Hair Care Tips: ಕೂದಲಿನ ಸಮಸ್ಯೆಗೆ ಈ ಎಣ್ಣೆಯಲ್ಲಿದೆ ಪರಿಹಾರ, ಮನೆಯಲ್ಲೇ ಹೀಗೆ ಎಣ್ಣೆ ತಯಾರಿಸಿ
ಇಂದಿನ ಬಿಡುವಿಲ್ಲದ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಸೇರಿದಂತೆ ತ್ವಚೆ ಹಾಗೂ ಕೂದಲ ಅಂದವು ಹಾಳಾಗುತ್ತಿದೆ. ಹೀಗದಾಗ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನೇ ತ್ವಚೆ ಹಾಗೂ ಆರೈಕೆಗೆ ಬಳಸುತ್ತಾರೆ. ಆದರೆ ಮನೆಯಲ್ಲೇ ಈರುಳ್ಳಿ ಹಾಗೂ ಮೆಂತ್ಯದಿಂದ ಎಣ್ಣೆ ತಯಾರಿಸಿ ಕೂದಲಿಸಿ ಹಚ್ಚುವುದು ಪ್ರಯೋಜನಕಾರಿಯಾಗಿದೆ. ಈ ಎರಡು ಪದಾರ್ಥ ಗಳು ಕೂದಲಿನ ಕಿರುಚೀಲವನ್ನು ಫೋಷಿಸುವುದರೊಂದಿಗೆ ಕೂದಲು ಉದುರುವುದನ್ನು ತಡೆಯುತ್ತದೆ. ಕೂದಲು ಸೊಂಪಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ಮನೆಯಲ್ಲೇ ಸುಲಭವಾಗಿ ಈರುಳ್ಳಿ ಹಾಗೂ ಮೆಂತ್ಯ ಬೀಜ ಸೇರಿಸಿ ಎಣ್ಣೆಯನ್ನು ತಯಾರಿಸುವುದು ಹೇಗೆ? ಎನ್ನುವ ಮಾಹಿತಿ ಇಲ್ಲಿದೆ.

ತಲೆ ತುಂಬಾ ಕೂದಲು ಇದ್ದರೇನೇ ನೋಡುವುದಕ್ಕೆ ಚಂದ. ಅನೇಕರಲ್ಲಿ ಕೂದಲು ಉದುರುವುದು, ಬಿಳಿ ಕೂದಲಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುವುದೇ ಹೆಚ್ಚು. ಆದರೆ ಮನೆಯಲ್ಲೇ ಈರುಳ್ಳಿ ಹಾಗೂ ಮೆಂತ್ಯ ಬೀಜ ಸೇರಿಸಿ ತಯಾರಿಸುವ ಎಣ್ಣೆಯೂ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗಿದೆ. ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಬಳಸಿ ತಯಾರಿಸಿ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳೆವಣಿಗೆಗೆ ನೈಸರ್ಗಿಕವಾಗಿ ಪರಿಹಾರ ಸಿಗುತ್ತದೆ. ಕೂದಲಿನ ಆರೈಕೆಗೆ ಮನೆಯಲ್ಲೇ ಎಣ್ಣೆ ತಯಾರಿಸುವ ಸರಳ ವಿಧಾನ ಇಲ್ಲಿದೆ.
ಎಣ್ಣೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
* ಒಂದೆರಡು ಮಧ್ಯಮ ಗಾತ್ರದ ಈರುಳ್ಳಿ
* ಎರಡು ಚಮಚ ಮೆಂತ್ಯ
* 1/2 ಕಪ್ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ
ಎಣ್ಣೆ ತಯಾರಿಸುವ ವಿಧಾನ
* ಈರುಳ್ಳಿ ರಸವನ್ನು ತಯಾರಿಸಿ : ಮೊದಲಿಗೆ ಈರುಳ್ಳಿಯಿಂದ ರಸವನ್ನು ತಯಾರಿಸಿಕೊಳ್ಳಿ. ಒಂದು ದೊಡ್ಡ ಈರುಳ್ಳಿ ಅಥವಾ ಎರಡು ಮಧ್ಯಮ ಗಾತ್ರದ ಈರುಳ್ಳಿಯನ್ನು ಸಿಪ್ಪೆ ಸುಲಿದು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇದನ್ನು ನುಣ್ಣಗೆ ರುಬ್ಬಿ ರಸ ತೆಗೆದು ಸೋಸಿ ಇಟ್ಟುಕೊಳ್ಳಿ.
* ಮೆಂತ್ಯ ಬೀಜದ ಪೇಸ್ಟ್ ತಯಾರಿಸಿ : ಮೆಂತ್ಯ ಬೀಜದ ಪೇಸ್ಟ್ ತಯಾರಿಸಲು 2 ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ಹೀಗೆ ನೆನೆಸುವುದರಿಂದ ಬೀಜಗಳು ಮೃದುವಾಗುತ್ತದೆ. ಈ ಮೆಂತ್ಯ ಬೀಜಗಳನ್ನು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಈ ಪೇಸ್ಟ್ ತಯಾರಿಸಲು ರುಬ್ಬುವಾಗ ಸ್ವಲ್ಪ ನೀರು ಸೇರಿಸಿಕೊಳ್ಳಿ.
* ಎಣ್ಣೆಯನ್ನು ಬಿಸಿ ಮಾಡಿ : ನಿಮ್ಮ ಕೂದಲಿನ ಸರಿ ಹೊಂದುವ ಆಲಿವ್ ಅಥವಾ ತೆಂಗಿನೆಣ್ಣೆ ಬಳಸಬಹುದು. ಒಂದು ಸಣ್ಣ ಬಾಣಲೆಗೆ ಅರ್ಧ ಕಪ್ ತೆಂಗಿನ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ರುಬ್ಬಿದ ಮೆಂತ್ಯ ಪೇಸ್ಟ್ ಎಣ್ಣೆಗೆ ಸೇರಿಸಿಕೊಳ್ಳಿ. ಮಧ್ಯಮ ಉರಿಯಲ್ಲಿ ಹತ್ತು ನಿಮಿಷಗಳ ಕಾಲ ಕುದಿಯಲು ಬಿಡಿ. ಆಗಾಗ ಕೈಯಾಡಿಸುತ್ತ ಇರಿ. ಎಣ್ಣೆ ಮತ್ತು ಮೆಂತ್ಯ ಮಿಶ್ರಣ ಕುದಿದ ಬಳಿಕ ಈರುಳ್ಳಿ ರಸವನ್ನು ಎಣ್ಣೆಗೆ ಸೇರಿಸಿ ಮತ್ತೆ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಕುದಿಸಿಕೊಳ್ಳಿ. ತಣ್ಣಗಾದ ಬಳಿಕ ಗಾಜಿನ ಬಾಟಲಿಗೆ ಎಣ್ಣೆಯನ್ನು ಸೋಸಿ ಶೇಖರಿಸಿಡಿ.
ಕೂದಲಿಗೆ ಎಣ್ಣೆಯನ್ನು ಹೀಗೆ ಬಳಸಿ
* ನೆತ್ತಿಯ ಮಸಾಜ್ : ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಬೆರಳುಗಳ ತುದಿಯಿಂದ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಐದು ಹತ್ತು ನಿಮಿಷಗಳ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಹೆಚ್ಚಿಸಿ, ಕೂದಲಿನ ಬೆಳವಣಿಗೆಗೆ ಉತ್ತೇಜಿಸುತ್ತದೆ.
* ಎಣ್ಣೆ ಹಚ್ಚಿ ರಾತ್ರಿಯಿಡಿ ಬಿಡಿ : ಕೂದಲಿಗೆ ಈ ಎಣ್ಣೆಯನ್ನು ಹಚ್ಚಿ ರಾತ್ರಿಯಿಡಿ ಬಿಡಿ. ತಲೆ ದಿಂಬಿಗೆ ಎಣ್ಣೆ ಕಲೆಯಾಗದಂತೆ ತಡೆಯಲು ಕೂದಲಿಗೆ ಟವೆಲ್ ನಿಂದ ಸುತ್ತಿಕೊಳ್ಳಿ. ಬೆಳಗ್ಗೆ ಶ್ಯಾಂಪೂವಿನಿಂದ ತೊಳೆಯಿರಿ.
* ವಾರಕ್ಕೆ ಎರಡು ಮೂರು ಬಾರಿ ಎಣ್ಣೆ ಹಚ್ಚಿ : ಕೂದಲು ಸೊಂಪಾಗಿ ಬೆಳೆಯಲು ವಾರಕ್ಕೆ ಎರಡು ಮೂರು ಬಾರಿ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳಿ. ಇದು ನೆತ್ತಿಯನ್ನು ಫೋಷಿಸಿ ಕೂದಲ ಬೆಳೆವಣಿಗೆಯನ್ನು ಉತ್ತೇಜಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ದಿನನಿತ್ಯ ಬಳಸುವ ಕಡಲೆಹಿಟ್ಟು ಅಸಲಿಯೇ ನಕಲಿಯೇ? ಮನೆಯಲ್ಲಿ ಹೀಗೆ ಪತ್ತೆ ಹಚ್ಚಿ
ಕೂದಲಿನ ಬೆಳೆವಣಿಗೆಗೆ ಈರುಳ್ಳಿ ಮತ್ತು ಮೆಂತ್ಯ ಬೀಜದಿಂದ ತಯಾರಿಸಿದ ಎಣ್ಣೆಯ ಪ್ರಯೋಜನಗಳು
* ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ಈರುಳ್ಳಿ ರಸ ಮತ್ತು ಮೆಂತ್ಯ ಬೀಜಗಳು ಕೂದಲಿನ ಕಿರುಚೀಲಗಳನ್ನು ಪೋಷಿಸುವ ಮೂಲಕ ನೆತ್ತಿಗೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಹಾಗೂ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
* ಕೂದಲು ಉದುರುವಿಕೆಯನ್ನು ತಡೆಯುತ್ತದೆ: ಈರುಳ್ಳಿಯಲ್ಲಿರುವ ಸಲ್ಫರ್ ಕೂದಲನ್ನು ಬಲಪಡಿಸುತ್ತದೆ. ಕೂದಲು ಸೀಳಾಗುವಿಕೆಯನ್ನು ಕಡಿಮೆ ಮಾಡುತ್ತದೆ. ಈ ಮೆಂತ್ಯ ಬೀಜವು ಪ್ರೋಟೀನ್ ನಿಂದ ಸಮೃದ್ಧವಾಗಿದ್ದು, ಇದು ಕೂದಲು ತೆಳುವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
* ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ: ಈರುಳ್ಳಿ ಹಾಗೂ ಮೆಂತ್ಯ ಬೀಜದಲ್ಲಿ ಆಂಟಿಮೈಕ್ರೊಬಿಯಲ್ ಗುಣಗಳಿದ್ದು, ಇದು ತಲೆಹೊಟ್ಟು ಮತ್ತು ನೆತ್ತಿಯ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಕೂದಲಿನ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ.
* ಹೊಳಪು ಮತ್ತು ಮೃದುತ್ವವನ್ನು ನೀಡುತ್ತದೆ: ಈರುಳ್ಳಿ ಹಾಗೂ ಮೆಂತ್ಯ ಎಣ್ಣೆಯು ನೆತ್ತಿ ಮತ್ತು ಕೂದಲನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಕೂದಲನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ