Navarathri Special Dessert: ಹಬ್ಬಕ್ಕೆ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಮಖಾನ ಡ್ರೈ ಫ್ರೂಟ್ ಬರ್ಫಿ

ಹಬ್ಬ ಹರಿದಿನಗಳಲ್ಲಿ ಸಿಹಿ ತಿನಿಸು ಇರಲೇಬೇಕು. ಸದ್ಯಕ್ಕೆ ನವರಾತ್ರಿ ಹಬ್ಬ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಹಬ್ಬಕ್ಕೆ ಹೆಚ್ಚಿನವರು ಸಿಹಿತಿಂಡಿಯನ್ನು ಮನೆಯಲ್ಲಿಯೇ ತಯಾರಿಸಿ ಅಥವಾ ಮಾರುಕಟ್ಟೆಯಿಂದ ಖರೀದಿಸಿ ಆ ಸಿಹಿಯನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ. ಈ ಬಾರಿಯ ನವರಾತ್ರಿಯ ಹಬ್ಬಕ್ಕೆ ಮನೆಯಲ್ಲಿಯೇ ಸುಲಭವಾಗಿ ಮಖಾನ ಡ್ರೈ ಫ್ರೂಟ್ ಬರ್ಫಿ ತಯಾರಿಸಿ. ಈ ಸಿಹಿ ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು.

Navarathri Special Dessert: ಹಬ್ಬಕ್ಕೆ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಮಖಾನ ಡ್ರೈ ಫ್ರೂಟ್ ಬರ್ಫಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 18, 2023 | 10:08 AM

ಪ್ರತಿಯೊಂದು ಭಾರತೀಯ ಹಬ್ಬಗಳಲ್ಲೂ ಸಿಹಿ ತಿನಿಸು ಇರಲೇಬೇಕು. ಸದ್ಯಕ್ಕೆ ನಾವೆಲ್ಲರೂ ನವರಾತ್ರಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಹೆಚ್ಚಿನ ಜನರು ನವರಾತ್ರಿಯ ಸಮಯದಲ್ಲಿ ವ್ರತಾಚರಣೆಯನ್ನು ಮಾಡುತ್ತಾರೆ. ಅದೇ ರೀತಿ ಅನೇಕರ ಮನೆಯಲ್ಲಿ ಸಿಹಿ ಪದಾರ್ಥಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಕೆಲವರು ಸಿಹಿ ತಿನಿಸು ತಯಾರಿಸಲು ಸಮಯ ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಮಾರುಕಟ್ಟೆಯಿಂದ ಸಿಹಿ ಖರೀದಿಸುತ್ತಾರೆ. ಅದು ತಿನ್ನಲು ರುಚಿಕರವಾಗಿರುತ್ತದೆ ನಿಜ, ಆದರೆ ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಆದ್ದರಿಂದ ನೀವು ಮನೆಯಲ್ಲಿಯೇ ಆರೋಗ್ಯಕರ ಸಿಹಿಯನ್ನು ಸುಲಭವಾಗಿ ತಯಾರಿಸಬಹುದು.  ಆ ಸಿಹಿ ಯಾವುದೆಂದರೆ ಮಖಾನ ಡ್ರೈ ಫ್ರೂಟ್ಸ್ ಬರ್ಫಿ. ಒಣ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದೇ ರೀತಿ ಒಣ ಹಣ್ಣುಗಳಿಂದ ತಯಾರಿಸಿದ ಮಖಾನ ಬರ್ಫಿ ಕೂಡಾ  ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದರೆ ಮಾಖಾನ ಡ್ರೈ ಫ್ರೂಟ್ಸ್ ಬರ್ಫಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಮಖಾನ ಡ್ರೈ ಫ್ರೂಟ್ಸ್ ಬರ್ಫಿ ಮಾಡಲು ಬೇಕಾಗುವ ಸಾಮಾಗ್ರಿಗಳು:

• ಮಖಾನ ಬೀಜ – 5 ಕಪ್

• ಗೋಡಂಬಿ – 1 ಕಪ್

• ಒಣ ತೆಂಗಿನಕಾಯಿ ತುರಿ – 1 ಕಪ್

• ಹಸಿರು ಏಲಕ್ಕಿ – 4

• ಕೆನೆಭರಿತ ಹಾಲು- 1ಲೀಟರ್

• ಸಕ್ಕರೆ – 1 ಕಪ್ (ನಿಮ್ಮ ರುಚಿಗೆ ಅನುಗುಣವಾಗಿ)

• ಬಾದಾಮಿ ಚೂರು – 2 ಸ್ಪೂನ್

• ಪಿಸ್ತಾ ಚೂರು – 2 ಸ್ಪೂನ್

• ತುಪ್ಪ

ಇದನ್ನೂ ಓದಿ: ಕರಾವಳಿ ಕರ್ನಾಟಕದ ನವರಾತ್ರಿ ಹಬ್ಬದಲ್ಲಿ ಹುಲಿಕುಣಿತ  ಪ್ರಮುಖ ಆಕರ್ಷಣೆ, ಇದರ ವಿಶೇಷತೆಗಳೇನು? 

ಮಖಾನ ಡ್ರೈ ಫ್ರೂಟ್ಸ್ ಬರ್ಫಿ ಮಾಡುವ ಸುಲಭ ವಿಧಾನ:

• ಬರ್ಫಿ ಮಾಡಲು ಮೊದಲಿಗೆ ಗ್ಯಾಸ್ ಒಲೆ ಮೇಲೆ ಒಂದು ಪ್ಯಾನ್ ಇಟ್ಟು, ಅದು ಸ್ವಲ್ಪ ಬಿಸಿಯಾದ ಬಳಿಕ ಅದಕ್ಕೆ ಮಖಾನ ಬೀಜಗಳನ್ನು ಹಾಕಿ, ಅದು ಗರಿಗರಿಯಾಗುವವರೆಗೆ ಹುರಿದುಕೊಳ್ಳಿ, ಬಳಿಕ ಅದನ್ನು ಒಂದು ತಟ್ಟೆಯಲ್ಲಿ ಹಾಕಿ ತಣ್ಣಗಾಗಲು ಬಿಟ್ಟು ಬಿಡಿ.

• ಮಖಾನ ಬೀಜಗಳು ತಣ್ಣಗಾದ ಬಳಿಕ ಅದನ್ನು ಮಿಕ್ಸಿಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ತಟ್ಟೆಗೆ ಹಾಕಿಕೊಳ್ಳಿ. ಈಗ ಅದೇ ಮಿಕ್ಸಿಜಾರಿಗೆ ಗೋಡಂಬಿಯನ್ನು ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಅದನ್ನು ಕೂಡಾ ಮಖಾನ ಪುಡಿಯೊಂದಿಗೆ ಸೇರಿಸಿಕೊಳ್ಳಿ.

• ಇದಾದ ನಂತರ ಗ್ಯಾಸ್ ಒಲೆ ಮೇಲೆ ಪ್ಯಾನ್ ಇಟ್ಟು, ಕಾದ ಬಳಿಕ ಅದಕ್ಕೆ ಒಣ ಕೊಬ್ಬರಿ ತುರಿಯನ್ನು ಸೇರಿಸಿ ಹುರಿದುಕೊಳ್ಳಿ, ಚೆನ್ನಾಗಿ ಹುರಿದ ಬಳಿಕ ಅದಕ್ಕೆ ಮಖಾನ ಹಾಗೂ ಗೋಡಂಬಿ ಪುಡಿಯನ್ನು ಕೂಡಾ ಸೇರಿಸಿಕೊಳ್ಳಿ. ಹಾಗೂ ಅದಕ್ಕೆ ತರಿತರಿಯಾಗಿ ಕುಟ್ಟಿ ಪುಡಿ ಮಾಡಿದ  ಏಲಕ್ಕಿಯನ್ನು ಕೂಡ ಸೇರಿಸಿಕೊಳ್ಳಿ ಹಾಗೂ ಗ್ಯಾಸ್ ಆಫ್ ಮಾಡಿಕೊಳ್ಳಿ ಮತ್ತು ಒಂದು ಪ್ಲೇಟ್ ಅಥವಾ ಟ್ರೇಗೆ ತುಪ್ಪ ಸವರಿ ಇಟ್ಟುಕೊಳ್ಳಿ.

• ಈಗ ಇನ್ನೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಹಾಲನ್ನು ಹಾಕಿ, ಹಾಲು ಪಾತ್ರೆಯಲ್ಲಿ ಅರ್ಧ ಆವಿಯಾಗುವವರೆಗೆ ಕುದಿಸಿಕೊಳ್ಳಿ. ಹಾಲು ಸ್ವಲ್ಪ ಗಟ್ಟಿಯಾದ  ಬಳಿಕ ಅದಕ್ಕೆ ನಿಮ್ಮ ಸಿಹಿಗೆ ಅನುಗುಣವಾಗಿ ಸಕ್ಕರೆಯನ್ನು ಹಾಕಿ ಸಕ್ಕರೆ ಕರಗುವವರೆಗೆ ಕೈಯಾಡಿಸುತ್ತಾ, ಈ ಮಿಶ್ರಣವನ್ನು ಬೆರೆಸಿಕೊಳ್ಳಿ.

• ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ ಅದಕ್ಕೆ ತುಪ್ಪ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹಾಗೂ ಅದಕ್ಕೆ ಮೊದಲೇ ಹುರಿದು ತಯಾರಿಸಿಟ್ಟ, ಕೊಬ್ಬರಿ, ಮಖಾನ, ಗೋಡಂಬಿ ಪುಡಿ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಬೇಯಿಸಿಕೊಳ್ಳಿ ಅಂದರೆ ಪಾತ್ರೆಯಲ್ಲಿನ ಹಾಲಿನಂಶ ಆವಿಯಾಗುವವರೆಗೆ ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು ಬೇಯಿಸಿಕೊಳ್ಳಿ.

• ಬರ್ಫಿ ಮಿಶ್ರಣ ದಪ್ಪದಾದ ಬಳಿಕ ಸ್ವವ್ ಆಫ್ ಮಾಡಿ, ಮೊದಲೇ ತುಪ್ಪ ಸವರಿಟ್ಟ ಟ್ರೇ ಮೇಲೆ ಬರ್ಫಿ ಮಿಶ್ರಣವನ್ನು ಹಾಕಿ  ಅದನ್ನು ಚೆನ್ನಾಗಿ ಹರಡಿಕೊಳ್ಳಿ.  ನಂತರ ಇದರ ಮೇಲೆ ಬಾದಮಿ ಹಾಗೂ ಪಿಸ್ತಾ ಚೂರುಗಳನ್ನು ಹಾಕಿ, ಹಾಗೂ ನಂತರ ಇದನ್ನು ತಣ್ಣಗಾಗಲು ಫ್ರಿಜ್​​ನಲ್ಲಿ ಇರಿಸಿ.

• ಬರ್ಫಿ ತಣ್ಣಗಾದ ಬಳಿಕ, ಅದನ್ನು ಹೊರತೆಗೆದ ಬರ್ಫಿ ಆಕಾರದಲ್ಲಿ ಕತ್ತರಿಸಿ. ಈ ರೀತಿಯಾಗಿ ರುಚಿಕರವಾದ ಮಖಾನ ಡ್ರೈ ಫ್ರೂಟ್ಸ್ ರೆಸಿಪಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:50 pm, Tue, 17 October 23