
ಡೆನಿಮ್ ಜೀನ್ಸ್ (jeans) ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಇದು ಕಂಫರ್ಟ್ ಮಾತ್ರವಲ್ಲದೆ ಸ್ಟೈಲಿಶ್ ಲುಕ್ ಅನ್ನು ಸಹ ನೀಡುತ್ತದೆ. ಹಾಗಾಗಿ ಹೆಚ್ಚಿನವರು ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಆದರೆ ಡೆನಿಮ್ ಜೀನ್ಸ್‌ಗಳ ಬಣ್ಣ ಬಹುಬೇಗನೆ ಮಾಸಿ ಹೋಗಿ ಹಳೆಯದರಂತೆ ಕಾಣಿಸುತ್ತದೆ. ಈ ರೀತಿ ಡೆನಿಮ್ ಬಣ್ಣ ಮಸುಕಾಗಲು ಅವುಗಳ ಗುಣಮಟ್ಟ ಮಾತ್ರವಲ್ಲ, ಅವುಗಳನ್ನು ತೊಳೆಯುವ ವಿಧಾನವೂ ಕಾರಣವಾಗುತ್ತದೆ. ಜೀನ್ಸ್ ಮಸುಕಾಗದೆ ದೀರ್ಘಕಾಲ ಹೊಸದರಂತೆ ಕಾಣಲು ಸರಿಯಾದ ಆರೈಕೆ ಅತ್ಯಗತ್ಯ. ಸಣ್ಣ ತಪ್ಪು ಸಹ ಅವುಗಳ ಗುಣಮಟ್ಟವನ್ನು ಹಾಳುಮಾಡಬಹುದು. ಹಾಗಾಗಿ ಯಾವಾಗಲೂ ನಿಮ್ಮ ಜೀನ್ಸ್‌ಗಳನ್ನು ಈ ವಿಧಾನಗಳ ಮೂಲಕವೇ ತೊಳೆಯಲು ಪ್ರಯತ್ನಿಸಿ. ಇದರಿಂದ ಎಷ್ಟೇ ಬಾರಿ ಒಗೆದರೂ ಜೀನ್ಸ್ ಬಣ್ಣ ಮಸುಕಾಗುವುದಿಲ್ಲ.
ಯಾವಾಗಲೂ ಒಳಭಾಗದಿಂದ ತೊಳೆಯಿರಿ: ಡೆನಿಮ್‌ಗಳನ್ನು ಯಾವಾಗಲೂ ಒಳ ಭಾಗದಿಂದ ವಾಶ್ ಮಾಡಬೇಕು. ಇದು ಜೀನ್ಸ್‌ನ ಹೊರಭಾಗದ ಬಣ್ಣ ಮಸುಕಾಗದಂತೆ ಮತ್ತು ಸವೆಯದಂತೆ ತಡೆಯುತ್ತದೆ. ಹಾಗಾಗಿ ಯಾವಾಗಲೂ ಜೀನ್ಸ್‌ನ ಒಳ ಭಾಗವನ್ನು ಹೊರಗೆ ತೆಗೆದೇ ಒಗೆಯಿರಿ.
ತಣ್ಣೀರು ಬಳಸಿ: ಕೆಲವರು ಬಿಸಿ ನೀರಿನಿಂದ ಬಟ್ಟೆಗಳನ್ನು ಒಗೆಯುತ್ತಾರೆ. ಆದರೆ ಈ ವಿಧಾನ ಡೆನಿಮ್‌ಗಳಿಗೆ ಸೂಕ್ತವಲ್ಲ. ಜೀನ್ಸ್ ತೊಳೆಯುವಾಗ ಬಿಸಿನೀರನ್ನು ಎಂದಿಗೂ ಬಳಸಬಾರದು. ನೀವು ಯಾವಾಗಲೂ ತಣ್ಣನೆಯ ನೀರಿನಿಂದ ಅವುಗಳನ್ನು ಒಗೆಯಬಹುದು. ಬಿಸಿನೀರಿನಿಂದ ಜೀನ್ಸ್ ಒಗೆದರೆ ಅದರ ಬಣ್ಣ ಬಹುಬೇಗನೆ ಮಾಸುತ್ತದೆ.
ಹೆಚ್ಚು ಉಜ್ಜುವುದನ್ನು ತಪ್ಪಿಸಿ: ಜೀನ್ಸ್ ಅನ್ನು ಹೆಚ್ಚು ಉಜ್ಜಬಾರದು ಅಥವಾ ಹಿಂಡಬಾರದು, ಈ ರೀತಿ ಮಾಡುವುದರಿಂದ ಜೀನ್ಸ್ ಹಳೆಯದರಂತೆ ಕಾಣಿಸಲು ಪ್ರಾರಂಭಿಸುತ್ತದೆ. ಅಲ್ಲದೆ ಇದರ ಬಣ್ಣವು ಬಹು ಬೇಗನೆ ಮಾಸಲು ಕಾರಣವಾಗುತ್ತದೆ. ಹಾಗಾಗಿ ಡೆನಿಮ್‌ಗಳನ್ನು ಸೌಮ್ಯವಾಗಿ ವಾಶ್ ಮಾಡಬೇಕಾಗುತ್ತದೆ.
ಸೌಮ್ಯವಾದ ಡಿಟೆರ್ಜಂಟ್ ಬಳಸಿ: ಜೀನ್ಸ್ ಒಗೆಯಲು ಸರಿಯಾದ ಡಿಟೆರ್ಜಂಟ್ ಬಳಸುವುದು ಅತ್ಯಗತ್ಯ. ಹಾಗಾಗಿ ಕಠಿಣ ರಾಸಾಯನಿಕಗಳನ್ನು ಹೊಂದಿರುವ ಡಿಟರ್ಜೆಂಟ್‌ಗಳಿಂದ ಜೀನ್ಸ್ ಒಗೆಯಬೇಡಿ, ಏಕೆಂದರೆ ಇವು ಬಟ್ಟೆಗೆ ಹಾನಿ ಉಂಟು ಮಾಡುತ್ತವೆ. ಇದಲ್ಲದೆ ಕಲೆಗಳಿರುವ ಜಾಗಕ್ಕೆ ಮಾತ್ರ ಡಿಟರ್ಜೆಂಟ್ ಹಚ್ಚಿ. ಇಡೀ ಜೀನ್ಸ್ ಅನ್ನು ಡಿಟೆರ್ಜಂಟ್‌ನಿಂದ ತೊಳೆಯುವುದನ್ನು ತಪ್ಪಿಸಿ.
ಇದನ್ನೂ ಓದಿ: ಕಿಚನ್ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಈ ಸರಳ ಸಲಹೆಯನ್ನು ಅನುಸರಿಸಿ
ಒಣಗಿಸುವ ವಿಧಾನವೂ ಮುಖ್ಯ: ಜೀನ್ಸ್‌ಗಳನ್ನು ಸರಿಯಾಗಿ ಒಣಗಿಸುವುದು ಸಹ ಅಷ್ಟೇ ಮುಖ್ಯ. ಯಾವತ್ತೂ ಜೀನ್ಸ್ ಅನ್ನು ಸೂರ್ಯನ ನೇರ ಬೆಳಕಿನಡಿ ಒಣಗಿಸಬಾರದು. ಯಾವಾಗಲೂ ನೆರಳಿರುವ ಜಾಗದಲ್ಲಿ ಡೆನಿಮ್‌ಗಳನ್ನು ಒಣಗಿಸಿ. ಇದರಿಂದ ಡೆನಿಮ್ ಬಣ್ಣ ಮಾಸುವುದನ್ನು ತಡೆಯಬಹುದು.
ಫ್ಯಾಷನ್ ತಜ್ಞರ ಪ್ರಕಾರ, ಪ್ರತಿ ಬಳಕೆಯ ನಂತರ ಜೀನ್ಸ್ ಅನ್ನು ತೊಳೆಯುವುದು ಅನಿವಾರ್ಯವಲ್ಲ. ಪದೇ ಪದೇ ತೊಳೆಯುವುದರಿಂದ ಡೆನಿಮ್ ಬೇಗನೆ ಹಾಳಾಗಬಹುದು. ಜೀನ್ಸ್ ಅನ್ನು 4 ರಿಂದ 5 ಬಾರಿ ಧರಿಸಿದ ನಂತರ ತೊಳೆಯುವುದು ಉತ್ತಮ. ಅಲ್ಲದೆ, ಜೀನ್ಸ್ ಅನ್ನು ಧರಿಸಿದ ನಂತರ ಸ್ವಲ್ಪ ಸಮಯದವರೆಗೆ ಚೆನ್ನಾಗಿ ಗಾಳಿ ಬರುವ ಸ್ಥಳದಲ್ಲಿ ಇಡುವುದರಿಂದ ಅದರ ವಾಸನೆ ಹೋಗುತ್ತದೆ ಮತ್ತು ಪದೇ ಪದೇ ಒಗೆಯುವ ಅಗತ್ಯವೂ ಇರುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ