ಖರ್ಚು ಮಾಡಬೇಕು. ಮುಖ್ಯವಾಗಿ ಹಣ ಉಳಿತಾಯ ಮಾಡಬೇಕು. ಅದು ಬಿಟ್ಟು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿ ಐಷಾರಾಮಿ ಜೀವನ ನಡೆಸುವ ಪುರುಷರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ, ಜೊತೆಗೆ ಇಂತಹ ಪುರುಷರು ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯೂ ಹೆಚ್ಚು. ಈ ಒಂದು ತಪ್ಪಿನಿಂದ ಜೀವನದಲ್ಲಿನ ನೆಮ್ಮದಿಯೇ ಹಾಳಾಗುತ್ತದೆ.
ಮಾದಕ ವ್ಯಸನವು ವ್ಯಕ್ತಿಯ ಮಾನಸಿಕ ಸ್ಥಿರತೆ ಮತ್ತು ಆರೋಗ್ಯವನ್ನು ಹಾಳು ಮಾಡುತ್ತದೆ. ಸಿಗರೇಟ್, ಮದ್ಯ ಅಥವಾ ಯಾವುದೇ ರೀತಿಯ ವ್ಯಸನವು ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಇಂತಹ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉದ್ಧಾರವಾಗಲು ಕೂಡ ಸಾಧ್ಯವಿಲ್ಲ ಹಾಗಾಗಿ ಈ ಎಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ