Ganesh Chaturthi 2025: ಈ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಬೇಡಿ, ಯಾಕೆ ಗೊತ್ತಾ? ಇಲ್ಲಿದೆ ನೋಡಿ ಗಜಾನನ ಭಟ್ ಸಲಹೆ
ಚೌತಿ ಹಬ್ಬ ಬಂದರೆ ಎಲ್ಲರಿಗೂ ಸಂಭ್ರಮ. ಪಂಚಾಂಗದ ಪ್ರಕಾರ, ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಕೆಲವರಿಗೆ ಈ ದಿನದಂದು ದೇವರಿಗೆ ಯಾವ ರೀತಿಯ ನೈವೇದ್ಯಗಳನ್ನು ಮಾಡಬೇಕು, ಯಾವುದನ್ನು ಮಾಡಬಾರದು? ಎಂಬುದರ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅದರಲ್ಲಿಯೂ ಗಣಪನಿಗೆ ಪ್ರಿಯವಾದ ಕೆಲವು ಭಕ್ಷ್ಯಗಳನ್ನು ಮಾಡುವುದರಿಂದ ಶ್ರೇಯಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಈ ವಿಷಯದ ಕುರಿತು ಟಿವಿ9 ವೇ। ಗಜಾನನ ಭಟ್ ಆರೊಳ್ಳಿ ಅವರೊಂದಿಗೆ ಮಾತನಾಡಿದ್ದು ಅವರು ನೀಡಿರುವ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮಿಯರಿಗೆ ಚೌತಿ ಹಬ್ಬ (Ganesh Chaturthi) ಬಹಳ ವಿಶೇಷ. ಸಾಮಾನ್ಯವಾಗಿ ಗಣಪನನ್ನು ಎಲ್ಲರೂ ಕೂಡ ಪೂಜಿಸಿ, ಆರಾಧಿಸುತ್ತಾರೆ. ಪಂಚಾಂಗದ ಪ್ರಕಾರ, ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿ ಬುಧವಾರ, ಆಗಸ್ಟ್ 27 ರಂದು ಬಂದಿದ್ದು, ಬಹಳ ವಿಜೃಂಭಣೆಯಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಆದರೆ ಕೆಲವರಿಗೆ ಈ ದಿನದಂದು ದೇವರಿಗೆ ಯಾವ ರೀತಿಯ ನೈವೇದ್ಯಗಳನ್ನು ಮಾಡಬೇಕು, ಯಾವುದನ್ನು ಮಾಡಬಾರದು? ಯಾವ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ ಎಂಬುದರ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಅಂತಹ ಗೊಂದಲ ಪರಿಹಾರಕ್ಕಾಗಿಯೇ ಟಿವಿ9 ವೇ। ಗಜಾನನ ಭಟ್ ಆರೊಳ್ಳಿ (Gajanana Bhat) ಅವರೊಂದಿಗೆ ಮಾತನಾಡಿದ್ದು ಅವರು ನೀಡಿರುವ ಮಾಹಿತಿ ಇಲ್ಲಿದೆ.
ಎಷ್ಟು ಬಗೆಯ ಖಾದ್ಯಗಳನ್ನು ಮಾಡಬೇಕು?
ಪ್ರಥಮ ಪೂಜಿತ ಗಣಪನ ಆರಾಧನೆಯನ್ನು ಪ್ರತಿಯೊಬ್ಬರೂ ಕೂಡ ಮಾಡಬೇಕು. ವಿಘ್ನನಗಳನ್ನು ದೂರ ಮಾಡುವವನಾದ್ದರಿಂದ ಮೊದಲ ಪೂಜೆ ಅವನಿಗೆ ಸಲ್ಲಬೇಕಾಗುತ್ತದೆ. ಚೌತಿ ದಿನ ಶುಭ್ರವಾಗಿ ಬಗೆ ಬಗೆಯ ಖಾದ್ಯಗಳನ್ನು ಮಾಡಿ ಪೂಜೆ ಮಾಡಬಹುದು ಎಂದು ಗಜಾನನ ಭಟ್ ಹೇಳುತ್ತಾರೆ. ಮಾತ್ರವಲ್ಲ ಈ ದಿನ 21 ಬಗೆಯ ಖಾದ್ಯಗಳನ್ನು ಮಾಡಿ ನೈವೇದ್ಯ ಮಾಡಬೇಕು. ಆದರೆ ಈ ದಿನ ನೀವು ಮಾಡಿದಂತಹ ಪದಾರ್ಥಗಳನ್ನು ಕೂಡ ನೈವೇದ್ಯ ಮಾಡಬಹುದು. ಅದು ಈ ದಿನದ ವಿಶೇಷ, ಬೇರೆ ಹಬ್ಬದ ದಿನಗಳಲ್ಲಿ ಕೇವಲ ಪಾಯಸ, ಕಡುಬು. ಉಂಡೆ ಹೀಗೆ ಸಿಹಿ ಭಕ್ಷ್ಯಗಳನ್ನು ಹೆಚ್ಚಾಗಿ ದೇವರ ಮುಂದೆ ಇಡಲಾಗುತ್ತದೆ. ಆದರೆ ಗಣಪನ ಹಬ್ಬದ ದಿನ ಅವನಿಗೆ ನೀವು ಯಾವುದೇ ರೀತಿಯ ಅಡುಗೆ ಮಾಡಿದರೂ ಅದನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ಸೇವನೆ ಮಾಡಬಹುದು. ಆದರೆ ಕನಿಷ್ಠ 21 ಬಗೆಯ ಖಾದ್ಯಗಳನ್ನಾದರೂ ದೇವರಿಗೆ ಅರ್ಪಿಸಬೇಕು ಎಂದು ಅವರು ಹೇಳುತ್ತಾರೆ.
ಗಜಾನನ ಭಟ್ ಅವರು ಹೇಳುವ ಪ್ರಕಾರ, ಈ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ತಿನ್ನಬಾರದು. ಈ ಆಹಾರಗಳು ಮನಸ್ಸನ್ನು ಚಂಚಲಗೊಳಿಸುವುದರಿಂದ ಏಕಾಗ್ರತೆ ಹಾಳಾಗುತ್ತದೆ. ಯಾವುದೇ ಕೆಲಸದಲ್ಲಿಯೂ ಶ್ರದ್ದೆ ಇರುವುದಿಲ್ಲ. ಜೊತೆಗೆ ಮಾಂಸಾಹಾರಗಳನ್ನು ಸೇವನೆ ಮಾಡಬಾರದು. ಇದರ ಹೊರತಾಗಿ ಯಾವುದೇ ರೀತಿಯ ಸೊಪ್ಪು, ತರಕಾರಿಗಳ ಸೇವನೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮದಲ್ಲಿ ಗಂಡ ಬದುಕಿರುವಾಗ ಕರಿಮಣಿ ತೆಗೆದಿಡುವುದಕ್ಕೆ ಅವಕಾಶವಿದೆಯೇ? ಮಾಂಗಲ್ಯ ಬದಲಾವಣೆ ಯಾವಾಗ?
ಗಣಪನಿಗೆ ಯಾವ ರೀತಿಯ ಆಹಾರ ಬಹಳ ಪ್ರಿಯ?
ಸಾಮಾನ್ಯವಾಗಿ ಗಣೇಶನಿಗೆ ಮೋದಕ, ಕಡುಬು ಇನ್ನು ಪಂಚಕಜ್ಜಾಯಗಳೆಂದರೆ ಬಹಳ ಪ್ರೀತಿ. ಹಾಗಾಗಿ ಚೌತಿ ಹಬ್ಬದ ದಿನ ಇವುಗಳನ್ನು ತಪ್ಪದೆ ಮಾಡುತ್ತಾರೆ. ಇದರ ಜೊತೆಗೆ ಭಕ್ತರು ತಮ್ಮ ಶಕ್ತಿಯನುಸಾರ ಯಾವ ರೀತಿಯ ಖಾದ್ಯಗಳನ್ನು ಮಾಡಲು ಸಾಧ್ಯವೋ ಅವುಗಳನ್ನು ಮಾಡಿ ಗಣಪನಿಗೆ ಭಕ್ತಿಯಿಂದ ನೈವೇದ್ಯ ಮಾಡಿ ಅದನ್ನು ಪ್ರಸಾದವಾಗಿ ಸೇವನೆ ಮಾಡಬಹುದು. ಕೆಲವು ಭಾಗದಲ್ಲಿ ಈ ದಿನ ಕಡುಬು ಇನ್ನು ಪಂಚಕಜ್ಜಾಯದ ಜೊತೆಗೆ ಕರ್ಜಿಕಾಯಿ, ಹೆಸರುಕಾಳು ಉಸುಳಿ, ಲಡ್ಡು, ಚಕ್ಕಲಿ, ಕೋಡುಬಳೆ ಹೀಗೆ ವಿಧವಿಧವಾದಂತಹ ತಿನಿಸುಗಳನ್ನು ಗಣಪನಿಗೆ ಇಟ್ಟು ಪೂಜೆ ಮಾಡುತ್ತಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




