
ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಈ ಹಬ್ಬವನ್ನು ದೀಪಗಳನ್ನು ಬೆಳಗುವ ಮೂಲಕ ಹಾಗೂ ಪಟಾಕಿಗಳನ್ನು (Firecracker) ಹಚ್ಚುವ ಮೂಲಕ ಬಲು ಜೋರಾಗಿ ಆಚರಿಸಲಾಗುತ್ತದೆ. ದೀಪಾವಳಿಯಂದು, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಖುಷಿ ಖುಷಿಯಿಂದ ಬಹಳಷ್ಟು ಪಟಾಕಿಗಳನ್ನು ಸಿಡಿಸುತ್ತಾರೆ. ಪಟಾಕಿಗಳನ್ನು ಹಚ್ಚುವಾಗ ಎಚ್ಚರಿಕೆ ವಹಿಸದಿದ್ದರೆ, ಗಂಭೀರ ಗಾಯಗಳಾಗುವ ಸಾಧ್ಯತೆಯಿದೆ. ಸ್ವಲ್ಪ ಅಜಾಗರೂಕತೆಯು ಈ ಹಬ್ಬದ ಸಂತೋಷವನ್ನು ದುರಂತವಾಗಿ ಪರಿವರ್ತಿಸಬಹುದು. ಹೌದು ಪಟಾಕಿಗಳಿಂದ ಹೊರಸೂಸುವ ಕಿಡಿಗಳು, ಹೊಗೆ ಮತ್ತು ದೊಡ್ಡ ಶಬ್ದವು ಸಮಸ್ಯೆಗಳನ್ನು ಉಂಟುಮಾಡುವುದಲ್ಲದೆ, ಮಕ್ಕಳು, ವೃದ್ಧರು ಮತ್ತು ಸಾಕುಪ್ರಾಣಿಗಳಿಗೂ ಹಾನಿ ಮಾಡುತ್ತದೆ. ಆದ್ದರಿಂದ, ಯಾವುದೇ ರೀತಿಯ ಹಾನಿಯನ್ನು ತಪ್ಪಿಸಲು ಪಟಾಕಿ ಹಚ್ಚುವಾಗ ಈ ಮುನ್ನೆಚ್ಚರಿಕಾ ಕ್ರಮಗಳು ಪಾಲಿಸಬೇಕು.
ಕೆಲವರು ಕೈಯಲ್ಲಿ ಹಿಡಿದುಕೊಂಡು ಪಟಾಕಿಯನ್ನು ಹಚ್ಚಿ, ಅದನ್ನು ಎಸೆಯುತ್ತಾರೆ. ಇದು ಬೇರೆಯವರ ಮೈಮೇಲೆ ಬಿದ್ದರೆ ಗಾಯಗಳಾಗುವ ಅಪಾಯ ಇರುತ್ತದೆ. ಇದಲ್ಲದೆ, ಪಟಾಕಿ ಕೈಯಲ್ಲಿ ಸಿಡಿಯುವ ಅಪಾಯವೂ ಇರುತ್ತದೆ. ಆದ್ದರಿಂದ, ಯಾವಾಗಲೂ ಪಟಾಕಿಗಳನ್ನು ನೆಲದ ಮೇಲೆ ಇಟ್ಟು ಹಚ್ಚಿ.
ಪಟಾಕಿಗಳನ್ನು ಸುಡಲು ಯಾವಾಗಲೂ ತೆರೆದ ಸ್ಥಳವನ್ನು ಆರಿಸಿ. ಮನೆಯ ಒಳಗೆ, ಬಾಲ್ಕನಿಯಲ್ಲಿ, ಮೆಟ್ಟಿಲುಗಳಲ್ಲಿ ಅಥವಾ ಮುಚ್ಚಿದ ಸ್ಥಳದಲ್ಲಿ ಪಟಾಕಿಗಳನ್ನು ಸುಡುವುದು ಅಪಾಯಕಾರಿ. ಹಾಗಾಗಿ ಮರಗಳು, ವಾಹನಗಳು ಮತ್ತು ಕಟ್ಟಡಗಳಿಂದ ದೂರವಿರುವ ವಿಶಾಲವಾದ ತೆರೆದ ಸ್ಥಳಗಳಲ್ಲಿ ಪಟಾಕಿ ಸಿಡಿಸಿ. ಇದರಿಂದ ಅವಘಡಗಳು ಸಂಭವಿಸದಂತೆ ತಡೆಯಬಹುದು. ಸಿಡಿಸಿದ ಪಟಾಕಿಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ನಂತರ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ.
ಮಕ್ಕಳು ಮೇಲ್ವಿಚಾರಣೆಯಿಲ್ಲದೆ ಸಣ್ಣ ಪಟಾಕಿಗಳನ್ನು ಸಹ ಸಿಡಿಸಲು ಬಿಡಬೇಡಿ. ಸರಿಯಾದ ಮಾರ್ಗದರ್ಶನ ನೀಡಿ, ಅಪಾಯಕಾರಿಯಲ್ಲದ ಸಣ್ಣಪುಟ್ಟ ಪಟಾಕಿಗಳನ್ನು ಮಾತ್ರ ಮಕ್ಕಳ ಕೈಯಿಂದ ಸಿಡಿಸಿ. ಜೊತೆಗೆ ಮಕ್ಕಳು ಪಟಾಕಿ ಹಚ್ಚುವಾಗ ಅವರ ಜೊತೆ ನೀವು ಕೂಡ ಇರಲೇಬೇಕು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.
ದೀಪಾವಳಿ ಸಂಜೆಯಲ್ಲಿ ಪಟಾಕಿ ಸಿಡಿಸುವ ವೇಳೆಯಲ್ಲಿ ನೆಟೆಡ್, ಸ್ಯಾಟಿನ್, ವೆಲ್ವೆಟ್, ರೇಷ್ಮೆ, ಜಾರ್ಜೆಟ್ ಮುಂತಾದ ಬಟ್ಟೆಗಳನ್ನು ಧರಿಸುವ ಬದಲು ಹತ್ತಿ ಬಟ್ಟೆ ಮಾತ್ರ ಧರಿಸಿ. ಏಕೆಂದರೆ ಹತ್ತಿ ಬಟ್ಟೆ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಸಿಂಥೆಟಿಕ್ ಬಟ್ಟೆಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ. ಹಾಗಾಗಿ ಅಪಾಯಗಳನ್ನು ತಪ್ಪಿಸಲು ಚರ್ಮದ ಬಟ್ಟೆ ಧರಿಸಿ.
ಪಟಾಕಿ ಸಿಡಿಸುವಾಗ ಯಾವಾಗಲೂ ಹತ್ತಿರದಲ್ಲಿ ನೀರು, ಮರಳು ಅಥವಾ ಫೈರ್ ಸ್ಟಾಪ್ ಗ್ಯಾಸ್ ಇಟ್ಟುಕೊಳ್ಳಿ. ಜೊತೆಗೆ ಪ್ರಥಮ ಚಿಕಿತ್ಸಾ ಕಿಟ್ಗಳನ್ನು ಸಹ ಜೊತೆಗಿರಿಸಿ. ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿ ಏನಾದರೂ ಸಣ್ಣಪುಟ್ಟ ಗಾಯಗಳಾದರೆ, ಇದರಿಂದ ತಕ್ಷಣಕ್ಕೆ ಚಿಕಿತ್ಸೆ ನೀಡಬಹುದು.
ಇದನ್ನೂ ಓದಿ: ಹಬ್ಬದ ಶಾಪಿಂಗ್ನಲ್ಲಿ ಈ ಸ್ಮಾರ್ಟ್ ಟಿಪ್ಸ್ಗಳನ್ನು ಪಾಲಿಸುವ ಮೂಲಕ ಅನಗತ್ಯ ಖರ್ಚುಗಳನ್ನು ತಪ್ಪಿಸಿ
ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಕಣ್ಣಿನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ಮಕ್ಕಳ ಕಣ್ಣುಗಳ ಬಗ್ಗೆ. ಕಣ್ಣಿನ ಸುರಕ್ಷತೆಗೆ ಸಂಬಂಧಿಸಿದಂತೆ, ಹತ್ತಿರದಿಂದ ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಕನ್ನಡಕವನ್ನು ಧರಿಸಿ ಅಥವಾ ಪಟಾಕಿ ಹೊಡೆಯುವಾಗ ಮಕ್ಕಳ ಮುಖವನ್ನು ತಿರುಗಿಸಿ. ಪಟಾಕಿಗಳನ್ನು ಸುಟ್ಟ ನಂತರ ಕಣ್ಣುಗಳನ್ನು ಮುಟ್ಟುವ ಮೊದಲು ಸೋಪ್ ಅಥವಾ ನೀರಿನಿಂದ ಕೈಯನ್ನು ತೊಳೆಯಿರಿ.
ನಿಮ್ಮ ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ, ಪಟಾಕಿಗಳ ದೊಡ್ಡ ಶಬ್ದಗಳಿಂದ ಉಂಟಾಗುವ ಹಾನಿಯಿಂದ ಕಿವಿಯನ್ನು ರಕ್ಷಿಸಲು ಮಕ್ಕಳ ಕಿವಿಗೆ ಇಯರ್ ಪ್ಲಗ್ ಅಥವಾ ಹತ್ತಿ ಚೆಂಡನ್ನು ಇಡಿ. ನಿಮ್ಮ ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ವಿಶೇಷವಾಗಿ ಉಸಿರಾಟದ ತೊಂದರೆಗಳಿದ್ದರೆ, ಅವರನ್ನು ಹೊಗೆ ತುಂಬಿದ ಪ್ರದೇಶಗಳಿಂದ ಆದಷ್ಟು ದೂರವಿರಿಸಿ. ಸುಟ್ಟಗಾಯಗಳಾದಾಗ, ಮನೆಮದ್ದುಗಳನ್ನು ಆಶ್ರಯಿಸುವ ಬದಲು, ಗಾಯವಾದ ಸ್ಥಳಕ್ಕೆ ತಣ್ಣೀರನ್ನು ಸುರಿಯಿರಿ. ಪ್ರಥಮ ಚಿಕಿತ್ಸೆಯನ್ನು ನೀಡಿ. ಅಗತ್ಯವಿದ್ದರೆ, ತಕ್ಷಣ ಆಸ್ಪತ್ರೆಗೆ ಹೋಗಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ