
ಗೋಡೆಯ (walls) ಮೇಲೆ ಕಲೆಗಳಿದ್ದರೆ, ಇದರಿಂದ ಮನೆಯ ಅಂದವೇ ಹಾಳಾಗಿಬಿಡುತ್ತದೆ. ಮಳೆಗಾಲದಲ್ಲಿ, ಗೋಡೆಗಳು ತೇವಾಂಶದಿಂದಾಗಿ ಒದ್ದೆಯಾಗುತ್ತವೆ, ಇದು ಕಲೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ ಹೊಗೆ, ಎಣ್ಣೆಯ ಕಲೆಗಳು ಮತ್ತು ಮಸಾಲೆಗಳಿಂದಾಗಿ ಅಡುಗೆಮನೆಯ ಗೋಡೆಗಳು ಕೆಟ್ಟದಾಗಿ ಕಾಣಲು ಪ್ರಾರಂಭಿಸುತ್ತವೆ. ಇನ್ನೂ ಮಕ್ಕಳು ಪೆನ್ಸಿಲ್, ವಿವಿಧ ಬಣ್ಣಗಳಿಂದ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಾರೆ. ಇದರಿಂದಲೂ ಗೋಡೆಯ ಸೌಂದರ್ಯ ಹಾಳಾಗುತ್ತದೆ. ಇದನ್ನು ತೊಡೆದುಹಾಕಲು ಹೆಚ್ಚಿನವರು ಪ್ರತಿ ಬಾರಿ ಪೈಂಟ್ ಮಾಡುತ್ತಾರೆ. ಹಾಗೆ ಮಾಡುವುದರಿಂದ ಬಹಳಷ್ಟು ಹಣ ಖರ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಮನೆಮದ್ದುಗಳ ಸಹಾಯದಿಂದ ಗೋಡೆಯ ಮೇಲಿನ ಕಲೆಗಳನ್ನು ಸುಲಭವಾಗಿ ನಿವಾರಿಸಬಹುದು.
ಗೋಡೆಯ ಮೇಲಿನ ಕಲೆಗಳನ್ನು ನಿವಾರಿಸಲು ಅಡಿಗೆ ಸೋಡಾ ತುಂಬಾನೇ ಸಹಕಾರಿ. ಒಂದು ಟೀಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮೃದುವಾದ ಬಟ್ಟೆ ಅಥವಾ ಸ್ಪಂಜನ್ನು ಬಳಸಿ ಕಲೆ ಇರುವ ಜಾಗಕ್ಕೆ ನಿಧಾನವಾಗಿ ಉಜ್ಜಿ. ನಂತರ ಒಣ ಬಟ್ಟೆಯಿಂದ ಒರೆಸಿ. ಇದರಿಂದ ಪೆನ್ಸಿಲ್ ಮತ್ತು ಕ್ರಯೋನ್ ಗುರುತುಗಳು ನಿಮಿಷಗಳಲ್ಲಿ ಮಾಯವಾಗುತ್ತವೆ.
ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರು, ಎರಡು ಕಪ್ ವಿನೆಗರ್ ಮತ್ತು ನಿಂಬೆಯ ಸಾರಭೂತ ತೈಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಬಕೆಟ್ ನೀರಿಗೆ ಈ ಮಿಶ್ರಣವನ್ನು ಸೇರಿಸಿ, ಮೈಕ್ರೋಫೈಬರ್ ಬಟ್ಟೆಯನ್ನು ಅದ್ದಿ, ಅದನ್ನು ಕಲೆಯಿರುವ ಜಾಗಕ್ಕೆ ಚೆನ್ನಾಗಿ ತಿಕ್ಕಿ. ಇದು ಗೋಡೆಯ ಮೇಲಿನ ಕಲೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಟೂತ್‌ಪೇಸ್ಟ್ ಕೇವಲ ಹಲ್ಲುಗಳಿಗೆ ಮಾತ್ರವಲ್ಲ, ಗೋಡೆಗಳಿಂದ ಕಲೆಗಳನ್ನು ತೆಗೆದುಹಾಕಲು ಸಹ ಪರಿಣಾಮಕಾರಿಯಾಗಿದೆ. ಸ್ವಲ್ಪ ಪ್ರಮಾಣದ ಟೂತ್‌ಪೇಸ್ಟ್ ಅನ್ನು ಕಲೆಯಿರುವ ಜಾಗಕ್ಕೆ ಹಚ್ಚಿ ಮತ್ತು ಒದ್ದೆಯಾದ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಪೆನ್ಸಿಲ್, ಕ್ರಯೋನ್ ಮತ್ತು ಸ್ಕೆಚ್ ಪೆನ್ ಗುರುತುಗಳನ್ನು ತೆಗೆದುಹಾಕಲು ಈ ವಿಧಾನವು ತುಂಬಾ ಪರಿಣಾಮಕಾರಿ.
ಇದನ್ನೂ ಓದಿ: ಕಿಚನ್ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಈ ಮನೆಮದ್ದುಗಳು ಸಹಕಾರಿ
ವಿನೆಗರ್ ಮತ್ತು ನಿಂಬೆಹಣ್ಣಿನ ಮಿಶ್ರಣವು ಗೋಡೆಗಳನ್ನು ಸ್ವಚ್ಛಗೊಳಿಸಲು ತುಂಬಾ ಉಪಯುಕ್ತವಾಗಿದೆ. ಸ್ಪ್ರೇ ಬಾಟಲಿಯಲ್ಲಿ ಸಮಾನ ಪ್ರಮಾಣದಲ್ಲಿ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ. ಕಲೆ ಇರುವ ಜಾಗಕ್ಕೆ ಸಿಂಪಡಿಸಿ ಮತ್ತು ಕೆಲವು ನಿಮಿಷಗಳ ನಂತರ ಒಣ ಬಟ್ಟೆಯಿಂದ ಒರೆಸಿ. ಕಲೆ ತೀರಾ ಹಳೆಯದಾಗಿದ್ದರೆ, ನೀವು ನಿಂಬೆ ರಸವನ್ನು ಸೇರಿಸಬಹುದು.
ಗೋಡೆಯ ಮೇಲಿನ ಸಣ್ಣ ಕಲೆಗಳನ್ನು ನಿವಾರಿಸಲು ಸೌಮ್ಯವಾದ ಸೋಪ್ ಅನ್ನು ಬಳಸಬಹುದು. ಒಂದು ಪಾತ್ರೆಗೆ ಉಗುರು ಬೆಚ್ಚಗಿನ ನೀರು ಮತ್ತು ಸೌಮ್ಯವಾದ ಸೋಪ್ ಅಥವಾ ಡಿಟರ್ಜೆಂಟ್ ಲಿಕ್ವಿಡ್ ಹಾಕು ಅದರಲ್ಲಿ ಮೃದುವಾದ ಬಟ್ಟೆಯನ್ನು ನೆನೆಸಿ, ಬಟ್ಟೆಯಲ್ಲಿ ಕಲೆಯಾದ ಪ್ರದೇಶವನ್ನು ನಿಧಾನವಾಗಿ ಉಜ್ಜಿ, ನಂತರ ಸ್ವಚ್ಛವಾದ, ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದು ಕಲೆಗಳನ್ನು ನಿವಾರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ