ಪಪ್ಪಾಯಿ ತಿಂದ ನಂತರ ಈ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ, ಇಲ್ಲಿದೆ ಅಡ್ಡ ಪರಿಣಾಮ
ಪಪ್ಪಾಯಿ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವ ಹಣ್ಣುಗಳಲ್ಲಿ ಒಂದಾಗಿದೆ. ಇದು ತ್ವಚೆ ಹಾಗೂ ದೇಹಾರೋಗ್ಯವನ್ನು ಕಾಡಪಾಡಿಕೊಳ್ಳಲು ಸಹಕಾರಿಯಾದೆ. ಹೀಗಿದ್ದರೂ ಕೂಡಾ ಪಪ್ಪಾಯಿ ಹಣ್ಣನ್ನು ತಿಂದ ತಕ್ಷಣ ಕೆಲವು ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಪಪ್ಪಾಯಿ ತಿಂದ ಬಳಿಕ ಈ ಕೆಲವು ಪದಾರ್ಥಗಳ ಸೇವನೆಯನ್ನು ತಪ್ಪಿಸುವುದು ಉತ್ತಮ.
ಪಪ್ಪಾಯಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಹಣ್ಣುಗಳಲ್ಲಿ ಒಂದಾಗಿದೆ. ಇದು ತ್ವಚೆ, ಕೂದಲು ಹಾಗೂ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪಪ್ಪಾಯಿಯಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ, ವಿಟಮಿನ್ ಎ ಮುಂತಾದ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಈ ಹಣ್ಣಿನಲ್ಲಿ ಪಪೈನ್ ಎಂಬ ಸಂಯುಕ್ತವಿದೆ. ಇದು ಹೊಟ್ಟೆಯ ಒಳಪದರವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಅನೇಕ ಚರ್ಮದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಹಾಗೂ ಇದು ಹೊಟ್ಟೆಯನ್ನು ತಂಪಾಗಿಸುವುದರ ಜೊತೆಗೆ ಮಲಬದ್ಧತೆ, ಪೈಲ್ಸ್ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೀಗೆ ಪಪ್ಪಾಯಿ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದ್ದರೂ ಸಹ ಅದನ್ನು ತಿನ್ನುವ ಸರಿಯಾದ ಮಾರ್ಗದ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ, ಅದು ಪ್ರಯೋಜನಗಳ ಬದಲಿಗೆ ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚು. ಹೌದು, ಆಯುರ್ವೇದದ ಪ್ರಕಾರ ಪಪ್ಪಾಯಿ ತಿಂದ ನಂತರ ಕೆಲವು ಪದಾರ್ಥಗಳನ್ನು ಸೇವನೆ ಮಾಡಬಾರದು. ಏಕೆಂದರೆ ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಪ್ರಯೋಜನ ದೊರಕುವ ಬದಲಾಗಿ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಹಾಗಾದರೆ ಪಪ್ಪಾಯಿ ತಿಂದ ಬಳಿಕ ಯಾವೆಲ್ಲಾ ಆಹಾರವನ್ನು ಸೇವನೆ ಮಾಡಬಾರದು ಎಂಬುದನ್ನು ನೋಡೋಣ.
ಪಪ್ಪಾಯಿ ತಿಂದ ಬಳಿಕ ಈ ಕೆಲವು ಪದಾರ್ಥಗಳನ್ನು ಸೇವಿಸಬೇಡಿ
ತಣ್ಣೀರು: ಪಪ್ಪಾಯಿ ತಿಂದ ನಂತರ ತಣ್ಣೀರು ಕುಡಿದರೆ ಅದು ನಿಮ್ಮ ದೇಹಕ್ಕೆ ಹಾನಿಯುಂಟುಮಾಡುತ್ತದೆ. ವಾಸ್ತವವಾಗಿ ಈ ಹಣ್ಣನ್ನು ತಿಂದ ಬಳಿಕ ತಣ್ಣೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗಿ, ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಪಪ್ಪಾಯಿಯನ್ನು ತಿಂದ ಬಳಿಕ, ಉತ್ತಮ ಜೀರ್ಣಕ್ರಿಯೆಗಾಗಿ ಯಾವಾಗಲೂ ತಣ್ಣೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ.
ಡೈರಿ ಉತ್ಪನ್ನಗಳು: ಪಪ್ಪಾಯಿ ತಿಂದ ಕೂಡಲೇ ಹಾಲು, ಚೀಸ್, ಬೆಣ್ಣೆ ಅಥವಾ ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಹೊಟ್ಟೆ ಸೆಳೆತ ಮತ್ತು ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಪಪ್ಪಾಯಿಯಲ್ಲಿರುವ ಕೆಲವು ಕಿಣ್ವಗಳು ಈ ಡೈರಿ ಉತ್ಪನ್ನಗಳ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡುವ ಮೂಲಕ ಹೊಟ್ಟೆ ಸಂಬಂಧಿ ಅಸ್ವಸ್ಥತೆಗಳನ್ನು ಉಂಟುಮಾಡಬಹುದು. ಅಲ್ಲದೆ ನೀವು ಹಾಲು, ಮೊಸರು ಅಥವಾ ಇತರ ಡೈರಿ ಉತ್ಪನ್ನಗಳನ್ನು ಪಪ್ಪಾಯಿಯೊಂದಿಗೆ ಸೇವಿಸಿದರೆ ಅದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಿ ಅದು ಗ್ಯಾಸ್, ಹೊಟ್ಟೆಯುಬ್ಬರ ಅಥವಾ ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡಬಹುದು.
ಸೌತೆಕಾಯಿ: ಪಪ್ಪಾಯಿ ತಿಂದ ತಕ್ಷಣ ಸೌತೆಕಾಯಿ ತಿನ್ನುವುದರಿಂದ ಹೊಟ್ಟೆ ಉಬ್ಬರ, ವಾಯು, ಹೊಟ್ಟೆ ಸೆಳೆತ ಮತ್ತು ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಾಸ್ತವವಾಗಿ ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನಾಂಶವಿದೆ ಮತ್ತು ಅದನ್ನು ಸೇವಿಸುವುದರಿಂದ ದೇಹದಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುತ್ತದೆ. ಇದರಿಂದಾಗಿ ನೀವು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಮ್ಲೀಯ ಆಹಾರಗಳು: ಕಿತ್ತಳೆ, ದ್ರಾಕ್ಷಿ, ನಿಂಬೆ, ಟೊಮೆಟೊಗಳಂತಹ ಆಮ್ಲೀಯ ಆಹಾರದೊಂದಿಗೆ ಪಪ್ಪಾಯಿಯನ್ನು ತಿನ್ನುವುದು ಹಾನಿಕಾರಕವಾಗಿದೆ. ಏಕೆಂದರೆ ಇದು ಎದೆಯುರಿ, ಆಸಿಡ್ ರಿಫ್ಲೆಕ್ಸ್ ಅಥವಾ ಇತರ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ.
ಮೊಟ್ಟೆ: ಪಪ್ಪಾಯಿ ಹಣ್ಣು ತಿಂದ ಬಳಿಕ ಅಪ್ಪಿತಪ್ಪಿಯೂ ಮೊಟ್ಟೆಯನ್ನು ತಿನ್ನಬೇಡಿ. ಈ ಎರಡು ಆಹಾರ ಪದಾರ್ಥವನ್ನು ಒಟ್ಟಿಗೆ ಸೇವಿಸುವುದರಿಂದ ಅಜೀರ್ಣ, ವಾಕರಿಕೆ, ಮಲಬದ್ಧತೆ ಮತ್ತು ವಾಂತಿ ಮುಂತಾದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.