ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು. ಉನ್ನತ ಶ್ರೇಣಿಯನ್ನು ಪಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಓದುವ ಕ್ರಮ ಮುಖ್ಯವಾಗಿರುತ್ತದೆ. ಕೆಲವರು ಎಷ್ಟು ಓದಿದರೂ ತಲೆಗೇ ಹತ್ತುವುದಿಲ್ಲ ಎನ್ನುವುದನ್ನು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಏಕಾಗ್ರತೆಯ ಕೊರತೆ. ಮನಸ್ಸಿಟ್ಟು, ಒಂದೇ ಚಿತ್ತದಿಂದ ಓದಿದರೆ ಎಂತಹವರೂ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು. ಇನ್ನೇನು ಕೆಲವೇ ದಿನಗಳಲ್ಲಿ ಪಿಯುಸಿ, ಪದವಿ ತರಗತಿಗಳ ಪರೀಕ್ಷೆ ಆರಂಭವಾಗಲಿದೆ. ಬದುಕಿನ ಮಹತ್ವದ ಘಟ್ಟಗಳಲ್ಲಿ ಮಕ್ಕಳ ಮೇಲಿನ ಒತ್ತಡ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಹೀಗಾಗಿ ಕಷ್ಟಪಟ್ಟು ಓದುವ ಬದಲು ಕೆಲವು ವಿಧಾನಗಳನ್ನು ಅನುಸರಿಸಿಕೊಂಡು ಯುಕ್ತಿಯಿಂದ, ಏಕಾಗ್ರತೆಯಿಂದ ಓದಿದರೆ ಉತ್ತಮ. ಇದಕ್ಕಾಗಿಯೇ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತು ಟೈಮ್ಸ್ ನೌ ವರದಿ ಮಾಡಿದೆ. ಅದರ ಮಾಹಿತಿ ಇಲ್ಲಿದೆ ನೋಡಿ,
ಆಗಾಗ ವಿರಾಮ ನೀಡಿ:
ದೀರ್ಘಕಾಲ ಕೊಂಚವೂ ವಿಶ್ರಾಂತಿ ನೀಡದೆ ಗಂಟೆಗಳ ಕಾಲ ಅಧ್ಯಯನ ಮಾಡುವುದು ಯಾವಾಗಲೂ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿರುವುದಿಲ್ಲ. ಇದು ಪ್ರೇರಣೆ ಮತ್ತು ಏಕಾಗ್ರತೆಗೆ ಹಾನಿಯನ್ನುಂಟುಮಾಡುತ್ತದೆ. ನೆನಪಿನ ಶಕ್ತಿಯೂ ಕುಂದುತ್ತದೆ. ಹೀಗಾಗಿ ಪ್ರತೀ ಒಂದು ಗಂಟೆಗೊಮ್ಮೆ ಎದ್ದು ಒಂದೆರಡು ಹೆಜ್ಜೆ ನಡೆದಾಡಿ.
ನಿಮ್ಮ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳಿ:
ಅಧ್ಯಯನ ಮಾಡುವಾಗ, ನಿಮ್ಮ ಪರೀಕ್ಷಕರು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನೀವೇ ಪರಿಗಣಿಸಿ. ನಿಮಗಿಂತ ಉತ್ತಮವಾದ ವಿಮರ್ಶೆ ನಿಮ್ಮ ಬಗ್ಗೆ ಇರಲಾರದು. ರಸಪ್ರಶ್ನೆಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಕಟ್ಟುನಿಟ್ಟಾದ ಮೌಲ್ಯಮಾಪನ ವಿಧಾನಗಳನ್ನು ಕೈಗೊಳ್ಳಿ.
ಮೊಬೈಲ್ಗಳನ್ನು ಬದಿಗಿಡಿ ಅಥವಾ ಸೈಲೆಂಟ್ ಮೂಡ್ನಲ್ಲಿಡಿ:
ಪದೇ ಪದೇ ಬರುವ ಮೆಸೇಜ್ಗಳ ಸದ್ದು, ಆಗಾಗ ಬರುವ ಫೋನ್ಕಾಲ್ಗಳು ನಿಮ್ಮ ಏಕಾಗ್ರತೆಗೆ ಭಂಗ ತರುತ್ತದೆ. ಹೀಗಾಗಿ ಮೊಬೈಲ್ ಅಥವಾ ಇನ್ನಿತರ ಗ್ಯಾಜೆಟ್ಸ್ಗಳನ್ನು ಓದಿನ ಸಮಸಯದಲ್ಲಿ ದೂರವಿಡಿ. ಇಂಟರ್ನೆಟ್ ಸಹಾಯಾಬೇಕಾದಾಗ ಸಾಮಾಜಿಕ ಜಾಲತಾಣಗಳಿಗೆ ಇಂಟರ್ನೆಟ್ ಅನ್ನು ಸೆಟ್ಟಿಂಗಸ್ ಮೂಲಕ ನಿರ್ಬಂಧಿಸಿ.
ದಿನಚರಿಯನ್ನು ಹಾಕಿಕೊಳ್ಳಿ:
ನಿಮಗೆ ಮತ್ತು ನಿಮ್ಮ ದೇಹಕ್ಕೆ ಯಾವ ರೀತಿಯ ದಿನಚರಿ ಉತ್ತಮ ಎನ್ನುವುದನ್ನು ಕಂಡುಕೊಳ್ಳಿ. ಅಧ್ಯಯನದ ವಿಷಯಕ್ಕೆ ಬಂದಾಗ, ವೈಯಕ್ತಿಕ ಸೌಕರ್ಯ, ಮನಸ್ಸಿನ ಶಾಂತಿ ಮತ್ತು ಅನುಕೂಲವು ಮುಖ್ಯವಾಗಿದೆ. ಆದ್ದರಿಂದ, ನಿಮಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನೀವು ಭಾವಿಸುವ ತಂತ್ರಗಳನ್ನು ಗಮನಿಸಿ, ಪ್ರಯೋಗಿಸಿ ಮತ್ತು ಕಾರ್ಯಗತಗೊಳಿಸಿ.
ಸಾಕಷ್ಟು ವಿಶ್ರಾಂತಿ ಪಡೆಯಿರಿ:
ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ ಜತೆಗೆ ಸಕ್ರಿಯರಾಗಿರಿ. ಕಟ್ಟುನಿಟ್ಟಾದ ವೇಳಾಪಟ್ಟಿಯ ಹೊರತಾಗಿಯೂ, ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ, ಕೇವಲ 5-15 ನಿಮಿಷಗಳ ಕಾಲ ವ್ಯಾಯಾಮ ಮಾಡಿ ಮತ್ತು ಕನಿಷ್ಠ 6-8 ಗಂಟೆಗಳ ನಿರಂತರ ನಿದ್ರೆ ಪಡೆಯಿರಿ.
ಇದನ್ನೂ ಓದಿ:
Published On - 4:47 pm, Wed, 16 March 22