
ಪ್ರತಿಯೊಬ್ಬರೂ ಕೂಡ ಒಂದೊಳ್ಳೆ ಜೀವನ ನಡೆಸುವ ಸಲುವಾಗಿ ಕಷ್ಟಪಟ್ಟು ದುಡಿಯುತ್ತಾರೆ, ಹಣ ಸಂಪಾದನೆ ಮಾಡುತ್ತಾರೆ. ಆದರೆ ನೀವೇನಾದರೂ ಈ ತಪ್ಪುಗಳನ್ನು ಮಾಡಿದರೆ, ನೀವು ಸಂಪಾದಿಸಿದ ಹಣವೇ (money) ನಿಮ್ಮ ಶತ್ರುವಾಗಬಹುದು, ಇದರ ಕಾರಣದಿಂದಲೇ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ಇವರು ಹಣ ಸಂಪಾದನೆ, ಯಶಸ್ಸಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಕೆಲವೊಂದು ತಪ್ಪುಗಳಿಂದ ವ್ಯಕ್ತಿಗೆ ಆತ ಸಂಪಾದಿಸಿದ ಹಣವೇ ಹೇಗೆ ಶತ್ರುವಾಗುತ್ತದೆ ಎಂಬುದನ್ನು ಕೂಡ ವಿವರಿಸಿದ್ದಾರೆ. ಹಾಗಿದ್ದರೆ, ಯಾವ ತಪ್ಪುಗಳಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ತನ್ನ ಹಣವನ್ನು ಅನಗತ್ಯ ಖರ್ಚುಗಳು ಮತ್ತು ಸುಖಾಸುಮ್ಮನೆ ಬೇಡದ ವಸ್ತುಗಳಿಗೆ ಖರ್ಚು ಮಾಡುತ್ತಾ ಹೋದರೆ ಅವನ ಸ್ವಂತ ಹಣವೇ ಆತನ ಶತ್ರುವಾಗಬಹುದು. ಹೌದು ಖರ್ಚು ಹೆಚ್ಚಾದಾಗ ಹಣಕಾಸು ನಿರ್ವಹಣೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಆತ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಐಷಾರಾಮಿ ಜೀವನಕ್ಕಾಗಿ ಹಣ ಖರ್ಚು ಮಾಡುವ, ಸಂಪಾದನೆಗಿಂತ ಖರ್ಚು ಹೆಚ್ಚು ಮಾಡುವ ವ್ಯಕ್ತಿಯು ಭವಿಷ್ಯದಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಆರ್ಥಿಕ ತೊದರೆಯಿಂದ ಸಾಲ ಮಾಡುವುದು ಮಾತ್ರವಲ್ಲದೆ ಮಾನಸಿಕ ಒತ್ತಡವನ್ನು ಸಹ ಎದುರಿಸಬೇಕಾಗುತ್ತದೆ ಎಂದು ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ತಪ್ಪು ಉದ್ದೇಶಗಳಿಗೆ ಯಾವುದೇ ಕಾರಣಕ್ಕೂ ಹಣವನ್ನು ಬಳಸಬಾರದು ಎಂದು ಸಲಹೆ ನೀಡಿದ್ದಾರೆ. ಆದ್ದರಿಂದ ಕೈಯಲ್ಲಿ ಹಣ ಇದ್ದಾಗ, ಆ ದುಡ್ಡನ್ನು ಭವಿಷ್ಯಕ್ಕಾಗಿ ಕೂಡಿಡುವ ಬಗ್ಗೆ ಯೋಚನೆ ಮಾಡಬೇಕು.
ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ನಿಮ್ಮ ಸ್ನೇಹಿತನಂತೆ ಜೊತೆಯಿರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಹೇಳುವಂತೆ, ಹಣವನ್ನು ಕುಟುಂಬದ ಅಗತ್ಯಗಳನ್ನು ಪೂರೈಸಲು ಬಳಸಬೇಕು, ಪ್ರತಿಯೊಬ್ಬರೂ ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು, ಇದರಿಂದ ಆ ಕೂಡಿಟ್ಟ ಹಣವು ಕಷ್ಟದ ಸಮಯದಲ್ಲಿ ಒಬ್ಬ ಒಳ್ಳೆಯ ಸ್ನೇಹಿತನಂತೆ ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: ನಿಮ್ಮ ಈ ಅಭ್ಯಾಸಗಳೇ ಮನೆಯಲ್ಲಿ ದಾರಿದ್ರ್ಯ ನೆಲೆಸಲು ಕಾರಣ ಎನ್ನುತ್ತಾರೆ ಚಾಣಕ್ಯ
ಎಷ್ಟೇ ಪ್ರಯತ್ನ ಪಟ್ಟರೂ, ಕೆಲವರ ಕೈಯಲ್ಲಿ ಹಣವೇ ಉಳಿಯುವುದಿಲ್ಲ, ಅವರಿಗೆ ಹಣ ನಿರ್ವಹಣೆ ಕಷ್ಟವಾಗುತ್ತದೆ. ಹಾಗಾಗಿ ವ್ಯರ್ಥ ಖರ್ಚುಗಳನ್ನು ಕಡಿಮೆ ಮಾಡಬೇಕು, ಅಗತ್ಯ ವಿಚಾರಗಳಿಗೆ ಮಾತ್ರ ಹಣವನ್ನು ಖರ್ಚು ಮಾಡಬೇಕು, ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸಬೇಕು, ಸರಿಯಾದ ರೀತಿಯಲ್ಲಿ ಹೂಡಿಕೆಯನ್ನು ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ