
ಮಳೆಗಾಲದಲ್ಲಿ ಜ್ವರ (Fever), ವಾಂತಿ, ವಾಕರಿಕೆ ಅಥವಾ ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಡೆಂಗ್ಯೂ ಇರಬಹುದೇ ಎಂಬ ಅನುಮಾನ ಮೂಡುವುದು ಸಹಜ. ಡೆಂಗ್ಯೂ ಎಂದಾಕ್ಷಣ ಹೆಚ್ಚಿನ ಜ್ವರ, ತಲೆನೋವು, ಮೈ-ಕೈ ನೋವು ಮತ್ತು ಸುಸ್ತು ನೆನಪಾಗುತ್ತದೆ. ಆದರೆ ಡೆಂಗ್ಯೂ ಸೋಂಕಿಗೆ ಒಳಗಾದ ಪ್ರತಿಯೊಬ್ಬರಲ್ಲೂ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬೇಕೆಂದಿಲ್ಲ. ಕೆಲವರಲ್ಲಿ ಲಕ್ಷಣಗಳು ಸೌಮ್ಯವಾಗಿರಬಹುದು ಅಥವಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳಿಗಿಂತ ಭಿನ್ನವಾಗಿರಬಹುದು.
ಡೆಂಗ್ಯೂನ ಪ್ರಮುಖ ಲಕ್ಷಣಗಳಲ್ಲಿ ಜ್ವರವೂ ಒಂದು. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕಿನ ಲಕ್ಷಣಗಳ ತೀವ್ರತೆ ಬದಲಾಗಬಹುದು. ಕೆಲವು ಸಂದರ್ಭಗಳಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳೇ ಕಾಣಿಸಿಕೊಳ್ಳದೆ ಸೋಂಕು ಇರಬಹುದು. ಇನ್ನೂ ಕೆಲವರಲ್ಲಿ ಜ್ವರ ಕಡಿಮೆ ಪ್ರಮಾಣದಲ್ಲಿರಬಹುದು. ಕೆಲವೊಮ್ಮೆ ಜ್ವರ ಕಡಿಮೆಯಾದ ಬಳಿಕವೂ ಇತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಜ್ವರವಿಲ್ಲ ಎಂಬ ಒಂದೇ ಕಾರಣಕ್ಕೆ ಡೆಂಗ್ಯೂ ಸಾಧ್ಯತೆಯನ್ನು ತಳ್ಳಿಹಾಕುವುದು ಸರಿಯಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರರಾದ ಡಾ. ರೇಷು ಅಗರ್ವಾಲ್ ಅವರ ಪ್ರಕಾರ, ಸುತ್ತಮುತ್ತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ ವ್ಯಕ್ತಿಗೆ ಹಠಾತ್ ಸುಸ್ತು, ಮೈ ನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡರೆ ಜ್ವರವಿಲ್ಲದಿದ್ದರೂ ಡೆಂಗ್ಯೂ ಸಾಧ್ಯತೆಯನ್ನು ಪರಿಗಣಿಸಬೇಕು.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳಿಗಿಂತ ಭಿನ್ನವಾಗಿ, ಇಂತಹ ಡೆಂಗ್ಯೂ ಪ್ರಕರಣಗಳಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಡಬಹುದು. ವಾಂತಿ, ಅತಿಸಾರ, ಹೊಟ್ಟೆ ನೋವು, ಅಜೀರ್ಣದ ಜತೆಗೆ ಸುಸ್ತು, ತಲೆನೋವು, ಕಣ್ಣಿನ ನೋವು, ಸ್ನಾಯು ಮತ್ತು ಕೀಲುಗಳಲ್ಲಿ ನೋವು, ಹಸಿವಾಗದಿರುವುದು ಹಾಗೂ ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಡೆಂಗ್ಯೂ ದೇಹದ ಇತರ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರಬಹುದು.
ನಿದ್ರೆ ಇಲ್ಲದೆ ಮನುಷ್ಯ ಎಷ್ಟು ದಿನ ಬದುಕಬಲ್ಲ? ಹೆಚ್ಚು ಹೊತ್ತು ನಿದ್ರೆ ಮಾಡದಿದ್ದರೆ ಏನಾಗುತ್ತದೆ?
ನಿರಂತರ ಹೊಟ್ಟೆ ನೋವು, ಪದೇಪದೇ ವಾಂತಿ, ಉಸಿರಾಟದ ತೊಂದರೆ, ಮೂಗು ಅಥವಾ ಹಲ್ಲಿನ ಒಸಡುಗಳಿಂದ ರಕ್ತಸ್ರಾವ ಹಾಗೂ ತೀವ್ರ ಚಡಪಡಿಕೆಯಂತಹ ಲಕ್ಷಣಗಳು ಕಾಣಿಸಿಕೊಂಡರೆ ವಿಶೇಷ ಎಚ್ಚರಿಕೆ ವಹಿಸಬೇಕು. ಇವುಗಳನ್ನು ಕೇವಲ ಸುಸ್ತು ಅಥವಾ ಹವಾಮಾನ ಬದಲಾವಣೆಯಿಂದ ಉಂಟಾದ ಸಮಸ್ಯೆ ಎಂದು ನಿರ್ಲಕ್ಷಿಸಬಾರದು.
ಡೆಂಗ್ಯೂ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆ ಎಂದರೆ ಜ್ವರ ಕಡಿಮೆಯಾದ ಬಳಿಕ ಅಪಾಯವೂ ಮುಗಿಯುತ್ತದೆ ಎಂಬುದು. ಆದರೆ ಕೆಲವು ರೋಗಿಗಳಲ್ಲಿ ಜ್ವರ ಕಡಿಮೆಯಾಗುವ ಸಮಯದಲ್ಲೇ ಮತ್ತಷ್ಟು ಸಮಸ್ಯೆಗಳು ಆರಂಭವಾಗಬಹುದು. ಈ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಕೊರತೆ ಸೇರಿದಂತೆ ಇತರ ತೊಂದರೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜ್ವರ ಕಡಿಮೆಯಾದ ಬಳಿಕವೂ ರೋಗಿಯ ಆರೋಗ್ಯದ ಮೇಲೆ ನಿಗಾ ಇರಿಸುವುದು ಮುಖ್ಯ ಎಂದು ವೈದ್ಯರು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ