White Shoes Cleaning Tips: ಬಿಳಿ ಶೂಗಳ ಕಲೆ ಹೋಗಲು ಇಲ್ಲಿದೆ ಸುಲಭ ಮಾರ್ಗಗಳು
ಬಿಳಿ ಬಣ್ಣದ ಬೂಟುಗಳನ್ನು ಧರಿಸಿದಾಗ ಎಷ್ಟು ಸುಂದರವಾಗಿ ಕಾಣುತ್ತದೆಯೋ, ಅದರಲ್ಲಿ ಕೊಳೆಯಾದಾಗಲೂ ಅಷ್ಟೇ ಕೆಟ್ಟದಾಗಿ ಕಾಣುತ್ತವೆ. ಅಲ್ಲದೆ ಬಿಳಿ ಬಣ್ಣದ ಶೂಗಳಲ್ಲಿ ಬಹಳ ಬೇಗನೇ ಕೊಳೆಯಾಗಿಬಿಡುತ್ತದೆ. ಮತ್ತು ಅವುಗಳನ್ನು ಸ್ವಚ್ಛಗೊಳಿಸುವುದು ತುಂಬಾನೇ ಕಷ್ಟ. ಅಂತಹ ಸಂದರ್ಭದಲ್ಲಿ ಈ ಕೆಲವು ವಿಧಾನದ ಮೂಲಕ ಬಿಳಿ ಬೂಟುಗಳ ಕಲೆಯನ್ನು ಹೋಗಲಾಡಿಸಿ, ಅದರ ಹಳೆಯ ಹೊಳಪನ್ನು ಮರಳಿ ಪಡೆಯಬಹುದು.
ಸ್ಟೈಲಿ ಶ್ ಉಡುಗೆಗಳಿಗೆ ಯುವಕರು ಹಾಗೂ ಯುವತಿಯರು ಬಿಳಿ ಬೂಟುಗಳನ್ನು ಧರಿಸಲು ಇಷ್ಟಪಡುತ್ತಾರೆ. ಏಕೆಂದರೆ ಇದು ಎಲ್ಲಾ ಉಡುಪುಗಳೊಂದಿಗೆ ಹೊಂದಿಕೆಯಾಗುತ್ತವೆ. ಆದ್ದರಿಂದಲೇ ಬಿಳಿ ಬೂಟುಗಳು ಫ್ಯಾಶನ್ ಲೋಕದಲ್ಲಿ ಸಾಕಷ್ಟು ಟ್ರೆಂಡಿಂಗ್ನಲ್ಲಿದೆ. ಬಿಳಿ ಬಣ್ಣದ ಬೂಟುಗಳನ್ನು ಧರಿಸಿದಾಗ ಎಷ್ಟು ಸುಂದರವಾಗಿ ಕಾಣುತ್ತದೆಯೋ, ಅದು ಕೊಳೆಯಾದಾಗಲೂ ಅಷ್ಟೇ ಕೆಟ್ಟದಾಗಿ ಕಾಣುತ್ತವೆ. ಇದು ಮಾತ್ರವಲ್ಲದೆ ಬಿಳಿ ಬಣ್ಣದ ಬೂಟುಗಳಲ್ಲಿನ ಕಲೆಗಳನ್ನು ಹೋಗಲಾಡಿಸುವುದು ತುಂಬಾನೇ ಕಷ್ಟ. ನೀವು ಕೂಡಾ ನಿಮ್ಮ ಬೂಟುಗಳನ್ನು ಸ್ವಚ್ಛಗೊಳಿಸುವ ಸರಳ ಮಾರ್ಗವನ್ನು ಹುಡುಕುತ್ತಿದ್ದೀರಾ? ಹಾಗಾದರೆ ಈ ಕೆಲವು ವಿಧಾನದ ಮೂಲಕ ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಿ ಅದರ ಹಳೆಯ ಹೊಳಪನ್ನು ಮರಳಿ ಪಡೆಯಿರಿ.
ಬಿಳಿ ಬೂಟುಗಳ ಕಲೆಗಳನ್ನು ಹೋಗಲಾಡಿಸುವ ಸುಲಭ ಮಾರ್ಗಗಳು:
ವಿನೆಗರ್ ಮತ್ತು ಅಡುಗೆ ಸೋಡಾ: ಅಡಿಗೆ ಸೋಡಾ ಮತ್ತು ವಿನೆಗರ್ ಈ ಎರಡೂ ವಸ್ತುಗಳು ಬೂಟುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇವೆರಡನ್ನು ಒಟ್ಟಿಗೆ ಬಳಸಿಕೊಂಡು ಬೂಟುಗಳನ್ನು ಸ್ವಚ್ಛಗೊಳಿಸುವುದರಿಂದ ಬೂಟುಗಳಲ್ಲಿನ ಕೆಟ್ಟ ವಾಸನೆ ಮತ್ತು ಅದರಲ್ಲಿನ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಬಹುದು. ಅದಕ್ಕಾಗಿ ನೀವು, ಒಂದು ಬೌಲ್ ನಲ್ಲಿ ಅರ್ಧ ಚಮಚ ವಿನೆಗರ್ ಮತ್ತು ಕಾಲು ಕಪ್ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ನೊರೆ ರುಪುಗೊಳ್ಳುವವರೆಗೆ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಮಿಶ್ರಣವನ್ನು ಬ್ರಶ್ ನ ಸಹಾಯದಿಂದ ಬೂಟುಗಳ ಮೇಲೆ ಅನ್ವಯಿಸಿ ಸ್ವಲ್ಪ ಸಮಯದವರೆಗೆ ಹಾಗೇನೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಬೂಟುಗಳ ಕಲೆ ಹೋಗುವುದು ಮಾತ್ರವಲ್ಲದೆ ಅದರ ಹೊಳಪನ್ನು ಕೂಡಾ ಮರಳಿ ಪಡೆಯಬಹುದು.
ಟೂತ್ಪೇಸ್ಟ್: ಟೂತ್ಪೇಸ್ಟ್ ಸಹಾಯದಿಂದ ನಾವು ಹಲ್ಲುಗಳನ್ನು ಸ್ವಚ್ಛಗೊಳಿಸುತ್ತೇವೆ. ಮಾತ್ರವಲ್ಲದೆ ಇದರಿಂದ ಬಿಳಿ ಶೂಗಳಲ್ಲಿನ ಕೊಳೆಗಳನ್ನು ಸಹ ತೊಡೆದುಹಾಕಬಹುದು. ಅದಕ್ಕಾಗಿ ನೀವು ಮೊದಲು ನಿಮ್ಮ ಬಿಳಿ ಬೂಟುಗಳನ್ನು ಒದ್ದೆ ಬಟ್ಟೆಯ ಸಹಾಯದಿಂದ ಸ್ವಚ್ಛಗೊಳಿಸಿ. ನಂತರ ಹಳೆಯ ಟೂತ್ ಬ್ರಶ್ಗೆ ಟೂತ್ಪೇಸ್ಟ್ ಹಾಕಿ ಅದನ್ನು ಬೂಟುಗಳ ಮೇಲೆ ಅನ್ವಯಿಸಿ. 10 ನಿಮಿಷಗಳ ಕಾಲ ಹಾಗೇನೇ ಬಿಟ್ಟು ನಂತರ ಅದೇ ಟೂತ್ ಬ್ರಶ್ ನಿಂದ ಶೂಗಳನ್ನು ಮೆಲ್ಲಗೆ ಉಜ್ಜಿಕೊಳ್ಳಿ. ಬಳಿಕ ನೀರಿನಿಂದ ತೊಳೆಯಿರಿ.
ನಿಂಬೆ ರಸ: ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಬೂಟುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಶೂಗಳ ವಾಸನೆಯನ್ನು ತೆಗೆದುಹಾಕುತ್ತದೆ. ಇದಕ್ಕಾಗಿ ನೀವು ಸ್ವಲ್ಪ ತಣ್ಣೀರು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಹಿಂಡಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ನಿಮ್ಮ ಬಿಳಿ ಶೂಗಳ ಮೇಲೆ ಅನ್ವಯಿಸಿ. 10 ನಿಮಿಷಗಳ ಬಳಿಕ ನಿಧಾನವಾಗಿ ಶೂಗಳನ್ನು ಉಜ್ಜಿ ನೀರಿನಿಂದ ತೊಳೆಯಿರಿ. ಮತ್ತು ಬಿಸಿಲಿನಲ್ಲಿ ಒಣಗಿಸಿ.
ಡಿಶ್ವಾಶಿಂಗ್ ಲಿಕ್ವಿಡ್ ಮತ್ತು ನೀರು: ಯಾವುದೇ ರೀತಿಯ ದ್ರವರೂಪಿ ಡಿಶ್ವಾಶರ್ಗಳು ನಿಮ್ಮ ಬಿಳಿ ಸ್ನೀಕರ್ಸ್ ಅಥವಾ ಬೂಟುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಚಮಚ ಡಿಶ್ವಾಶರ್ ನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಅದನ್ನು ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಈ ಮಿಶ್ರಣದಲ್ಲಿ ನಿಮ್ಮ ಬೂಟುಗಳನ್ನು ಅದ್ದಿ, ನಂತರ ಬ್ರಶ್ ನ ಸಹಾಯದಿಂದ ಶೂಗಳನ್ನು ಉಜ್ಜಿಕೊಂಡು ಅದರ ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಿ.
Published On - 2:40 pm, Mon, 11 September 23