ನಿಮ್ಮದು ಆಕರ್ಷಣೀಯ ವ್ಯಕ್ತಿತ್ವವಾಗಬೇಕೇ? ಇತರರನ್ನು ನಿಮ್ಮತ್ತ ಸೆಳೆಯಲು ಈ ಗುಣಗಳನ್ನು ಅಳವಡಿಸಿಕೊಳ್ಳಿ
ಆಕರ್ಷಣೀಯ ವ್ಯಕ್ತಿತ್ವಕ್ಕೆ ಶಾರೀರಿಕ ಸೌಂದರ್ಯ ಮಾತ್ರವಲ್ಲದೇ ನಿಮ್ಮ ನಡೆ ನುಡಿ ಕೂಡ ಮುಖ್ಯವಾಗುತ್ತದೆ. ಸಾಧಾರಣವಾದ ಸೌಂದರ್ಯವನ್ನು ಹೊಂದಿದ್ದರೂ, ಕೆಲವರ ನಡೆ ನುಡಿ, ಮಾತುಗಳೇ ಅಯಸ್ಕಾಂತದಂತೆ ಸೆಳೆಯುವಂತೆ ಮಾಡುತ್ತದೆ. ಅಂತಹ ವ್ಯಕ್ತಿತ್ವವನ್ನು ಹೊಂದಲು ನೀವು ಕೂಡ ಈ ಕೆಲವು ಗುಣಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.
ಕೆಲವರ ಸುತ್ತ ಜನರು ಇರುವೆಯಂತೆ ಸುತ್ತುವರಿಯುವುದನ್ನು ನೋಡಿರಬಹುದು. ಕೆಲ ವ್ಯಕ್ತಿಗಳು ಒಂದೇ ಒಂದು ಘಳಿಗೆಯಲ್ಲಿ ನಿಮ್ಮನ್ನು ಮರಳು ಮಾಡಿ ಬಿಡುವುದಿದೆ. ಸುತ್ತಲಿನ ಜನರನ್ನು ಸೆಳೆಯಲು ದೇಹ ಸೌಂದರ್ಯ ಮಾತ್ರವಲ್ಲದೇ ಅವರ ವ್ಯಕ್ತಿತ್ವ ಕೂಡ ಅಷ್ಟೇ ಮುಖ್ಯ. ಆಕರ್ಷಿಣೀಯ ವ್ಯಕ್ತಿಗಳು ಜೀವನದಲ್ಲಿ ಅಳವಡಿಸಿಕೊಂಡಿರುವ ಕೆಲವು ಗುಣಗಳೇ ಕಾರಣವಾಗುತ್ತದೆ. ಈ ಕೆಲವು ಗುಣಗಳನ್ನು ನೀವು ಕೂಡ ಮೈಗೂಡಿಸಿಕೊಂಡರೆ ಜನರು ಇರುವೆಯಂತೆ ನಿಮ್ಮ ಸುತ್ತ ಮುತ್ತಿಗೆ ಹಾಕುವುದು ಪಕ್ಕಾ.
ಜನರು ನಿಮ್ಮತ್ತ ಆಕರ್ಷಿತರಾಗಲು ಈ ಗುಣಗಳು ನಿಮ್ಮಲ್ಲಿ ಇರಲಿ:
*ತುಟಿಯ ತುಂಬಾ ನಗುವಿರಲಿ : ದುಬಾರಿ ಬೆಲೆಯ ಉಡುಗೆ ತೊಡುಗೆ, ಆಭರಣವನ್ನು ಧರಿಸಿದ್ದರೂ ಮುಖದ ತುಂಬಾ ನಗುವಿಲ್ಲದಿದ್ದರೆ ಯಾವ ವ್ಯಕ್ತಿಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ನಗುವಿಗಿಂತ ಬೆಲೆ ಬಾಳುವ ಆಭರಣ ಮತ್ತೊಂದಿಲ್ಲ. ಯಾವುದೇ ಆಭರಣವನ್ನು ಧರಿಸದೇನೇ ಮುಖದ ತುಂಬಾ ನಗುವಿನಿಂದಲೇ ಎಲ್ಲರನ್ನು ಆಕರ್ಷಿಸುವವರು ಇದ್ದಾರೆ. ಹೀಗಾಗಿ ನೀವು ಯಾವುದೇ ಸ್ಥಳಕ್ಕೆ ಹೋದರೂ ಖುಷಿ ಖುಷಿಯಾಗಿ ಎಲ್ಲರೊಂದಿಗೆ ಬೆರೆಯಿರಿ. ನೀವು ಎದುರಿಗೆ ಯಾವುದೇ ವ್ಯಕ್ತಿಯೂ ಎದುರಾದರೂ ಒಂದು ನಗೆ ಬೀರಿ ಮಾತನಾಡಿಸಿ.
* ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ : ನಿಮ್ಮ ಮೇಲೆ ನಿಮಗೆ ಇರುವ ವಿಶ್ವಾಸವು ನಿಮ್ಮನ್ನು ಮತ್ತಷ್ಟು ಆಕರ್ಷಕವನ್ನಾಗಿಸುತ್ತದೆ. ನಾಲ್ಕು ಜನರ ಜೊತೆಗೆ ಬೆರೆಯುವಾಗಲು ಆ ವ್ಯಕ್ತಿಗಳ ಮೇಲೆ ವಿಶ್ವಾಸವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಇದರಿಂದಾಗಿ ನಿಮ್ಮ ಬಳಿ ಜನರು ಹೆಚ್ಚು ಆಕರ್ಷಿತರಾಗಿ ಹೆಚ್ಚು ಹೆಚ್ಚು ಬೆರೆಯಲು ಸಾಧ್ಯವಾಗುತ್ತದೆ.
* ಹಾಸ್ಯಪ್ರಜ್ಞೆ ಇರಲಿ : ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುವುದೇ ಈ ಹಾಸ್ಯ. ನೀವು ಸದಾ ನಿಮ್ಮ ಸುತ್ತಲಿನವರನ್ನು ನಗಿಸುತ್ತಾ ಇದ್ದರೆ, ಸಹಜವಾಗಿಯೇ ಎಲ್ಲರೂ ನಿಮ್ಮೊಂದಿಗೆ ಜೊತೆಗೆ ಬೆರೆಯಲು ಇಷ್ಟ ಪಡುತ್ತಾರೆ. ಹಾಸ್ಯ ಚಟಾಕಿಯನ್ನು ಹಾರಿಸುವ ವ್ಯಕ್ತಿಗಳತ್ತ ಸಹಜವಾಗಿಯೇ ಆಕರ್ಷಣೆಗೆ ಒಳಗಾಗುತ್ತಾರೆ.
* ಉಡುಗೆ ತೊಡುಗೆ ಸ್ವಚ್ಛವಾಗಿರಲಿ : ನಿಮ್ಮ ವ್ಯಕ್ತಿತ್ವವನ್ನು ತೋರಿಸುವುದೇ ನಿಮ್ಮ ಉಡುಗೆ ತೊಡುಗೆ. ಹೀಗಾಗಿ ಸ್ವಚ್ಛವಾಗಿರುವ ಉಡುಗೆಯನ್ನು ಧರಿಸುವುದು ಒಳ್ಳೆಯದು. ಇಲ್ಲಿ ಬಣ್ಣಗಳ ಆಯ್ಕೆಯೂ ಬಹಳ ಮುಖ್ಯವಾಗುತ್ತದೆ. ಯಾವ ಸಂದರ್ಭಕ್ಕೆ ಯಾವ ರೀತಿಯ ಉಡುಗೆಯನ್ನು ಧರಿಸಬೇಕು ಎನ್ನುವ ಕನಿಷ್ಠ ಜ್ಞಾನವಿರಬೇಕು. ಧರಿಸುವ ಉಡುಗೆಯೂ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಹೀಗಾಗಿ ಆರಾಮಾದಾಯಕ ಎನಿಸುವ ಉಡುಗೆಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಧರಿಸುವ ಉಡುಗೆಗಳಿಂದ ವ್ಯಕ್ತಿತ್ವವನ್ನು ಆಕರ್ಷಣೀಯವಾಗುವಂತೆ ಮಾಡುತ್ತದೆ.
* ಪ್ರಾಮಾಣಿಕತೆಯಿರಲಿ: ಒಬ್ಬ ವ್ಯಕ್ತಿಯೂ ನಿಮ್ಮನ್ನು ನಂಬಬೇಕಾದರೆ ನಿಮ್ಮ ಜೊತೆಗೆ ಬೆರೆಯಬೇಕಾದರೆ ಪ್ರಾಮಾಣಿಕತೆ ಎನ್ನುವುದು ಬಹಳ ಮುಖ್ಯ. ಸಂಬಂಧವಿರಲಿ ಅಥವಾ ಅಭಿಪ್ರಾಯಗಳನ್ನು ಹೇಳುವಾಗ ಪ್ರಾಮಾಣಿಕರಾಗಿರಿ. ನಿಮ್ಮ ಪ್ರಾಮಾಣಿಕತೆಯೂ ನೀವು ಮಾತನಾಡುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಮನಸ್ಸಿನಲ್ಲಿ ಬೇರೊಂದು, ವ್ಯಕ್ತಿಗಳ ಮುಂದೆ ಇನ್ನೊಂದು ಮಾತುಗಳು ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ.
* ಮೌಖಿಕ ಸಂವಹನವಿರಲಿ : ಮಾತುಗಳು ಇತರರ ಮೇಲೆ ಪ್ರಭಾವ ಬೀರುವ ಕಾರಣ, ಮಾತನಾಡುವಾಗ ನಿಮ್ಮ ಸನ್ನೆಗಳು, ದೇಹದ ಭಾಷೆ ಹಾಗೂ ಮುಖದ ಭಾವನೆಗಳು ಮುಖ್ಯವಾಗುತ್ತವೆ. ನಿಮ್ಮ ಮಾತಿನ ವೈಖರಿಯು ನಿಮ್ಮ ಸುತ್ತಲಿನ ವ್ಯಕ್ತಿಗಳನ್ನು ಸೆಳೆಯಲು ಕಾರಣವಾಗಬಹುದು.
*ಇತರರಿಗೆ ಗೌರವ ನೀಡಿ: ಒಬ್ಬ ವ್ಯಕ್ತಿಗೆ ಗೌರವ ನೀಡುವುದು ನಿಮ್ಮ ವ್ಯಕ್ತಿತ್ವ ಹೇಗೆ ಎನ್ನುವುದನ್ನು ಬಿಂಬಿಸುತ್ತದೆ. ನಾಲ್ಕು ಜನಗಳ ಮಧ್ಯೆಯಿರುವಾಗ ಹಿರಿಯರನ್ನು ಗೌರವದಿಂದ ಕಾಣಿ. ನಿಮ್ಮ ನಡೆ ನುಡಿ ಹಾಗೂ ಮಾತಿನಲ್ಲಿಯೂ ಗೌರವವು ವ್ಯಕ್ತವಾಗಲಿ. ನಿಮ್ಮ ಗೌರವವನ್ನು ನಾಲ್ಕು ಜನರ ಮುಂದೆ ಕಾಪಾಡಿಕೊಳ್ಳಿ ಹಾಗೂ ಗೌರವ ನೀಡುವುದು ವ್ಯಕ್ತಿತ್ವವನ್ನು ಆಕರ್ಷಕವನ್ನಾಗಿಸುತ್ತದೆ.
ಇದನ್ನೂ ಓದಿ: ಗಣರಾಜ್ಯೋತ್ಸವದಂದು ಮನೆಯಲ್ಲಿ ತ್ರಿರಂಗ್ ಇಡ್ಲಿ ಮಾಡಿ, ಮಾಡುವ ವಿಧಾನ ಇಲ್ಲಿದೆ
* ಕರುಣೆ ಇರಲಿ: . ನಿಮ್ಮಲ್ಲಿ ಎಲ್ಲ ಉತ್ತಮ ಗುಣಗಳಿದ್ದೂ ಕರುಣೆ ಇಲ್ಲದಿದ್ದರೆ ನೀವು ಆಕರ್ಷಣೀಯ ವ್ಯಕ್ತಿತ್ವ ಹೊಂದಲು ಸಾಧ್ಯವಿಲ್ಲ. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸಿ, ಸಾಧ್ಯ ವಾದಷ್ಟು ಸಹಾಯ ಮಾಡಿ. ನೆರವಿನ ಹಸ್ತ ಚಾಚುವ ವ್ಯಕ್ತಿ ಎಲ್ಲರಿಗೂ ಸದಾ ಪ್ರಿಯನಾಗಿ ಆಕರ್ಷಕ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.
* ಉತ್ತಮ ಕೇಳುಗರಾಗಿರಿ : ನಿಮ್ಮ ವ್ಯಕ್ತಿತ್ವವು ಆಕರ್ಷಕವಾಗಿರಲು ಉತ್ತಮ ಮಾತು ಎಷ್ಟು ಮುಖ್ಯವೋ ಬೇರೆಯವರ ಮಾತುಗಳನ್ನು ಕೇಳುವುದು ಅಷ್ಟೇ ಮುಖ್ಯ. ಜೊತೆಗಿರುವ ವ್ಯಕ್ತಿಯ ಮಾತುಗಳನ್ನು ಕೇಳಿ ಅದಕ್ಕೆ ಪ್ರತಿಕ್ರಿಯೆ ನೀಡುವುದರಿಂದ ನಿಮ್ಮ ಮೇಲೆ ನಂಬಿಕೆಯ ಜೊತೆಗೆ ಒಳ್ಳೆಯ ಅಭಿಪ್ರಾಯವು ಬೆಳೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Thu, 25 January 24