
ಮಕ್ಕಳು ಚಿಕ್ಕವರಿದ್ದಾಗ ಅವರ ಪ್ರಪಂಚವೇ ಅಮ್ಮ-ಅಪ್ಪ. ಶಾಲೆಯಲ್ಲಿ ಏನಾಯಿತು, ಸ್ನೇಹಿತರ ಜೊತೆ ಏನು ಮಾತನಾಡಿದರು, ಏನು ಬೇಕು, ಏನು ಇಷ್ಟವಾಯಿತು ಎಂಬುದನ್ನೆಲ್ಲ ಪೋಷಕರ ಬಳಿ ಹೇಳುತ್ತಿರುತ್ತಾರೆ. ಆದರೆ ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅವರಲ್ಲಿ ನಿಧಾನವಾಗಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ತಮ್ಮದೇ ಆದ ಸ್ನೇಹಿತರ ಬಳಗ, ಖಾಸಗಿ ಸಮಯ, ಮೊಬೈಲ್ (Mobile), ಸಾಮಾಜಿಕ ಜಾಲತಾಣ ಮತ್ತು ಸ್ವಂತ ನಿರ್ಧಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಆರಂಭಿಸುತ್ತಾರೆ. ಆಗ ಕೆಲವು ಪೋಷಕರಿಗೆ, ‘‘ನಮ್ಮ ಮಗು ನಮ್ಮಿಂದ ದೂರವಾಗುತ್ತಿದೆ’’ ಎಂಬ ಭಾವನೆ ಮೂಡಬಹುದು. ಆದರೆ ಇದು ಸಂಬಂಧ ಕಡಿಮೆಯಾಗುತ್ತಿದೆ ಎಂದರ್ಥವಲ್ಲ.
ಮಕ್ಕಳು ಬೆಳೆದಂತೆ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಆರಂಭಿಸುತ್ತಾರೆ. ತಮಗೆ ಇಷ್ಟವಾದ ಬಟ್ಟೆ ಧರಿಸುವುದು, ಸ್ನೇಹಿತರನ್ನು ಆಯ್ಕೆ ಮಾಡುವುದು, ಬಿಡುವಿನ ಸಮಯವನ್ನು ಹೇಗೆ ಕಳೆಯಬೇಕು ಎಂಬುದನ್ನು ನಿರ್ಧರಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ತಮ್ಮ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಪೋಷಕರ ಪ್ರತಿಯೊಂದು ಮಾತನ್ನೂ ಒಪ್ಪಿಕೊಳ್ಳದಿರುವುದು ಕೂಡ ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು.
ಇಲ್ಲಿಯೇ Generation Gap ಎಂಬ ಅಂತರ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಪೋಷಕರು ತಮ್ಮ ಅನುಭವದ ಆಧಾರದ ಮೇಲೆ ಮಕ್ಕಳಿಗೆ ಸಲಹೆ ನೀಡುತ್ತಾರೆ. ಮಕ್ಕಳು ತಮ್ಮ ಕಾಲದ ಬದಲಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಾರೆ. ಉದಾಹರಣೆಗೆ, ಪೋಷಕರಿಗೆ ಫೋನ್‌ನಲ್ಲಿ ಇಷ್ಟು ಸಮಯ ಏಕೆ? ಎಂಬ ಪ್ರಶ್ನೆ ಇರಬಹುದು. ಮಕ್ಕಳಿಗೆ ಅದೇ ಫೋನ್ ಸ್ನೇಹಿತರ ಸಂಪರ್ಕ, ಕಲಿಕೆ, ಮನರಂಜನೆ ಮತ್ತು ಸಾಮಾಜಿಕ ಬದುಕಿನ ಭಾಗವಾಗಿರಬಹುದು.
ಹೀಗಾಗಿ ಪೋಷಕರಿಗೆ ಮಕ್ಕಳ ವರ್ತನೆ ಹಠದಂತೆ ಕಂಡರೆ, ಮಕ್ಕಳಿಗೆ ಪೋಷಕರ ಮಾತು ಅತಿಯಾದ ನಿಯಂತ್ರಣದಂತೆ ಅನಿಸಬಹುದು. ಸಮಸ್ಯೆ ಕೆಲವೊಮ್ಮೆ ವಯಸ್ಸಿನ ಅಂತರದಲ್ಲಿರುವುದಕ್ಕಿಂತ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಇರುತ್ತದೆ.
ಮಕ್ಕಳು ಯಾವುದಾದರೂ ವಿಷಯ ಹೇಳುವಾಗ ತಕ್ಷಣ ಸಲಹೆ ನೀಡುವುದು ಅಥವಾ ತಪ್ಪು-ಸರಿಯೆಂದು ನಿರ್ಧರಿಸುವ ಬದಲು ಮೊದಲು ಅವರ ಮಾತನ್ನು ಸಂಪೂರ್ಣವಾಗಿ ಕೇಳುವುದು ಮುಖ್ಯ. ‘‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ’’ ಎನ್ನುವುದಕ್ಕಿಂತ ‘‘ನಿನಗೆ ಹೀಗೆ ಅನಿಸುವುದಕ್ಕೆ ಕಾರಣವೇನು?’’ ಎಂದು ಕೇಳಿದರೆ ಮಾತುಕತೆ ಮುಂದುವರಿಯಲು ಅವಕಾಶ ಸಿಗುತ್ತದೆ.
Sleep Tips: ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?
ಪ್ರತಿದಿನ ಸ್ವಲ್ಪ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಬಹುದು. ಒಟ್ಟಿಗೆ ಊಟ ಮಾಡುವುದು, ಹೊರಗೆ ಸಣ್ಣ ವಾಕ್‌ಗೆ ಹೋಗುವುದು, ಸಿನಿಮಾ ನೋಡುವುದು ಅಥವಾ ಮನೆಯ ಕೆಲಸವನ್ನು ಒಟ್ಟಿಗೆ ಮಾಡುವುದು ಕೂಡ ಸಹಜವಾಗಿ ಮಾತನಾಡಲು ಅವಕಾಶ ನೀಡುತ್ತದೆ.
ಮಕ್ಕಳಿಗೆ ಇದನ್ನು ಮಾಡಬೇಡ ಎಂದು ಹೇಳುವುದಕ್ಕಿಂತ ಏಕೆ ಮಾಡಬಾರದು ಎಂಬ ಕಾರಣವನ್ನು ವಿವರಿಸುವುದು ಉತ್ತಮ. ಅದೇ ರೀತಿ ವಯಸ್ಸಿಗೆ ತಕ್ಕಂತೆ ಕೆಲವು ಸಣ್ಣ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಲು ಅವಕಾಶ ನೀಡಬಹುದು. ಸ್ವಾತಂತ್ರ್ಯ ನೀಡುವುದು ಎಂದರೆ ಪೋಷಕರು ಸಂಪೂರ್ಣವಾಗಿ ನಿಯಂತ್ರಣ ಬಿಟ್ಟುಬಿಡುವುದು ಎಂದಲ್ಲ. ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯನ್ನೂ ಕಲಿಸುವುದು ಮುಖ್ಯ.
ಮಕ್ಕಳು ದೊಡ್ಡವರಾದಂತೆ ಅವರು ಪೋಷಕರನ್ನು ಹಿಂದೆ ಇದ್ದಂತೆ ಪ್ರತಿಯೊಂದು ಸಣ್ಣ ವಿಷಯಕ್ಕೂ ಅವಲಂಬಿಸುವುದಿಲ್ಲ. ಆದರೆ ಅದನ್ನು ಪ್ರೀತಿಯ ಕೊರತೆ ಅಥವಾ ಸಂಬಂಧದಲ್ಲಿ ಬಿರುಕು ಎಂದುಕೊಳ್ಳಬೇಕಿಲ್ಲ. ಚಿಕ್ಕವರಿದ್ದಾಗ ಪೋಷಕರು ಮಕ್ಕಳಿಗೆ ದಾರಿ ತೋರಿಸುವವರಾಗಿದ್ದರೆ, ಮುಂದೆ ಅವರು ಸಲಹೆ ಕೇಳಬಹುದಾದ ಮತ್ತು ಕಷ್ಟದ ಸಂದರ್ಭದಲ್ಲಿ ನೆನಪಿಗೆ ಬರುವ ವ್ಯಕ್ತಿಗಳಾಗಬಹುದು.
ಮಕ್ಕಳು ತಮ್ಮದೇ ಆದ ಜಗತ್ತನ್ನು ಕಟ್ಟಿಕೊಳ್ಳಲು ಆರಂಭಿಸಿದಾಗ ಅವರನ್ನು ಸದಾ ನಿಯಂತ್ರಿಸುವ ಬದಲು, ಅಗತ್ಯವಿದ್ದಾಗ ತಮ್ಮ ಬಳಿ ಬಂದು ಮಾತನಾಡಬಹುದು ಎಂಬ ನಂಬಿಕೆಯನ್ನು ಮೂಡಿಸುವುದು ಮುಖ್ಯ. ಅವರ ಖಾಸಗಿತನವನ್ನು ಗೌರವಿಸುತ್ತಾ, ಸರಿಯಾದ ಸಮಯದಲ್ಲಿ ಮಾರ್ಗದರ್ಶನ ನೀಡುವುದು ಪೋಷಕ-ಮಕ್ಕಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು.
Generation Gap ಸಂಪೂರ್ಣವಾಗಿ ಇಲ್ಲವಾಗಬೇಕೆಂದಿಲ್ಲ. ಪೋಷಕರು ಮತ್ತು ಮಕ್ಕಳು ವಿಭಿನ್ನ ಕಾಲಘಟ್ಟದಲ್ಲಿ ಬೆಳೆದಿರುವುದರಿಂದ ಅಭಿಪ್ರಾಯ, ಆಸಕ್ತಿ ಮತ್ತು ಜೀವನಶೈಲಿಯಲ್ಲಿ ವ್ಯತ್ಯಾಸ ಇರುವುದು ಸಹಜ. ಆದರೆ ಪರಸ್ಪರ ಮಾತುಕತೆ, ಗೌರವ ಮತ್ತು ನಂಬಿಕೆಯ ಮೂಲಕ ಈ ಅಂತರವನ್ನು ಕಡಿಮೆ ಮಾಡಬಹುದು. ಮಕ್ಕಳಿಗೆ ಸ್ವಲ್ಪ ಜಾಗ ನೀಡುತ್ತಾ, ಅಗತ್ಯವಿದ್ದಾಗ ಅವರ ಜೊತೆಯಲ್ಲಿರುವುದು ಪೋಷಕರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ