AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ನಿಮ್ಮ ಈ ಅಭ್ಯಾಸಗಳೇ ಮನೆಯಲ್ಲಿ ದಾರಿದ್ರ್ಯ ನೆಲೆಸಲು ಕಾರಣ ಎನ್ನುತ್ತಾರೆ ಚಾಣಕ್ಯ

ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಕಠಿಣ ಶ್ರಮವನ್ನು ಪಡುವುದರ ಜೊತೆಗೆ ಒಳ್ಳೆಯ ಅಭ್ಯಾಸಗಳನ್ನು ಕೂಡ ಬೆಳೆಸಿಕೊಳ್ಳಬೇಕು. ಏಕೆಂದರೆ ನಮ್ಮ ಅಭ್ಯಾಸಗಳು ಕೂಡ ನಮ್ಮ ಯಶಸ್ಸಿನಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಅದಕ್ಕಾಗಿಯೇ ಆಚಾರ್ಯ ಚಾಣಕ್ಯರು ಈ ಅಭ್ಯಾಸಗಳನ್ನು ತ್ಯಜಿಸಬೇಕು ಇಲ್ಲದಿದ್ದರೆ, ಮನೆಯಲ್ಲಿ ದಾರಿದ್ರ್ಯ ನೆಲೆಸುವುದು ಖಚಿತ ಎಂದು ಎಚ್ಚರಿಕೆ ನೀಡಿರುವುದು. ಹಾಗಿದ್ರೆ ಮನುಷ್ಯನ ಯಾವ ಅಭ್ಯಾಸಗಳಿಂದ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ, ಯಾವ ಅಭ್ಯಾಸಗಳನ್ನು ತ್ಯಜಿಸಲೇಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ನಿಮ್ಮ ಈ ಅಭ್ಯಾಸಗಳೇ ಮನೆಯಲ್ಲಿ ದಾರಿದ್ರ್ಯ ನೆಲೆಸಲು ಕಾರಣ ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Nov 05, 2025 | 5:51 PM

Share

ಜೀವನದ ಯಶಸ್ಸಿನ ರಹಸ್ಯಗಳ ಬಗ್ಗೆ ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು, ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಪತಿ ಪತ್ನಿ ಹೇಗಿರಬೇಕು, ಕುಟುಂಬದಲ್ಲಿ ಸಂತೋಷ ನೆಲೆಸಲು ಮಾಡಬೇಕಾದದ್ದೇನು ಹೀಗೆ ವೈಯಕ್ತಿಕ ಹಾಗೂ ವೃತ್ತಿ ಜೀವನದ ಯಶಸ್ಸಿಗೆ ಸಂಬಂಧಿಸಿದ ಹಲವಾರು ವಿಚಾರಗಳ ಬಗ್ಗೆ ಸಂಬಂಧಿಸಿದ ಹಲವು ಸಂಗತಿಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅದೇ ರೀತಿ ಚಾಣಕ್ಯರು ಮನುಷ್ಯನ ಈ ಅಭ್ಯಾಸಗಳು ಆತನ ಬಹುದೊಡ್ಡ ಶತ್ರುಗಳಾಗಿದ್ದು, ಇವುಗಳೇ ಮನೆಯಲ್ಲಿ ದಾರಿದ್ರ್ಯ ಬಡತನ ನೆಲೆಸಲು ಕಾರಣ, ಅವುಗಳನ್ನು ತ್ಯಜಿಸಲೇಬೇಕು ಎಂದಿದ್ದಾರೆ. ಹಾಗಿದ್ದರೆ ಚಾಣಕ್ಯರು ಹೇಳಿರುವಂತೆ ದಾರಿದ್ರ್ಯಕ್ಕೆ ದಾರಿ ಮಾಡಿಕೊಡುವಂತಹ ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು ಎಂಬುದನ್ನು ತಿಳಿಯಿರಿ.

ಯಶಸ್ಸಿಗೆ ತೊಡಕಾಗುವ ಅಭ್ಯಾಸಗಳ್ಯಾವುವು?

ಸೋಮಾರಿತನ: ಸೋಮಾರಿತನವು ಪ್ರಗತಿಯ ಹಾದಿಯನ್ನು ತಡೆಯುವ ಬಹುದೊಡ್ಡ ಶತ್ರು. ನೀವು ಸೋಮಾರಿತನದಿಂದ ಇಂದು ಮಾಡುವ ಕೆಲಸಗಳನ್ನು ನಾಳೆಗೆ ಮುಂದೂಡಿದರೆ, ಖಂಡಿತವಾಗಿಯೂ ಇದರಿಂದ ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಸೋಮಾರಿತನವು ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿರಲು ಕಾರಣವಾಗುತ್ತದೆ, ಇದರಿಂದ ಅವಕಾಶಗಳು ತಪ್ಪಿಹೋಗುತ್ತವೆ ಮತ್ತು ನೀವು ಉತ್ತಮ ರೀತಿಯ ಹಣ ಸಂಪಾದನೆ ಮಾಡಲು ಸಹ ಸಾಧ್ಯವಾಗುವುದಿಲ್ಲ.  ಹಾಗಾಗಿ ಶ್ರೀಮಂತಿಕೆ ಗಳಿಸಲು, ಯಶಸ್ವಿಯಾಗಲು, ಸೋಮಾರಿತನವನ್ನು ಬಿಟ್ಟು ಕ್ರಿಯಾಶೀಲರಾಗಿರಿ.

ಹಣ ಖರ್ಚು ಮಾಡುವುದು: ನೀವು ಹಣ ಸಂಪಾದಿಸಿ ಅದನ್ನು ಉಳಿತಾಯ ಮಾಡದೆ ಪೋಲು ಮಾಡಿದರೆ, ನಿಮ್ಮ ಆರ್ಥಿಕ ಸ್ಥಿರತೆ ಹದಗೆಡುತ್ತದೆ. ತಾವು ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುವವರು ಮತ್ತು ನಿಯಮಿತವಾಗಿ ತಮ್ಮ ಖರ್ಚನ್ನು ನಿಯಂತ್ರಿಸದವರು ಒಂದು ದಿನ ಬಡವರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಾಗಿ ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡುವ ಅಭ್ಯಾಸವನ್ನು ತ್ಯಜಿಸಿ.

ನಕಾರಾತ್ಮಕ ಆಲೋಚನೆ: ಯಾರು ತಮ್ಮನ್ನು ತಾವು ದೂಷಿಸಿಕೊಳ್ಳುತ್ತಾರೋ ಅವರು ಎಂದಿಗೂ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಈ ಮನೋಭಾವವು ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಜೀವನದಲ್ಲಿ ಮುಂದುವರಿಯುವುದನ್ನು ತಡೆಯುತ್ತದೆ. ಹಾಗಾಗಿ ನಿಮ್ಮನ್ನು ನೀವು ದೂಷಿಸುವುದನ್ನು ನಿಲ್ಲಿಸಿ ಮತ್ತು ಬದಲಿಗೆ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂಬುದರ ಮೇಲೆ ಗಮನಹರಿಸಿ. ಇದರಿಂದ ನೀವು ಖಂಡಿತವಾಗಿಯೂ ಜೀವನದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಮಲಗುವ ಅಭ್ಯಾಸ: ಸೂರ್ಯಾಸ್ತವನ್ನು ಅತ್ಯಂತ ಪ್ರಮುಖ ಸಮಯವೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಮಲಗುವವರು ಬಡವರಾಗಿಯೇ ಉಳಿಯುತ್ತಾರೆ. ಈ ಸಮಯವು ಲಕ್ಷ್ಮಿ ದೇವಿಯನ್ನು ಪೂಜಿಸಲು ಮೀಸಲಾಗಿರುವುದರಿಂದ ಈ ಸಮಯದಲ್ಲಿ ಮಲಗುವುದು ಸರಿಯಲ್ಲ. ಈ ಅಭ್ಯಾಸದಿಂದ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ.

ಇದನ್ನೂ ಓದಿ: ಇಂತಹ ಜನರೊಂದಿಗೆ ಇದ್ದರೆ ನೀವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯ

ಕಠಿಣವಾಗಿ ಮಾತುಗಳಾಡುವುದು: ಆಚಾರ್ಯ ಚಾಣಕ್ಯರು ವ್ಯಕ್ತಿಯ ಕಠಿಣ ಮಾತು ಬಡತನದ ದೊಡ್ಡ ಸಂಕೇತವೆಂದು ಬಣ್ಣಿಸಿದ್ದಾರೆ. ಇತರರನ್ನು ನಿಂದಿಸುವವರು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತಾರೆ. ಅವರ ಕೆಲಸಗಳು ಹಾಗೂ ಸಂಬಂಧಗಳು ಅವರ ಮಾತುಗಳ ಕಾರಣದಿಂದಲೇ ಹಾಳಾಗುತ್ತದೆ. ಆದ್ದರಿಂದ ಯಾವಾಗಲೂ ಎಲ್ಲರೊಂದಿಗೂ ದಯೆಯಿಂದ ಮಾತನಾಡಬೇಕು ಮತ್ತು ಅವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು.

ಅಗತ್ಯಕ್ಕಿಂತ ಹೆಚ್ಚು ತಿನ್ನುವುದು: ಚಾಣಕ್ಯನ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು ತಿನ್ನುವ ಜನರು ಬಡವರಾಗುತ್ತಾರೆ ಏಕೆಂದರೆ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಗಳು ಬಡತನದತ್ತ ಸಾಗುತ್ತಾರೆ ಇದಲ್ಲದೆ ಅಂತಹ ವ್ಯಕ್ತಿಗಳು ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ಹಾಗಾಗಿ ಮಿತವಾಗಿ ಆಹಾರ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ