Kannada News Lifestyle Chicken Pickle: Chicken Pickle Try making this delicious chicken pickle at home
Chicken Pickle: ಚಿಕನ್‌ನಿಂದಲೂ ಸಖತ್ ಟೇಸ್ಟಿ ಉಪ್ಪಿನಕಾಯಿ ಮಾಡ್ಬೋದು; ಇಲ್ಲಿದೆ ನೋಡಿ ರೆಸಿಪಿ
ಸಾಮಾನ್ಯವಾಗಿ ಮಾವಿನಕಾಯಿ, ಬೆಳ್ಳುಳ್ಳಿ, ನಿಂಬೆ ಹಣ್ಣು, ಮೆಣಸಿನಕಾಯಿ, ಮಿಶ್ರ ತರಕಾರಿಗಳಿಂದ ಉಪ್ಪಿನಕಾಯಿ ತಯಾರಿಸುತ್ತಾರೆ. ತುಂಬಾನೇ ಖಾರ ಖಾರ ಹಾಗೂ ರುಚಿಕರವಾದಂತಹ ಇಂತಹ ಉಪ್ಪಿನಕಾಯಿಗಳನ್ನು ನೀವು ಕೂಡಾ ಸವಿದಿರುತ್ತೀರಿ ಅಲ್ವಾ. ಆದ್ರೆ ನೀವು ಯಾವತ್ತಾದ್ರೂ ಚಿಕನ್ ಉಪ್ಪಿನಕಾಯಿ ತಿಂದಿದ್ದೀರಾ? ಇತರೆ ಉಪ್ಪಿನಕಾಯಿಯಂತೆ ಈ ಉಪ್ಪಿನಕಾಯಿಯನ್ನು ಕೂಡಾ ತುಂಬಾನೇ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ತುಂಬಾನೇ ಟೇಸ್ಟಿಯಾಗಿರುವ ಚಿಕನ್ ಉಪ್ಪಿನಕಾಯಿ ರೆಸಿಪಿ ಇಲ್ಲಿದೆ ನೋಡಿ.
ನಾನ್‌ವೆಜ್ ಪ್ರಿಯರಿಗೆ ಚಿಕನ್ (Chicken) ಐಟಂಗಳೆಂದರೆ ಅಂದ್ರೆ ಪಂಚಪ್ರಾಣ. ಚಿಕನ್ ಬಿರಿಯಾನಿ, ಕಬಾಬ್, ಚಿಕನ್ ಸುಕ್ಕ, ಚಿಕನ್ ಚಿಲ್ಲಿ, ಪೆಪ್ಪರ್ ಚಿಕನ್, ಚಿಕನ್ ಗ್ರೇವಿ ಅಂತೆಲ್ಲಾ ವೆರೈಟಿ ಡಿಶ್‌ಗಳನ್ನು ಮಾಡಿ ಸವಿಯುತ್ತಾರೆ. ನೀವು ಕೂಡಾ ಚಿಕನ್‌ನಿಂದ ತಯಾರಿಸಿದ ಹಲವಾರು ಬಗೆಯ ರೆಸಿಪಿಗಳನ್ನು ಸವಿದಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಚಿಕನ್ ಉಪ್ಪಿನಕಾಯಿಯನ್ನು ಟೇಸ್ಟ್ ಮಾಡಿದ್ದೀರಾ? ಹೌದು ಮಾವಿನಕಾಯಿ, ನಿಂಬೆ, ಬೆಳ್ಳುಳ್ಳಿ, ತರಕಾರಿಗಳಿಂದ ಉಪ್ಪಿನಕಾಯಿ ತಯಾರಿಸುವಂತೆ ಚಿಕನ್‌ನಿಂದಲೂ ತುಂಬಾನೇ ರುಚಿಕರವಾದಂತಹ ಉಪ್ಪಿನಕಾಯಿಯನ್ನು (Pickle) ತಯಾರಿಸಬಹುದು. ನಿಮಗೇನಾದ್ರೂ ಈ ವಿಶೇಷ ಉಪ್ಪಿನಕಾಯಿಯನ್ನು ಸವಿಯಬೇಕು ಎಂದಾದ್ರೆ ಮನೆಯಲ್ಲೇ ಈ ರೀತಿ ಒಮ್ಮೆ ಬಲು ಸುಲಭವಾಗಿ ಮನೆಯಲ್ಲೇ ಚಿಕನ್ ಉಪ್ಪಿನಕಾಯಿ (Chicken Pickle) ತಯಾರಿಸಿ.
ಈ ರೀತಿ ಮನೆಯಲ್ಲೇ ಮಾಡಿ ಟೇಸ್ಟಿಯಾಗಿರುವ ಚಿಕನ್ ಉಪ್ಪಿನಕಾಯಿ:
ಈ ಆಂಧ್ರ ಸ್ಟೈಲ್ ಚಿಕನ್ ಉಪ್ಪಿನಕಾಯಿಯನ್ನು kavis_foodlab ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಉಪ್ಪಿನಕಾಯಿಯನ್ನು 4 ರಿಂದ 5 ತಿಂಗಳುಗಳ ಕಾಲ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಿ ಇಡಬಹುದು.
ಮೊದಲು ಒಂದು ಬಾಣಲೆಗೆ ಸಣ್ಣದಾಗಿ ಕಟ್ ಮಾಡಿದ ಚಿಕನ್ ಹಾಕಿ ಅದಕ್ಕೆ ಅರಶಿನ, ಉಪ್ಪು, ಎಣ್ಣೆಯನ್ನು ಹಾಕಿಕೊಂಡು ಚಿಕನ್ ಪೀಸ್‌ನಲ್ಲಿರುವ ನೀರಿನಾಂಶ ಆವಿಯಾಗುವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.
ಈಗ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ, ಜೀರಿಗೆ, ಕಾಳು ಮೆಣಸು, ಮೆಂತ್ಯ, ಏಲಕ್ಕಿ, ಲವಂಗ, ಸ್ಟಾರ್ ಹೂವು, ದಾಲ್ಚಿನ್ನಿ, ಕಲ್ಲಿನ ಹೂವು ಈ ಎಲ್ಲಾ ಮಸಾಲೆಗಳನ್ನು ಹಾಕಿ ಚೆನ್ನಾಗಿ ಡ್ರೈ ರೋಸ್ಟ್ ಮಾಡಿ, ನಂತರ ಅದರ ಬಿಸಿ ಆರಿದ ಬಳಿಕ ಈ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.
ನಂತರ ಒಂದು ಬಾಣಲೆಗೆ 350 ಎಂ.ಎಲ್ ನಷ್ಟು ಎಣ್ಣೆಯನ್ನು ಹಾಕಿ ಅದಕ್ಕೆ ಮೊದಲೇ ಬೇಯಿಸಿಟ್ಟ ಚಿಕನ್ ಪೀಸ್‌ಗಳನ್ನು ಹಾಕಿ, ಅದು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಬಳಿಕ ಫ್ರೈ ಮಾಡಿದ ಚಿಕನ್ ಪೀಸ್‌ಗಳನ್ನು ಬದಿಗಿಟ್ಟು, ಚಿಕನ್ ಫ್ರೈ ಮಾಡಿದ ಆ ಎಣ್ಣೆಗೆ ಎರಡು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದಕ್ಕೆ ಅಚ್ಚಖಾರದ ಪುಡಿ, ಮೊದಲೇ ಪುಡಿ ಮಾಡಿ ಇಟ್ಟುಕೊಂಡ ಮಸಾಲೆ ಪದಾರ್ಥ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಕೊನೆಗೆ ಫ್ರೈ ಮಾಡಿ ಇಟ್ಟುಕೊಂಡಂತಹ ಚಿಕನ್ ಪೀಸ್‌ಗಳನ್ನು ಕೂಡಾ ಇದಕ್ಕೆ ಸೇರಿಸಿ ಎಲ್ಲವನ್ನು ಒಮ್ಮೆ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮಿಶ್ರಣದ ಬಿಸಿ ಆರಿದ ಬಳಿಕ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರಣ ಮಾಡಿಕೊಂಡರೆ ತುಂಬಾ ಟೇಸ್ಟಿಯಾಗಿರುವ ಚಿಕನ್ ಉಪ್ಪಿನಕಾಯಿ ಸವಿಯಲು ಸಿದ್ಧ.