
ಗಣೇಶ ಚತುರ್ಥಿ (Ganesh Chaturthi) ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇದೀಗ ಎಲ್ಲರೂ ಹಬ್ಬದ ತಯಾರಿಯಲ್ಲಿ ತೊಡಗಿಕೊಂಡಿದ್ದು, ಡೊಳ್ಳು ಹೊಟ್ಟೆ ಗಣಪನನ್ನು ಮನೆಗೆ ಬರ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಗಣೇಶ ಚತುರ್ಥಿಯನ್ನು ಈ ಬಾರಿ ಆಗಸ್ಟ್ 27 ರಂದು ಬಹಳ ವಿಜೃಂಭಣೆಯಿಂದ ಮತ್ತು ಭಕ್ತಿಯಿಂದ ಆಚರಿಸಲಾಗುತ್ತಿದೆ. ವಿಘ್ನ ನಿವಾರಕನನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಲಭಿಸುತ್ತದೆ ಹಾಗೂ ಎಲ್ಲಾ ವಿಘ್ನಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಗಣೇಶನಿಗೆ ಇಷ್ಟವಾದ ಮೋದಕ ಸೇರಿದಂತೆ ವಿವಿಧ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಇಡಲಾಗುತ್ತದೆ. ಗಣೇಶನಿಗೆ ಗರಿಕೆ (Durva grass) ಪ್ರಿಯ. ಹೀಗಾಗಿ ಗಣಪನ ಪೂಜೆಗೆ ಗರಿಕೆ ಇರಲೇಬೇಕು. ಹಾಗಾದ್ರೆ ವಿಘ್ನ ನಿವಾರಕನಿಗೆ ಎಷ್ಟು ಗರಿಕೆ ಅರ್ಪಿಸಿದರೆ ಒಳ್ಳೆಯದು, ಬೆಸ ಸಂಖ್ಯೆಯಲ್ಲೇ ಗರಿಕೆ ಅರ್ಪಿಸಬೇಕು ಎನ್ನುವುದು ಯಾಕೆ? ಈ ಕುರಿತಾದ ಮಾಹಿತಿ ಇಲ್ಲಿದೆ.
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು?
ಗಣೇಶನಿಗೆ ಗರಿಕೆ ಅರ್ಪಿಸಿದರೆ ಸಾಕು ಸಂಪನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಗಣೇಶ ಗರಿಕೆಯನ್ನು ಅರ್ಪಿಸುವಾಗ ಹಸಿರಾದ ಎಳೆಯ ಗರಿಕೆಯನ್ನು ಮಾತ್ರ ಅರ್ಪಿಸಿ. ಖುಷಿ ಬಂದಂತೆ ಗರಿಕೆಯನ್ನು ಅರ್ಪಿಸುವಂತಿಲ್ಲ. ಗಣೇಶನಿಗೆ 21 ಗರಿಕೆಗಳನ್ನು ಅರ್ಪಿಸುವುದು ಮಂಗಳಕರ ಎಂದು ಹೇಳಲಾಗಿದೆ. ಈ ಗರಿಕೆಯ ಪ್ರತಿಯೊಂದು ಕಡ್ಡಿಯಲ್ಲಿ ಮೂರು ಅಥವಾ ಐದು ಎಸಳು ಇರಬೇಕು. ಇಪ್ಪತ್ತೊಂದು ಕಟ್ಟುಗಳನ್ನು ತಯಾರಿಸಿ, ಗರಿಕೆಯ ಬುಡಕ್ಕೆ ಗಂಧವನ್ನು ಲೇಪಿಸಿ ಅರ್ಪಣೆ ಮಾಡಿದರೆ ಒಳ್ಳೆಯದಂತೆ. ಇನ್ನು ಗಣೇಶನಿಗೆ 21 ಗರಿಕೆ ಅರ್ಪಣೆ ಮಾಡಿದ್ರೆ ವಿಘ್ನಗಳು ದೂರವಾಗುತ್ತದೆ, ಅದೃಷ್ಟವು ಒಲಿದು ಬರುತ್ತದೆ ಎನ್ನುವ ನಂಬಿಕೆಯೂ ಇದೆ.
ಇದನ್ನೂ ಓದಿ: Ganesh Chaturthi 2025: ಈ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಬೇಡಿ, ಯಾಕೆ ಗೊತ್ತಾ? ಇಲ್ಲಿದೆ ನೋಡಿ ಗಜಾನನ ಭಟ್ ಸಲಹೆ
ಬೆಸ ಸಂಖ್ಯೆಯಲ್ಲೇ ಗರಿಕೆ ಅರ್ಪಿಸುವುದರ ಹಿಂದಿದೆ ಈ ಕಾರಣ
ಗಜಾನನ ಗರಿಕೆ ಪ್ರಿಯ. ಹೀಗಾಗಿ ಡೊಳ್ಳು ಹೊಟ್ಟೆ ಗಣಪನಿಗೆ ಸಾಮಾನ್ಯವಾಗಿ ಬೆಸ ಸಂಖ್ಯೆಯಲ್ಲಿ 3, 5, 7 ಅಥವಾ 21ರಂತೆ ಅರ್ಪಿಸಬೇಕು ಎನ್ನಲಾಗುತ್ತದೆ. ಹೆಚ್ಚಿನವರು 21 ಗರಿಕೆಯನ್ನು ಅರ್ಪಿಸುತ್ತಾರೆ. ಇದರಿಂದ ಅದೃಷ್ಟವು ಒಲಿಯುತ್ತದೆ. ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ ಸಂತೋಷ, ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ. ಬೆಸ ಸಂಖ್ಯೆಯೂ ಮಂಗಳಕರವಾದದ್ದು. ಹೀಗಾಗಿ ಗೌರಿ ಪುತ್ರನಿಗೆ ನೈವೇದ್ಯದಿಂದ ಹಿಡಿದು ಗರಿಕೆ ಹೀಗೆ ಏನೇ ಅರ್ಪಿಸುವುದಾದರೂ ಬೆಸ ಸಂಖ್ಯೆಯನ್ನು ಅರ್ಪಿಸಲಾಗುತ್ತದೆ. ಇನ್ನು ಈ ಗಣೇಶನ ಮುಖ ಬಿಟ್ಟು ದೇಹದ ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು ಎನ್ನಲಾಗಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Sun, 24 August 25